Site icon Vistara News

Bisleri : ಬಿಸ್ಲೇರಿ ಖರೀದಿಯ ಮಾತುಕತೆ ಸ್ಥಗಿತಗೊಳಿಸಿದ ಟಾಟಾ ಕಂಪನಿ

bisleri-plant

ಮುಂಬಯಿ: ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಸ್ಟ್‌ ಕಂಪನಿಯು ಪ್ಯಾಕೇಜ್ಡ್‌ ವಾಟರ್‌ ದಿಗ್ಗಜ ಬಿಸ್ಲೇರಿಯನ್ನು ಖರೀದಿಸುವ ಪ್ರಸ್ತಾಪವನ್ನು ಸ್ಥಗಿತಗೊಳಿಸಿದೆ. ಬಿಸ್ಲೇರಿಯನ್ನು ಖರೀದಿಸುವ ಸಂಬಂಧ ಯಾವುದೇ ನಿರ್ದಿಷ್ಟ ಒಪ್ಪಂದದ ಚರ್ಚೆ ನಡೆದಿಲ್ಲ ಎಂದು ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (Tata Consumer Products) ಷೇರು ವಿನಿಮಯ ಕೇಂದ್ರಕ್ಕೆ (stock exchange) ತಿಳಿಸಿದೆ.

ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌, ಬಿಸ್ಲೇರಿ ಇಂಟರ್‌ನ್ಯಾಶನಲ್‌ ಅನ್ನು 6000-7000 ಕೋಟಿ ರೂ.ಗೆ ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಟಾಟಾ ಕಂಪನಿಯು ಹಿಮಾಲಯನ್‌ ನೇಚ್ಯುರಲ್‌ ಮಿನರಲ್‌ ವಾಟರ್‌ ಹಾಗೂ ಟಾಟಾ ವಾಟರ್‌ ಪ್ಲಸ್‌ ಬ್ರಾಂಡ್‌ ಅನ್ನು ಹೊಂದಿದೆ. ಬಿಸ್ಲೇರಿ ಇಂಟರ್‌ನ್ಯಾಶನಲ್‌ ಭಾರತದ ಅತಿ ದೊಡ್ಡ ಬಾಟಲಿ ಕುಡಿಯುವ ನೀರಿನ ಉತ್ಪಾದಕ ಕಂಪನಿಯಾಗಿದ್ದು, 150 ಉತ್ಪಾದನಾ ಘಟಕಗಳನ್ನು ಹಾಗೂ 4,000 ವಿತರಕರು, 4,000 ಟ್ರಕ್‌ಗಳ ನೆಟ್‌ ವರ್ಕ್‌ ಅನ್ನು ಹೊಂದಿದೆ.

ಬಿಸ್ಲೇರಿಯ ಯಶೋಗಾಥೆ:

ಮುಂಬಯಿನಲ್ಲಿ ಪಾರ್ಲೆ ಸಮೂಹದ ಉದ್ಯಮಿ ರಮೇಶ್ ಜಯಂತಿಲಾಲ್‌ ಚೌಹಾಣ್‌ ಅವರು 1969ರಲ್ಲಿ ಬಿಸ್ಲೇರಿ ಕುಡಿಯುವ ನೀರಿನ ಬಾಟಲಿ ವ್ಯಾಪಾರವನ್ನು ( Bisleri International) ಆರಂಭಿಸಿದಾಗ, ಮುಂದೊಂದು ದಿನ ಸಾವಿರಾರು ಕೋಟಿ ರೂ.ಗಳ ಉದ್ದಿಮೆಯಾಗಲಿದೆ ಎಂದು ಯಾರೊಬ್ಬರೂ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ! ಅಂದು ಚೌಹಾಣ್‌ ಅವರು ಇಟಲಿ ಮೂಲದ ಉದ್ಯಮಿಯಿಂದ 4 ಲಕ್ಷ ರೂ.ಗೆ ಬಿಸ್ಲೇರಿ ಬ್ರಾಂಡ್‌ ಅನ್ನು ಖರೀದಿಸಿದ್ದರು. ಆಗ ಅವರಿಗೆ ಕೇವಲ 27 ವರ್ಷ ವಯಸ್ಸು! ಕುಡಿಯುವ ನೀರಿನ ಮಾರಾಟ ಮತ್ತು ಅದರಿಂದ ಸಾಕಷ್ಟು ಲಾಭ ಮಾಡಬಹುದು ಎಂಬುದು ಕಲ್ಪನೆಗೂ ನಿಲುಕದ ಸಂಗತಿಯಾಗಿತ್ತು.

ಬಿಸ್ಲೇರಿ 2022-23ರಲ್ಲಿ 2,500 ಕೋಟಿ ರೂ. ವಹಿವಾಟು ಮತ್ತು 220 ಕೋಟಿ ರೂ. ನಿವ್ವಳ ಲಾಭದ ನಿರೀಕ್ಷೆಯಲ್ಲಿದೆ. 2021ರ ಮಾರ್ಚ್‌ಗೆ ಮುಕ್ತಾಯವಾದ ಸಾಲಿನಲ್ಲಿ ಕಂಪನಿ 1.181 ಕೋಟಿ ರೂ. ವಹಿವಾಟು ಮತ್ತು 95 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದಕ್ಕೂ ಹಿಂದಿನ ವರ್ಷ 1,472 ಕೋಟಿ ರೂ. ವಹಿವಾಟು ಮತ್ತು 100 ಕೋಟಿ ರೂ. ಲಾಭ ಪಡೆದಿತ್ತು.

ಸ್ವತಃ ರಮೇಶ್‌ ಚೌಹಾಣ್‌ ಅವರು ಬಿಸ್ಲೇರಿ ಯಶಸ್ಸು ಹೇಗಾಯಿತು ಎಂದು ಒಂದೆಡೆ ಹೇಳಿದ್ದಾರೆ- ಆರಂಭದಲ್ಲಿ ವಿದೇಶಿಯರು ಹಾಗೂ ಅನಿವಾಸಿ ಭಾರತೀಯರು ಹೆಚ್ಚಾಗಿ ಬಿಸ್ಲೇರಿ ನೀರನ್ನು ಕುಡಿಯುತ್ತಿದ್ದರು. ಆದರೆ 1995ರಲ್ಲಿ ನಾವು 500 ಎಂಎಲ್‌ ಪ್ರಮಾಣದ ಬಾಟಲಿಯನ್ನು ಕೇವಲ ಐದು ರೂಪಾಯಿಗೆ ಮಾರಾಟ ಮಾಡಲು ಆರಂಭಿಸಿದ ಬಳಿಕ ಜನಪ್ರಿಯವಾಯಿತು. ಕಂಪನಿಯ ಬೆಳವಣಿಗೆ 400 ಪರ್ಸೆಂಟ್‌ ವೃದ್ಧಿಸಿತು.

ರಮೇಶ್‌‌ ಜಯಂತಿಲಾಲ್ ಚೌಹಾಣ್

ಭಾರತದಲ್ಲಿ ಕುಡಿಯುವ ನೀರಿನ ಬಾಟಲಿ ಮಾರಾಟದ ಶಕೆಯನ್ನು ಆರಂಭಿಸಿದ ರಮೇಶ್‌ ಚೌಹಾಣ್‌ ಅವರ ಆತ್ಮಕಥೆಯನ್ನು ಪತ್ರಕರ್ತೆ ಪ್ಯಾಟ್ರಿಕಾ ಜೆ ಸೇಥಿ ಬರೆದಿದ್ದಾರೆ. ಅದರ ಹೆಸರು -ಥಂಡರ್‌ ಅನ್‌ಬಾಟಲ್ಡ್‌ (Thunder Unbottled- From Thums Up to Bisleri)

ರಮೇಶ್‌ ಚೌಹಾಣ್‌ ಅವರ ಸಿದ್ಧ ಸೂತ್ರಗಳು ಯುವ ಉದ್ಯಮಿಗಳಿಗೆ ಪ್ರೇರಣೆ ನೀಡಬಲ್ಲುದು. ಜಪಾನ್‌ನ ಕೈಜೆನ್‌ ಸಿದ್ಧಾಂತ ಅವರಿಗೆ ಪ್ರಿಯ. ಅದು ಸುಧಾರಣೆಗೆ ನಿರಂತರ ಕಲಿಕೆಯನ್ನು ಬೋಧಿಸುವಂಥದ್ದು. ಮಾರುಕಟ್ಟೆಯಲ್ಲಿ ಸ್ಪರ್ಧಿಗಳಿಗಿಂತ ಮುಂದೆ ಸಾಗಬೇಕಿದ್ದರೆ ಅವರನ್ನು ಅನುಕರಿಸಬಾರದು. ಬದಲಿಗೆ ನೀವು ಮಾಡುತ್ತಿರುವುದರಲ್ಲಿ ಯಾವುದು ಸರಿ-ತಪ್ಪು ಎಂದು ವಿಶ್ಲೇಷಿಸಿ. ಅದುವೇ ಬೆಳೆಯುವ ಸರಿಯಾದ ಹಾದಿ. ಕಠಿಣ ಪರಿಶ್ರಮಕ್ಕೆ ಸರಿಸಾಟಿ ಬೇರೆ ಯಾವುದೂ ಇಲ್ಲ.

ಶ್ರೇಷ್ಠವಾದ ವಿತರಣೆ ಜಾಲವೇ ಬಿಸ್ಲೇರಿಯ ಯಶಸ್ಸಿನ ಹಿಂದಿನ ಮತ್ತೊಂದು ರಹಸ್ಯ. ನವೀನ ಪ್ಯಾಕೇಜಿಂಗ್‌ ಅಲ್ಲಿದೆ. ಕಂಪನಿಗೆ ಲಾಭ ಬರಬೇಕಿದ್ದರೆ ಅದರ ಹೂಡಿಕೆಗಿಂತಲೂ, ಹೂಡಿಕೆಯ ನಿರ್ವಹಣೆ ಮುಖ್ಯ ಎನ್ನುತ್ತಾರೆ ರಮೇಶ್‌ ಚೌಹಾಣ್!

Exit mobile version