ಮುಂಬಯಿ: ಟಾಟಾ ಸಮೂಹ ಷೇರು ಪೇಟೆಯಲ್ಲಿ ತನ್ನ ಕಾರ್ಯತಂತ್ರವನ್ನು ಬದಲಿಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಷೇರು ವಿನಿಮಯ ಕೇಂದ್ರದಲ್ಲಿ ಟಾಟಾ ಸಮೂಹದ ನೋಂದಾಯಿತ ಕಂಪನಿಗಳ ಸಂಖ್ಯೆ 29ರಿಂದ 15ಕ್ಕೆ ಕಡಿತವಾಗಲಿದೆ. ಕೆಲವು ದೊಡ್ಡ ಕಂಪನಿಗಳನ್ನು ಲಿಸ್ಟೆಡ್ ಕಂಪನಿಗಳಾಗಿ (Tata Group) ಉಳಿಸಿಕೊಂಡು ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಟಾಟಾ ಸನ್ಸ್ ಉದ್ದೇಶಿಸಿದೆ ಎಂದು ವರದಿಯಾಗಿದೆ.
ಟಾಟಾ ಗ್ರೂಪ್‌ನ ಒಟ್ಟು ಆದಾಯ 10.36 ಲಕ್ಷ ಕೋಟಿ ರೂ.: ಟಾಟಾ ಗ್ರೂಪ್ ಒಟ್ಟು 128 ಶತಕೋಟಿ ಡಾಲರ್ ( ಅಂದಾಜು 10.36 ಲಕ್ಷ ಕೋಟಿ ರೂ.) ಆದಾಯವನ್ನು ಹೊಂದಿದೆ. ಸಮೂಗದ ಮಾರುಕಟ್ಟೆ ಮೌಲ್ಯ 255 ಶತಕೋಟಿ ಡಾಲರ್ ( 20.65 ಲಕ್ಷ ಕೋಟಿ ರೂ.)
ಲಿಸ್ಟೆಡ್ ಕಂಪನಿಗಳ ಸಂಖ್ಯೆ ಇಳಿಕೆ ಏಕೆ? : ಟಾಟಾ ಸಮೂಹವು ತನ್ನ ದೊಡ್ಡ ಕಂಪನಿಗಳಿಗೆ ಹೆಚ್ಚಿನ ನಗದು ಹರಿವಿನ ಮೂಲಕ ಅಭಿವೃದ್ಧಿಗೆ ಹಾಗೂ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಆದ್ದರಿಂದ ಷೇರು ಪೇಟೆಯಲ್ಲಿ ಗ್ರೂಪ್‌ನ ಅಸ್ತಿತ್ವವನ್ನು ಸರಳಗೊಳಿಸಲು ನಿರ್ಧರಿಸಿದೆ. ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಟಾಟಾ ಸಮೂಹ ಪರಿವರ್ತನೆ ಹೊಂದಲಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ.
ಟಾಟಾ ಸಮೂಹದಲ್ಲಿ ಸುಮಾರು 60 ಕಂಪನಿಗಳು ಅನ್‌ಲಿಸ್ಟೆಡ್ ಅಂದರೆ ಷೇರು ಪೇಟೆಯಲ್ಲಿ ನೋಂದಣಿಯಾಗದಿರುವ ಕಂಪನಿಗಳಾಗಿವೆ. 29 ಕಂಪನಿಗಳು ಲಿಸ್ಟೆಡ್ ಆಗಿವೆ. 10 ವಲಯಗಳಲ್ಲಿ ಟಾಟಾ ಸಮೂಹದ ನೂರಾರು ಅಧೀನ ಕಂಪನಿಗಳು ಇವೆ. ಇದೀಗ ಚಂದ್ರಶೇಖರನ್ ಸಾರಥ್ಯದಲ್ಲಿ ಪುನಾರಚನೆ ನಡೆಯುತ್ತಿದೆ.
ಉಕ್ಕಿನ ಉದ್ದಿಮೆಯ ಪುನಾರಚನೆ: ಟಾಟಾ ಸ್ಟೀಲ್ ಕಳೆದ ವಾರ ತನ್ನ ಉಕ್ಕಿನ ಉದ್ದಿಮೆಗಳ ಪುನಾರಚನೆ ಪ್ರಕ್ರಿಯೆ ಕೈಗೊಂಡಿದೆ. ಟಾಟಾ ಸ್ಟೀಲ್ ಜತೆಗೆ ಅದರ 7 ಅಧೀನ ಕಂಪನಿಗಳು ವಿಲೀನವಾಗಿವೆ.
ಟಾಟಾ ಸಮೂಹದ ಬಿಸಿನೆಸ್ ಜಗತ್ತು:
ತಂತ್ರಜ್ಞಾನ: ಟಿಸಿಎಸ್, ಟಾಟಾ ಎಲೆಕ್ಸಿ
ಉಕ್ಕು : ಟಾಟಾ ಸ್ಟೀಲ್
ಆಟೊಮೊಬೈಲ್: ಟಾಟಾ ಮೋಟಾರ್ಸ್
ರಿಟೇಲ್ &ಕನ್‌ಸ್ಯೂಮರ್: ಟಾಟಾ ಕನ್‌ಸ್ಯೂಮರ್, ಟೈಟನ್, ಟ್ರೆಂಟ್, ಟಾಟಾ ಕೆಮಿಕಲ್ಸ್
ಹಣಕಾಸು ತಂತ್ರಜ್ಞಾನ: ಟಾಟಾ ಕ್ಯಾಪಿಟಲ್
ಏರೊಸ್ಪೇಸ್, ಡಿಫೆನ್ಸ್: ಟಾಟಾ ಅಡ್ವಾನ್ಡ್ಸ್ ಸಿಸ್ಟಮ್ಸ್
ಟೂರಿಸಂ, ಟ್ರಾವೆಲ್: ಇಂಡಿಯನ್ ಹೋಟೆಲ್ಸ್, ಟಾಟಾ ಎಸ್‌ಐಎ, ಏರ್ ಏಷ್ಯಾ, ಏರ್ ಇಂಡಿಯಾ
ಟೆಲಿಕಾಂ, ಮೀಡಿಯಾ : ಟಾಟಾ ಕಮ್ಯುನಿಕೇಶನ್ಸ್, ಟಾಟಾ ಟೆಲಿ, ಟಾಟಾ ಪ್ಲೇ
ಟ್ರೇಡಿಂಗ್: ಟಾಟಾ ಇಂಟರ್‌ನ್ಯಾಶನಲ್, ಟಾಟಾ ಇಂಡಸ್ಟ್ರೀಸ್