ನವ ದೆಹಲಿ: ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‌ಲೈನ್ಸ್‌ನ ಜಂಟಿ ಸಹಭಾಗಿತ್ವವಿರುವ ವಿಸ್ತಾರ ಏರ್‌ಲೈನ್ ಮತ್ತು ಏರ್ ಇಂಡಿಯಾ ವಿಲೀನ ಬಗ್ಗೆ ಮಾತುಕತೆ ಆರಂಭವಾಗಿದೆ. (Vistara-Air India) ಏರ್ ಇಂಡಿಯಾ ಈಗಾಗಲೇ ಟಾಟಾ ಸಮೂಹದ ಪಾಲಾಗಿದೆ.
ವಿಸ್ತಾರದಲ್ಲಿ ಟಾಟಾ ಸನ್ಸ್ 51% ಹಾಗೂ ಸಿಂಗಾಪುರ ಏರ್‌ಲೈನ್ಸ್ 49% ಷೇರುಗಳನ್ನು ಹೊಂದಿದೆ. ಜುಲೈ ವೇಳೆಗೆ ಮಾರುಕಟ್ಟೆ ಪಾಲು ದೃಷ್ಟಿಯಿಂದ ಎರಡನೇ ಅತಿ ದೊಡ್ಡ ಏರ್‌ಲೈನ್ ಆಗಿದೆ.
” ವಿಸ್ತಾರ- ಏರ್ ಇಂಡಿಯಾ ವಿಲೀನದ ಸಾಧ್ಯತೆಗಳ ಬಗ್ಗೆ ಮಾತುಕತೆ ಈಗಾಗಲೇ ಆರಂಭವಾಗಿದೆ. ವಿಸ್ತಾರ ಜಂಟಿ ಸಹಭಾಗಿತ್ವದ ಏರ್‌ಲೈನ್ ಆಗಿರುವುದರಿಂದ ಭವಿಷ್ಯದ ರೂಪುರೇಷೆಗಳ ಬಗ್ಗೆ ಉಭಯ ಬಣಗಳು ಸಮಾಲೋಚನೆ ನಡೆಸಬೇಕಾಗುತ್ತದೆ. ವಿಸ್ತಾರ ಮತ್ತು ಏರ್ ಇಂಡಿಯಾವನ್ನು ವಿಲೀನಗೊಳಿಸುವುದೇ ಅಥವಾ ಪ್ರತ್ಯೇಕ ಸಂಸ್ಥೆಗಳಾಗಿಯೇ ಮುಂದುವರಿಸುವುದೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ಆಯ್ಕೆಗಳೂ ನಮ್ಮ ಮುಂದಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ʼʼ ಎಂದು ವಿಸ್ತಾರ ಸಿಇಒ ವಿನೋದ್ ಕಣ್ಣನ್ ತಿಳಿಸಿದ್ದಾರೆ.
ಸದ್ಯಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ ಎರಡೂ ಸ್ವತಂತ್ರ ಏರ್‌ಲೈನ್‌ಗಳಾಗಿವೆ. ವಿಲೀನ ಸಂಬಂಧ ಅಂತಿಮ ನಿರ್ಧಾರಕ್ಕೆ ಬರುವ ತನಕ ಪ್ರತ್ಯೇಕ ಸಂಸ್ಥೆಗಳಾಗಿಯೇ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ವಿಸ್ತಾರ ಏರ್‌ಲೈನ್ ಪ್ರಸ್ತುತ ಪ್ರತಿ ನಿತ್ಯ ಅಂತಾರಾಷ್ಟ್ರೀಯ ಮತ್ತು ದೇಶಿ ಮಾರ್ಗಗಳಲ್ಲಿ 250 ವಿಮಾನಗಳ ಹಾರಾಟವನ್ನು ನಡೆಸುತ್ತಿದೆ. ಅಕ್ಟೋಬರ್ ಅಂತ್ಯಕ್ಕೆ ಯುರೋಪ್‌ನಿಂದ ಮತ್ತಷ್ಟು ವಿಮಾನಗಳನ್ನು ಸೇರಿಸಲಾಗುವುದು ಎಂದರು.
ಏರ್‌ಲೈನ್‌ಗಳಲ್ಲಿ ನೇಮಕಾತಿ ಆರಂಭ: ಈ ನಡುವೆ ಏರ್ ಇಂಡಿಯಾ, ಇಂಡಿಗೊ, ಏರ್ ಏಷ್ಯಾ ಕತಾರ್ ಏರ್‌ಲೈನ್‌ಗಳು ಪೈಲೆಟ್ ಮತ್ತು ಕ್ಯಾಬಿನ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿವೆ. ಕೋವಿಡ್ ಬಿಕ್ಕಟ್ಟು ಉಪಶಮನವಾಗಿರುವುದರಿಂದ ವಿಮಾನ ಪ್ರಯಾಣಕ್ಕೆ ಬೇಡಿಕೆ ಮತ್ತೆ ಹೆಚ್ಚಳವಾಗಿದೆ.