ಮುಂಬಯಿ: ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್ ಕಂಪನಿಯು ಅಮೆರಿಕದ ಆ್ಯಪಲ್ ಕಂಪನಿಯ ಪ್ರಸಿದ್ಧ ಐಫೋನ್‌ಗಳನ್ನು ಉತ್ಪಾದಿಸುವ ಗುತ್ತಿಗೆದಾರ. ಈ ಕಂಪನಿ ಕೋಲಾರದ ನರಸಾಪುರದಲ್ಲಿ ಘಟಕವನ್ನು ಹೊಂದಿದೆ. ಈ ಘಟಕವನ್ನು ಖರೀದಿಸಲು ಟಾಟಾ ಸಮೂಹವು (TATA Group) ಮಾತುಕತೆ ಆರಂಭಿಸಿದೆ ಎಂದು ವರದಿಯಾಗಿದೆ.
ಐಫೋನ್ ಉತ್ಪಾದಿಸುವ ಮೂರು ಪ್ರಮುಖ ಗುತ್ತಿಗೆದಾರ ಕಂಪನಿಗಳಲ್ಲಿ ವಿಸ್ಟ್ರಾನ್ ಕಾರ್ಪೊರೇಷನ್ ಒಂದಾಗಿದೆ. ಇದು ಭಾರತದಲ್ಲಿ ಹೊಂದಿರುವ ಏಕೈಕ ಉತ್ಪಾದನಾ ಘಟಕವು ಕೋಲಾರದ ನರಸಾಪುರದಲ್ಲಿದೆ. ಇದನ್ನು 4,000-5000 ಕೋಟಿ ರೂ. ಕೊಟ್ಟು ಖರೀದಿಸಲು ಟಾಟಾ ಗ್ರೂಪ್ ಮಾತುಕತೆ ನಡೆಸುತ್ತಿದೆ.
2018ರಲ್ಲಿ ಈ ಘಟಕ ಆರಂಭವಾಗಿತ್ತು. ಇಲ್ಲಿ 14 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಇದ್ದಾರೆ. ಐಫೋನ್ 14 ಉತ್ಪಾದನೆಯ 4 ಅಸೆಂಬ್ಲಿ ಲೈನ್‌ಗಳನ್ನು ಒದು ಒಳಗೊಂಡಿದೆ. ಟಾಟಾ ಎಲೆಕ್ಟ್ರಾನಿಕ್ಸ್ (Tata electronics Pvt Ltd), ಆ್ಯಪಲ್ ಉತ್ಪಾದನೆಗೆ ಬೇಕಾಗುವ ಬಿಡಿಭಾಗಗಳನ್ನು ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಘಟಕದಿಂದ ಪೂರೈಸುತ್ತದೆ. ಈ ಘಟಕದಲ್ಲಿ ಹತ್ತು ಸಾವಿರ ಮಂದಿ ಉದ್ಯೋಗಿಗಳಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಮಹಿಳೆಯರು.
2020ರ ಡಿಸೆಂಬರ್‌ನಲ್ಲಿ ನರಸಾಪುರದ ವಿಸ್ಟ್ರಾನ್ ಘಟಕದಲ್ಲಿ ಸಾವಿರಾರು ಸಿಬ್ಬಂದಿ ವೇತನ ಹೆಚ್ಚಳ ಸೇರಿ ಹಲವು ಬೇಡಿಕೆ ಮುಂದಿಟ್ಟು ನಡೆಸಿದ ಪ್ರತಿಭಟನೆ ಹಿಂಸಾತ್ಮಕವಾಗಿತ್ತು. ಕಂಪನಿಯ ಕ್ಯಾಂಪಸ್‌ನಲ್ಲಿ ದಾಂಧಲೆ ನಡೆಸಲಾಗಿತ್ತು.