ನವ ದೆಹಲಿ: ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಹೊಂದಿರುವ ಹಣದ ಬಗ್ಗೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಸಚಿವರು, ಭಾರತೀಯ ನಾಗರಿಕರು ಮತ್ತು ಕಂಪನಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳ ಬಗ್ಗೆ ಅಧಿಕೃತ ಹಾಗೂ ನಿಖರ ಮಾಹಿತಿ ಲಭ್ಯವಿಲ್ಲ. ಹೀಗಿದ್ದರೂ, ೨೦೨೦ಕ್ಕೆ ಹೋಲಿಸಿದರೆ ೨೦೨೧ರಲ್ಲಿ ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುನ ಹಣದ ಮೊತ್ತ ಏರಿಕೆಯಾಗಿದೆ ಎಂಬ ಕೆಲ ಮಾಧ್ಯಮ ವರದಿಗಳಿವೆ ಎಂದರು.
ಸ್ವಿಸ್ ನ್ಯಾಷನಲ್ ಬ್ಯಾಂಕ್ ವರದಿ ಆಧಾರವಲ್ಲ
ಮಾಧ್ಯಮಗಳ ವರದಿಗಳ ಪ್ರಕಾರ ಇದು ಕಪ್ಪುಹಣದ ಲೆಕ್ಕವೂ ಅಲ್ಲ. ಠೇವಣಿ ಹಣದ ಮೌಲ್ಯವವಾಗಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ ಪ್ರಕಟಿಸುವ ವಾರ್ಷಿಕ ವರದಿಯ ಅಂಕಿ ಅಂಶಗಳನ್ನು ಭಾರತೀಯರು ಸ್ವಿಜರ್ಲೆಂಡ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳ ವಿಶ್ಲೇಷಣೆಗೆ ಬಳಸಬಾರದು ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿರುವುದಾಗಿ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
೨೦೨೧ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಹೆಚ್ಚಳ
ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ವರದಿಗಳ ಪ್ರಕಾರ, ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಜಮೆ ಮಾಡಿರುವ ಹಣದ ಮೊತ್ತ ಮತ್ತೆ ಏರುತ್ತಿದೆ. ೨೦೨೦ರಲ್ಲಿ ಈ ಹಣದ ಒಟ್ಟು ಮೊತ್ತ ೨೦,೭೦೦ ಕೋಟಿ ರೂ. ಜಮೆಯಾಗಿದ್ದರೆ, ೨೦೨೧ರಲ್ಲಿ ೩೦,೫೦೦ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಕಳೆದ ೧೪ ವರ್ಷಗಳಲ್ಲಿಯೇ ಅಧಿಕ ಎಂದು ವರದಿಯಾಗಿತ್ತು. ಸ್ವಿಸ್ ನ್ಯಾಷನಲ್ ಬ್ಯಾಂಕ್‌ನ ಅಂಕಿ ಅಂಶಗಳನ್ನು ಆಧರಿಸಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿತ್ತು. ಆದರೆ ಈ ವರದಿಗಳು ಭಾರತೀಯರು ಇಟ್ಟಿರುವ ಹಣದ ನಿಖರ ಮಾಹಿತಿಗಳಲ್ಲ ಎಂದು ಸ್ವಿಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.