ನವದೆಹಲಿ: ಇದೇ ಮೊದಲ ಬಾರಿಗೆ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಜತೆಗೆ ಮಹಾ ಕವಿ ರವೀಂದ್ರ ನಾಥ್ ಠಾಗೋರ್ ಹಾಗೂ ಕ್ಷಿಪಣಿ ಪಿತಾಮಹ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಅಳವಡಿಸಲು ಆರ್‌ಬಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಕುರಿತ ವರದಿಗಳಿಗೆ ಆರ್‌ಬಿಐ ಪ್ರತಿಕ್ರಿಯಿಸಿದ್ದು, ಗಾಂಧಿಜಿಯವರ ವಾಟರ್ ಮಾರ್ಕ್ ಬದಲಿಸುವ ಪ್ರಸ್ತಾಪ ಇಲ್ಲ ಎಂದು ತಿಳಿಸಿದೆ.
ಇದುವರೆಗೆ ಗಾಂಧಿಜಿಯವರ ಭಾವಚಿತ್ರ ಮಾತ್ರ ನೋಟುಗಳಲ್ಲಿ ವಾಟರ್ ಮಾರ್ಕ್ ಆಗಿ ಬಳಕೆಯಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಇತರ ಗಣ್ಯರ ಚಿತ್ರಗಳನ್ನೂ ವಾಟರ್ ಮಾರ್ಕ್ ಆಗಿ ಬಳಸಲು ಆರ್ ಬಿಐ ಚಿಂತನೆ ನಡೆಸಿದೆ. ಮುಂಬರುವ ಕೆಲವು ಹೊಸ ಶ್ರೇಣಿಯ ನೋಟುಗಳಲ್ಲಿ ಈ ಹೊಸ ಪದ್ಧತಿ ಜಾರಿಯಾಗುವ ನಿರೀಕ್ಷೆ ಇದೆ.
ಆರ್‌ಬಿಐ ಗಾಂಧಿ, ಠಾಗೋರ್ ಮತ್ತು ಕಲಾಂ ಅವರ ಎರಡು ಪ್ರತ್ಯೇಕ ಸೆಟ್ ವಾಟರ್ ಮಾರ್ಕ್‌ಗಳನ್ನು ಐಐಟಿ ದಿಲ್ಲಿಯ ವಿಶ್ರಾಂತ ಪ್ರೊಫೆಸರ್ ದಿಲೀಪ್ ಟಿ ಸಾಹ್ನಿ ಅವರಿಗೆ ಕಳಿಸಿದೆ. ಅವರು ಆಯ್ಕೆ ಮಾಡುವ ವಾಟರ್ ಮಾರ್ಕ್ ಅನ್ನು ಸರಕಾರದ ಪರಿಶೀಲನೆಗೆ ಆರ್‌ಬಿಐ ಕಳಿಸುವ ಸಾಧ್ಯತೆ ಇದೆ. ಅಂತಿಮವಾಗಿ ಸರಕಾರದ ಉನ್ನತ ಮಟ್ಟದ ಸಮಾಲೋಚನೆ ಬಳಿಕ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಸರಕಾರ ನೋಟುಗಳಲ್ಲಿ ಗಾಂಧಿಯವರ ಜತೆಗೆ ದೇಶಕ್ಕೆ ಸೇವೆ ಸಲ್ಲಿಸಿದ ಇತರ ಗಣ್ಯರ ಭಾವಚಿತ್ರಗಳನ್ನೂ ಅಳವಡಿಸುವ ನಿರೀಕ್ಷೆ ಉಂಟಾಗಿದೆ. ಪ್ರೊಫೆಸರ್ ಸಾಹ್ನಿ ಅವರು ಎಲೆಕ್ಟ್ರೊಮ್ಯಾಗ್ನಟಿಕ್ ಇನ್‌ಸ್ಟ್ರುಮೆಂಟೇಶನ್ ವಿಷಯದಲ್ಲಿ ತಜ್ಞರಾಗಿದ್ದಾರೆ.
ವಿದೇಶಗಳಲ್ಲಿ ಚಾಲ್ತಿಯಲ್ಲಿದೆ ಇಂಥ ಪದ್ಧತಿ
ಅಮೆರಿಕದಲ್ಲಿ ಕರೆನ್ಸಿ ನೋಟುಗಳಲ್ಲಿ ಜಾರ್ಜ್ ವಾಷಿಂಗ್ಟನ್, ಬೆಂಜಮಿನ್ ಫ್ರಾಂಕ್ಲಿನ್, ಥಾಮಸ್ ಜೆಫರ್‌ಸನ್, ಆಂಡ್ರೂ ಜಾಕ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮುಂತಾದ 19ನೇ ಶತಮಾನದ ಅಮೆರಿಕ ಅಧ್ಯಕ್ಷರುಗಳ ಚಿತ್ರವನ್ನು ಬಳಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ 2017ರಲ್ಲಿ ಆರ್‌ಬಿಐನ ಆಂತರಿಕ ಸಮಿತಿಯೊಂದಕ್ಕೆ ಹೊಸ ಶ್ರೇಣಿಯ ನೋಟುಗಳಲ್ಲಿ ಗಾಂಧಿ ಹೊರತುಪಡಿಸಿ ಇತರ ಗಣ್ಯರ ಚಿತ್ರ ಅಳವಡಿಸುವ ಬಗ್ಗೆ ಶಿಫಾರಸು ಸಲ್ಲಿಸಲು ಸೂಚಿಸಲಾಗಿತ್ತು. ಈ ಸಮಿತಿ ಠಾಗೋರ್ ಮತ್ತು ಕಲಾಂ ಹೆಸರನ್ನು ತನ್ನ ವರದಿಯಲ್ಲಿ ಸಲ್ಲಿಸಿತ್ತು. 2020ರಲ್ಲಿ ಈ ವರದಿ ನೀಡಲಾಗಿತ್ತು. 2000 ರೂ. ನೋಟು ಹೊರತುಪಡಿಸಿ ಉಳಿದ ನೋಟುಗಳನ್ನು ಇದನ್ನು ಅಳವಡಿಸಲು ಚಿಂತನೆ ನಡೆದಿತ್ತು. ಈಗ 2000 ನೋಟುಗಳ ಮುದ್ರಣ ಸ್ಥಗಿತವಾಗಿದೆ.
2021ರಲ್ಲಿ ಆರ್‌ಬಿಐ ಮೈಸೂರು ಮೂಲದ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ್ ಸಂಸ್ಥೆಗೆ ತನ್ನದೇ ವಾಟರ್ ಮಾರ್ಕ್ ಸ್ಯಾಂಪಲ್ ರಚಿಸಲು ತಿಳಿಸಿತ್ತು. ಸಾಹ್ನಿ ಅವುಗಳನ್ನು ಪರಿಶೀಲಿಸಿದ್ದರು. ಸಮಾಲೋಚಿಸಿದ್ದರು ಎಂದು ವರದಿಯಾಗಿದೆ.