ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಸಿಪ್ ಎಂಬ ಪದ ಪರಿಚಿತ. ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ( Systematic Investment plan – SIP ) ಮೂಲಕ ಅತ್ಯಂತ ಸ್ಮಾರ್ಟ್ ಆಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾ ಹೋದರೆ, ಭವಿಷ್ಯದಲ್ಲಿ ಉತ್ತಮ ಸಂಪತ್ತನ್ನು ಸೃಷ್ಟಿಸಬಹುದು. ಶಿಕ್ಷಣ, ಮಕ್ಕಳ ವಿವಾಹ, ತುರ್ತು ಸಂದರ್ಭಕ್ಕೆ ಬೇಕಾಗುವ ನಿಧಿ, ವಿದೇಶ ಪ್ರವಾಸ, ಮನೆ ನಿರ್ಮಾಣ, ಕಾರು ಸಾಲದ ಡೌನ್ ಪೇಮೆಂಟ್, ನಿವೃತ್ತಿಯ ಆರ್ಥಿಕ ಭದ್ರತೆ ಸೇರಿದಂತೆ ಬದುಕಿನ ಎಲ್ಲ ಗುರಿಗಳನ್ನು ಈಡೇರಿಸಬಹುದು. ಮ್ಯೂಚುವಲ್ ಫಂಡ್ ಸಿಪ್‌ನ ವಿಶೇಷತೆ ಏನೆಂದರೆ ಕನಿಷ್ಠ 500 ರೂ.ಗಳ ಸಿಪ್ ಮೂಲಕವೂ ಹೂಡಿಕೆಯನ್ನು ನೀವು ಆರಂಭಿಸಬಹುದು.
ಸಿಪ್ ಅನ್ನು ಪ್ರತಿ ವಾರ, ಮಾಸಿಕ, ತ್ರೈಮಾಸಿಕ ಇತ್ಯಾದಿ ಲೆಕ್ಕದಲ್ಲಿ ನಿಯಮಿತವಾಗಿ ಆರಂಭಿಸಬಹುದು. ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಹೆಚ್ಚಿಸುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ. ಸಿಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡೋಣ.
ಸಿಪ್‌ನ ವಿಷಯದಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಅವಧಿಗೆ ನಿಯಮಿತವಾಗಿ ಹೂಡಿಕೆಯ ಹಣ ಕಡಿತವಾಗುತ್ತದೆ. ಖಾತೆದಾರರೇ ಸಿಪ್ ಪ್ರಕ್ರಿಯೆಯನ್ನು ಕೈಗೊಳ್ಳಲೂ ಅವಕಾಶ ಇದೆ. ಆದರೆ ಆಟೊಮ್ಯಾಟಿಕ್ ಆಗಿದ್ದರೆ ಉತ್ತಮ. ಇನ್ವೆಸ್ಟ್ ಮಾಡುವ ದಿನದ ಎನ್ ಎವಿ ಆಧರಿಸಿ ಮ್ಯೂಚುವಲ್ ಫಂಡ್ ಯುನಿಟ್‌ಗಳು ದೊರೆಯುತ್ತವೆ.
ಪ್ರತಿಯೊಂದು ಕಂತಿನ ಹೂಡಿಕೆಗೂ ಮ್ಯೂಚುವಲ್ ಫಂಡ್ ಯೋಜನೆಯ ಹೆಚ್ಚುವರಿ ಯುನಿಟ್‌ಗಳು ನಿಮ್ಮ ಖಾತೆಗೆ ಸೇರುತ್ತವೆ. ಯುನಿಟ್‌ಗಳ ದರಗಳು ಭಿನ್ನವಾಗಿರುವುದರಿಂದ ದೀರ್ಘಕಾಲೀನವಾಗಿ ರೂಪಾಯಿ-ಕಾಸ್ಟ್ ಅವರೇಜಿಂಗ್‌ನ ಅನುಕೂಲ ಸಿಗುತ್ತದೆ. ನಿಯಮಿತ ಹೂಡಿಕೆಯ ಕಂಪೌಂಡಿಂಗ್ ಪವರ್‌ನಿಂದಲೂ ಲಾಭವಾಗುತ್ತದೆ. ಸಿಪ್‌ನಲ್ಲಿ ಹೂಡಿಕೆದಾರರು ಪ್ರತಿ ತಿಂಗಳೂ ಹೂಡಿಕೆ ಮಾಡುವುದರಿಂದಾಗಿ ಮಾರುಕಟ್ಟೆ ಪತನವಾಗಿದ್ದಾಗ ಖರೀದಿಸುವ ಯುನಿಟ್‌ಗಳ ಸಂಖ್ಯೆಯೂ ಹೆಚ್ಚುತ್ತದೆ. ಅದೇ ರೀತಿ ಮಾರುಕಟ್ಟೆ ಜಿಗಿದಾಗ ಯುನಿಟ್ ಸಂಖ್ಯೆ ಕಡಿಮೆಯಾಗುತ್ತದೆ. ಇದರ ಪರಿಣಾಮ ಯುನಿಟ್‌ಗಳ ಸಂಪಾದನೆಗೆ ತಗಲುವ ಸರಾಸರಿ ವೆಚ್ಚದಲ್ಲಿ ಇಳಿಕೆಯಾಗುತ್ತದೆ.
ಇದನ್ನೂ ಓದಿ :Money Guide : ತೆರಿಗೆ ಉಳಿಸಲು ಮತ್ತೊಂದು ಮನೆ ಖರೀದಿಸುವುದು ಸೂಕ್ತವೇ?
ಮ್ಯೂಚುವಲ್ ಫಂಡ್‌ಗಳಲ್ಲಿ ಲಂಪ್ಸಮ್ ಆಗಿಯೂ ಹೂಡಿಕೆ ಮಾಡಬಹುದು. ಆದರೆ ಅದು ಎಲ್ಲರಿಗೂ ಸಾಧ್ಯವಾಗದೆ ಇರಬಹುದು. ಸಿಪ್‌ನಲ್ಲಿ ಹೂಡಿಕೆಯನ್ನು ಸಣ್ಣ ಮೊತ್ತದಿಂದ ಶುರು ಮಾಡಬಹುದು. ಮಾತ್ರವಲ್ಲದೆ, ನೀವು ಬಯಸಿದರೆ ಸಿಪ್ ಮೊತ್ತವನ್ನೂ ಹೆಚ್ಚಿಸುತ್ತಾ ಹೋಗಬಹುದು. ಏಕ ಕಾಲಕ್ಕೆ ಹಲವಾರು ಮ್ಯೂಚುವಲ್ ಫಂಡ್ ಗಳಲ್ಲಿ ಸಿಪ್ ಮೂಲಕ ಹೂಡಿಕೆ ಮಾಡಬಹುದು. ಆದರಿಂದ ನಿಮ್ಮ ಹೂಡಿಕೆಯ ಗುರಿಗಳನ್ನು ಸುಲಭವಾಗಿ ಈಡೇರಿಸಬಹುದು. ಸಿಪ್‌ನಲ್ಲಿ ನಿಮಗೆ ಎಷ್ಟು ವರ್ಷ ಬೇಕಾದರೂ ಇನ್ವೆಸ್ಟ್ ಮಾಡುತ್ತಾ ಹೋಗಬಹುದು.
ಸಿಪ್ ಮೂಲಕ ಇನ್ವೆಸ್ಟ್ ಮಾಡಲು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನಿಮ್ಮ ಭಾವ ಚಿತ್ರ, ವಿಳಾಸ ಮತ್ತು ಗುರುತಿನ ದೃಢೀಕರಣ ಬೇಕು. ಇ-ಕೆವೈಸಿ ಆಯ್ಕೆ ಕೂಡ ಲಭ್ಯ. ಎಎಂಸಿಗೆ ಭೇಟಿ ನೀಡದೆ ಆನ್ ಲೈನ್ ಮೂಲಕವೇ ಈ ಪ್ರಕ್ರಿಯೆಗಳನ್ನು ನೀವು ಪೂರ್ಣಗೊಳಿಸಬಹುದು.
ಹೀಗಿದ್ದರೂ ಸಿಪ್ ಆರಂಭಿಸುವುದಕ್ಕೆ ಮುನ್ನ ಹೂಡಿಕೆಯ ಅವಧಿಯನ್ನು ನಿರ್ಧರಿಸಿ. ಹೂಡಿಕೆಯ ಫ್ರೀಕ್ವೆನ್ಸಿ ನಿಗದಿಪಡಿಸಿ. ಮೊತ್ತವನ್ನೂ ಅಂದಾಜಿಸಿ. ನೀವು ಸಿಪ್ ಪೇಮೆಂಟ್ ಅನ್ನು ತಪ್ಪಿದರೂ ಖಾತೆ ನಿಷ್ಕ್ರಿಯವಾಗುವುದಿಲ್ಲ. ನೀವು ತೆರಿಗೆ ಅನುಕೂಲವನ್ನೂ ಪಡೆಯಲು ಬಯಸಿದರೆ ಇಎಲ್‌ಎಸ್‌ಎಸ್ ( ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ಸ್) ಅಡಿಯಲ್ಲಿ ಸಿಪ್ ಮೂಲಕ ಹೂಡಿಕೆ ಮಾಡಬಹುದು. ಇಲ್ಲಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ಟ್ಯಾಕ್ಸ್ ಬೆನಿಫಿಟ್ ಸಿಗುತ್ತದೆ.