ಮುಂಬೈ: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ (Tata Motors) ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಲು ಮುಂದಾಗಿದೆ. ಜುಲೈಯಿಂದ ಜಾರಿಗೆ ಬರುವಂತೆ ಕಮರ್ಷಿಯಲ್ ವಾಹನ (Commercial vehicles)ಗಳ ಬೆಲೆಯನ್ನು ಶೇ. 2ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟಾರ್ಸ್ ಬುಧವಾರ ಘೋಷಿಸಿದೆ.
”ಟಾಟಾ ಮೋಟಾರ್ಸ್ ಲಿಮಿಟೆಡ್ ಜುಲೈ 1ರಿಂದ ಜಾರಿಗೆ ಬರುವಂತೆ ಕಮರ್ಷಿಯಲ್ ವಾಹನಗಳ ಬೆಲೆ ಹೆಚ್ಚಿಸಲಿದೆʼʼ ಎಂದು ಪ್ರಕಟಣೆ ತಿಳಿಸಿದೆ. ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇದು ಅನಿವಾರ್ಯ ಎಂದೂ ಕಂಪನಿ ಹೇಳಿದೆ. ಎಲ್ಲ ವಾಣಿಜ್ಯ ವಾಹನಗಳಿಗೆ ಈ ಬೆಲೆ ಏರಿಕೆ ಅನ್ವಯವಾಗಲಿದ್ದು, ನಿರ್ದಿಷ್ಟ ಮಾದರಿಯನ್ನು ಅವಲಂಬಿಸಿ ದರ ವ್ಯತ್ಯಾಸವಾಗಲಿದೆ.
ಟಾಟಾ ಮೋಟಾರ್ಸ್ ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಕಂಪನಿಯಾಗಿದ್ದು, ಇದು ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯು ದೇಶದ ಪ್ರಯಾಣಿಕ ವಾಹನಗಳ ಮಾರುಕಟ್ಟೆಯ ಅಗ್ರ ಮೂರರಲ್ಲಿ ಸ್ಥಾನ ಪಡೆದುಕೊಂಡಿದೆ. ಮೇ ತಿಂಗಳಲ್ಲಿ ಕಂಪನಿಯು ಸುಮಾರು 29,691 ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2ರಷ್ಟು ಹೆಚ್ಚಳ ದಾಖಲಿಸಿದೆ.
ಅದಾಗ್ಯೂ ಟ್ರಕ್ ಮಾರಾಟದ ಕುಸಿತ ಕಂಡು ಬಂದಿದೆ. ಒಟ್ಟಾರೆ ಟ್ರಕ್ ಮಾರಾಟವು 12,402 ಯೂನಿಟ್‌ಗೆ ತಲುಪಿದೆ. ಈ ವಿಭಾಗದಲ್ಲಿ ಹೆವಿ ಕಮರ್ಷಿಯಲ್ ವೆಹಿಕಲ್ಸ್ (Heavy Commercial Vehicles) ಮಾರಾಟದ ಪ್ರಮಾಣ ಸ್ವಲ್ಪ ಕುಸಿದಿದೆ. ಎಚ್‌ಸಿವಿ ಮಾರಾಟವು ಶೇ. 3ರಷ್ಟು ಕುಸಿದಿದ್ದು, 2023ರಲ್ಲಿನ 8,160 ಯೂನಿಟ್‌ನಿಂದ 2024ರ ಮೇ ವೇಳೆಗೆ 7,924 ಯುನಿಟ್‌ಗೆ ಇಳಿದಿದೆ.
ಮತ್ತೊಂದೆಡೆ ಇಂಟರ್‌ಮಿಡಿಯೆಟ್ ಲೈಟ್ ಮೀಡಿಯಂ ಕಮರ್ಷಿಯಲ್ ವೆಹಿಕಲ್ (Intermediate Light Medium Commercial Vehicle) ವಿಭಾಗವು ದೃಢವಾದ ಬೆಳವಣಿಗೆಯನ್ನು ತೋರಿದೆ. ಐಎಲ್ಎಂಸಿವಿಯ ಮಾರಾಟವು ಶೇ. 30ರಷ್ಟು ಏರಿಕೆಯಾಗಿದ್ದು, 2023ರ ಮೇಯಲ್ಲಿ 3,450 ಯೂನಿಟ್ ಮಾರಾಟವಾಗಿದ್ದರೆ 2024ರ ಮೇಯಲ್ಲಿ 4,478 ವಾಹನ ಬಿಕರಿಯಾಗಿದೆ. ಮುಂದಿನ ದಿನಗಳಲ್ಲಿ ಟಾಟಾ ಮೋಟಾರ್ಸ್‌ನಂತೆ ಇತರ ವಾಹನ ತಯಾರಿಕಾ ಕಂಪನಿಗಳೂ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ
ಟಾಟಾ ಮೋಟಾರ್ಸ್ ಭಾರತದ ನಂ. 1 ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವದಂದು 7 ಲಕ್ಷ ಯೂನಿಟ್ ಮಾರಾಟದ ಸಂಭ್ರಮಾಚರಣೆ ನಡೆಸುತ್ತಿದೆ. 2017ರಲ್ಲಿ ಬಿಡುಗಡೆಯಾದ ನೆಕ್ಸಾನ್ 2021 ರಿಂದ 2023 ರವರೆಗೆ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರಲ್ಲಿ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಮೊದಲ ವಾಹನ ಎಂಬ ಖ್ಯಾತಿಯನ್ನು ನೆಕ್ಸಾನ್ ಹೊಂದಿದೆ. ಆ ಮೂಲಕ ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಅಂದಿನಿಂದ ಇಂದಿನವರೆಗೂ ಅದರ ಗೆಲುವಿನ ಓಟ ಮುಂದುವರಿದಿದೆ.
ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ
ಫೆಬ್ರವರಿ 2024ರಲ್ಲಿ, ಹೊಸ ಜನರೇಷನ್‌ನ ನೆಕ್ಸಾನ್ 2022ರ ಹೆಚ್ಚಿನ ಪ್ರೋಟೋಕಾಲ್ ಪ್ರಕಾರ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ನೆಕ್ಸಾನ್.ಇವಿ ಕೂಡ ಅದೇ ದಾರಿಯಲ್ಲಿ ಸಾಗಿದ್ದು, ಇದೇ ತಿಂಗಳಲ್ಲಿ ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ.