ನವ ದೆಹಲಿ: ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳು, ಪಾನ್ ಮಸಾಲಾ ಮತ್ತು ಗುಟ್ಕಾದ ಮೇಲಿನ ತೆರಿಗೆ ಲೆಕ್ಕಾಚಾರ ವಿಧಾನದಲ್ಲಿ ಕೇಂದ್ರ ಸರ್ಕಾರ ಹೊಸ ಬದಲಾವಣೆ ಜಾರಿಗೊಳಿಸಿದೆ. ಇನ್ನು ಮುಂದೆ ಇವುಗಳ ರಿಟೇಲ್ ದರವನ್ನು (retail price) ಆಧರಿಸಿ ತೆರಿಗೆ ನಿಗದಿಯಾಗಲಿದೆ. ಈಗ ಉತ್ಪನ್ನದ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತಿದೆ (Ad Valorem)
ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಹಣಕಾಸು ವಿಧೇಯಕದಲ್ಲಿ (finance bill) ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯಿದೆ 2017ಕ್ಕೆ ತಿದ್ದುಪಡಿ ತಂದಿದೆ. ಅದರ ಪ್ರಕಾರ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳಿಗೆ ಪ್ರತಿ ಯುನಿಟ್‌ನ ರಿಟೇಲ್ ದರದ ಮೇಲೆ 51% ರಷ್ಟು ಜಿಎಸ್‌ಟಿ ಪರಿಹಾರ ಸೆಸ್ ಮಿತಿಯನ್ನು ನಿಗದಿಪಡಿಸಲಾಗಿದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳಿಗೆ ರಿಟೇಲ್ ದರದ 100% ಸೆಸ್ ವಿಧಿಸಬಹುದು.
ಹಣಕಾಸು ವಿಧೇಯಕವು ರಿಟೇಲ್ ಸೇಲ್ ದರ (retail sale price) ಬಗ್ಗೆ ವ್ಯಾಖ್ಯಾನವನ್ನು ನೀಡಿದ್ದು, ಎಲ್ಲ ತೆರಿಗೆ, ಸಾರಿಗೆ ಶುಲ್ಕ, ಜಾಹೀರಾತು ವೆಚ್ಚ ಇತ್ಯಾದಿಗಳನ್ನು ರಿಟೇಲ್ ಸೇಲ್ ದರ ಒಳಗೊಂಡಿರುತ್ತದೆ. ಒಡಿಶಾದ ಹಣಕಾಸು ಮಂತ್ರಿ ನೀರಂಜನ್ ಪಜಾರಿ ನೇತೃತ್ವದ ಸಚಿವರುಗಳ ಮಟ್ಟದ ಸಮಿತಿಯ ಶಿಫಾರಸಿನ ಮೇರೆಗೆ ಪಾನ್ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ನೀತಿಯನ್ನು ಪರಿಷ್ಕರಿಸಲಾಗಿದೆ.
ಪ್ರಸ್ತುತ ತಂಬಾಕು ಉತ್ಪನ್ನಗಳಿಗೆ 28% ಜಿಎಸ್‌ಟಿ ಇದೆ. ಅದು ಗರಿಷ್ಠ ಶ್ರೇಣಿ. ಜತೆಗೆ ಹೆಚ್ಚುವರಿಯಾಗಿ ಕಾಂಪೆನ್ಸೆಶನ್ ಸೆಸ್ (compensation cess) ಇರುತ್ತದೆ. ತಂಬಾಕು ಉತ್ಪನ್ನಗಳಿಗೆ ಸೆಸ್ ದರ 290% ತನಕ ಇರುತ್ತದೆ. ಪಾನ್ ಮಸಾಲಾಗೆ 135% ಸೆಸ್ ಇದೆ. ಹಾಗೂ ಇದು ಸೇಲ್ಸ್ ಪ್ರಮಾಣವನ್ನು ಒಳಗೊಂಡಿದೆ.