Site icon Vistara News

Evergreen bonus | ತೈವಾನ್‌ ಮೂಲದ ಶಿಪ್ಪಿಂಗ್‌ ಕಂಪನಿಯ ಉದ್ಯೋಗಿಗಳಿಗೆ 4 ವರ್ಷದ ಸಂಬಳದಷ್ಟು ಬೋನಸ್!

evergreen

ತೈಪೆ : ಯಾರಿಗೆ ಬೋನಸ್‌ ಎಂದರೆ ಇಷ್ಟವಾಗುವುದಿಲ್ಲ? ಆದರೆ ಕಂಪನಿಯಲ್ಲಿ ಬರೋಬ್ಬರಿ 4 ವರ್ಷದ ಸಂಬಳಕ್ಕೆ ಸಮವಾಗುವಷ್ಟು ಭಾರಿ ಮೊತ್ತದ ಬೋನಸ್‌ ಸಿಕ್ಕಿದರೆ ಉದ್ಯೋಗಿಗಳಿಗೆ ಎಷ್ಟು ಸಂತಸವಾಗದಿರಬೇಡ, ಅಲ್ಲವೇ! ಹೌದು, ತೈವಾನ್‌ ಮೂಲದ ಶಿಪ್ಪಿಂಗ್‌ ಕಂಪನಿ ಎವರ್‌ಗ್ರೀನ್‌ ಮರೀನ್‌ ಕಾರ್ಪೊರೇಷನ್‌ (Evergreen bonus) 2022ರ ವರ್ಷಾಂತ್ಯದಲ್ಲಿ ತನ್ನ ಉದ್ಯೋಗಿಗಳಿಗೆ 4 ವರ್ಷದ ಸಂಬಳದಷ್ಟು ಬೋನಸ್‌ ಅನ್ನು ವಿತರಿಸಿದೆ ಎಂದು ಬ್ಲೂಮ್‌ ಬರ್ಗ್‌ ವರದಿ ತಿಳಿಸಿದೆ.

ಉದ್ಯೋಗಿಗಳಿಗೆ 50 ತಿಂಗಳಿನ ವೇತನಕ್ಕೆ ಸಮವಾಗುವಷ್ಟು ವಾರ್ಷಿಕ ಬೋನಸ್‌ ನೀಡಿದೆ. ಅಂದರೆ ನಾಲ್ಕು ವರ್ಷಕ್ಕೂ ಹೆಚ್ಚು. ಕಂಪನಿಯ ಹಾಗೂ ಉದ್ಯೋಗಿಗಳ ಸಾಧನೆಗೆ ಅನುಗುಣವಾಗಿ ಈ ಬೋನಸ್‌ ನೀಡಲಾಗಿದೆ ಎಂದು ಎವರ್‌ಗ್ರೀನ್‌ ತಿಳಿಸಿದೆ. ತೈಪೆಯ ಪತ್ರಿಕೆಯ ಪ್ರಕಾರ ಕೆಲ ಉದ್ಯೋಗಿಗಳು 54 ಲಕ್ಷ ರೂ.ಗೂ ಹೆಚ್ಚು ಬೋನಸ್‌ ಗಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಹಡಗು ಉದ್ದಿಮೆ ವಲಯದಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದ್ದು, ಕಂಪನಿ 2022ರಲ್ಲಿ 1702 ಕೋಟಿ ರೂ. ಆದಾಯ ಗಳಿಸಿದೆ. 2020ಕ್ಕೆ ಹೋಲಿಸಿದರೆ ವ್ಯಾಪಾರ ಮೂರು ಪಟ್ಟು ವೃದ್ಧಿಸಿದೆ.

ಹೀಗಿದ್ದರೂ ಎವರ್‌ಗ್ರೀನ್‌ನ ಎಲ್ಲ ಸಿಬ್ಬಂದಿಗೂ ಭರ್ಜರಿ ಬೋನಸ್‌ ಸಿಕ್ಕಿಲ್ಲವಂತೆ. ಶಾಂಘೈ ಮೂಲದ ಉದ್ಯೋಗಿಗಳಿಗೆ ತಾರತಮ್ಯ ಆಗಿದೆ ಎಂಬ ಆರೋಪವೂ ಇದೆ ಎಂದು ವರದಿಯಾಗಿದೆ.

ಜಾಗತಿಕ ಆರ್ಥಿಕ ಮಂದಗತಿ, ಸರಕು ಸಾಗಣೆಯ ದರ ಇಳಿಕೆ ಇತ್ಯಾದಿ ನಕಾರಾತ್ಮಕ ಸುದ್ದಿಗಳ ನಡುವೆ ಎವರ್‌ಗ್ರೀನ್‌ ಮರೀನ್‌ ತನ್ನ ಸಿಬ್ಬಂದಿಗೆ ದೊಡ್ಡ ಮಟ್ಟಿನ ಬೋನಸ್‌ ವಿತರಿಸಿ ಸುದ್ದಿಯಲ್ಲಿದೆ. 2020ರಲ್ಲಿ ಕಂಪನಿಯ ಷೇರಿ ದರ 54% ಕುಸಿದಿತ್ತು. 2021ರಲ್ಲಿ 250% ಏರಿಕೆ ದಾಖಲಿಸಿತ್ತು.

ಸುಯೇಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು: ಎವರ್‌ಗ್ರೀನ್‌ನ ಹಡಗೊಂದು 2021ರ ಆದಿಯಲ್ಲಿ ಸುಯೇಜ್‌ ಕಾಲುವೆಯಲ್ಲಿ ಸಿಲುಕಿ ಸುದ್ದಿಯಾಗಿತ್ತು.

Exit mobile version