ಮುಂಬಯಿ: ಹಲವು ವರ್ಷಗಳ ಹಿಂದೆ ಕಾಮಿಡಿಯನ್, ಯೂ ಟ್ಯೂಬರ್ ತನ್ಮಯ್ ಭಟ್, (Tanmay Bhat) ಹಿಂದೂಗಳ ಆರಾಧ್ಯದೈವ ವಿನಾಯಕನ ಬಗ್ಗೆ ಅವಹೇಳನಾರಿ ಟ್ವೀಟ್ ಮಾಡಿದ್ದರು. ಅದು ಈಗ ಅವರಿಗೆ ಕುತ್ತಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಕೋಟಕ್ ಮಹೀಂದ್ರಾ ಬ್ಯಾಂಕ್, (Kotak Mahindra Bank) ತನ್ಮಯ್ ಭಟ್ ಇದ್ದ ಜಾಹೀರಾತು ಕ್ಯಾಂಪೇನ್ ಒಂದನ್ನು ಹಿಂತೆಗೆದುಕೊಂಡಿದೆ. ಬ್ಯಾಂಕ್ ತನ್ನ Kotak811 ಎಂಬ ಡಿಜಿಟಲ್ ಹಣಕಾಸು ಕುರಿತ ಕ್ಯಾಂಪೇನ್ ಅನ್ನು ಹಿಂತೆಗೆದುಕೊಂಡಿದೆ.
ಕೋಟಕ್ ಬ್ಯಾಂಕ್ ತನ್ನ ನೂತನ ಪ್ರಚಾರ ಅಭಿಯಾನ ಆರಂಭಿಸಿದ ಕೂಡಲೇ ನೆಟ್ಟಿಗರು ತನ್ಮಯ್ ಭಟ್ 2013ರಲ್ಲಿ ಗಣೇಶ ಹಾಗೂ ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ್ದ ಟ್ವೀಟ್‌ಗಳನ್ನು ಮತ್ತೆ ಶೇರ್ ಮಾಡಿದ್ದಲ್ಲದೆ, ತಮ್ಮ ಕೋಟಕ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಬಾಲಿವುಡ್ ನಟಿ ಕಂಗನಾ ರಣಾವತ್ ಸೇರಿದಂತೆ ಗಣ್ಯರು ಕೂಡ ತನ್ಮಯ್ ಭಟ್ ವಿರುದ್ಧ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ತನ್ಮಯ್ ಭಟ್ ಅವರಿಗೆ ತನ್ನ ಪ್ರಚಾರ ಅಭಿಯಾನದಿಂದ ಗೇಟ್‌ಪಾಸ್ ನೀಡಿದೆ. ವಿವಾದಾತ್ಮಕ ಅಭಿಯಾನವನ್ನೂ ರದ್ದುಪಡಿಸಿದೆ. ತನ್ಮಯ್ ಭಟ್ ಹಾಗೂ ಸಮಯ್ ರೈನಾ ಎಂಬ ಮತ್ತೊಬ್ಬ ಕಾಮಿಡಿಯನ್, ಯೂಟ್ಯೂಬರ್ ಈ ಕ್ಯಾಂಪೇನ್‌ನಲ್ಲಿ ಇದ್ದರು.
ಯಾವುದೇ ಸಮುದಾಯವನ್ನು ಅಥವಾ ವ್ಯಕ್ತಿಗತವಾಗಿ ಅವಹೇಳನ ಮಾಡುವ ನಟರ ದೃಷ್ಟಿಕೋನಗಳನ್ನು ಕೋಟಕ್ ಮಹೀಂದ್ರಾ ಬ್ಯಾಂಕ್ ಬೆಂಬಲಿಸುವುದಿಲ್ಲ. ನಾವು ಕ್ಯಾಂಪೇನ್ ಅನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಕೋಟಕ್ ಬ್ಯಾಂಕ್ ತಿಳಿಸಿದೆ.