ನವ ದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದ ತೆರಿಗೆ ಸಂಗ್ರಹ ಬಜೆಟ್ ಅಂದಾಜಿಗಿಂತಲೂ 4 ಲಕ್ಷ ಕೋಟಿ ರೂ. ಮೀರಿದ್ದು, ಗಮನ ಸೆಳೆದಿದೆ. ವೈಯಕ್ತಿಕ ಆದಾಯ ತೆರಿಗೆ, ಕಸ್ಟಮ್ಸ್, ಜಿಎಸ್‌ಟಿ ಸಂಗ್ರಹ ವೃದ್ಧಿಸಿದೆ. ಜಿಡಿಪಿ ಬೆಳವಣಿಗೆಯ ದರವನ್ನೂ ತೆರಿಗೆ ಸಂಗ್ರಹದ ಬೆಳವಣಿಗೆ ಮೀರಲಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ( Tax collection) ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ (2022-23) ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯನ್ನು ಒಳಗೊಂಡಿರುವ ನೇರ ತೆರಿಗೆ ಸಂಗ್ರಹ 17.50 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಜಿಎಸ್‌ಟಿ, ಕಸ್ಟಮ್ಸ್ ಒಳಗೊಂಡಿರುವ ಪರೋಕ್ಷ ತೆರಿಗೆ 14 ಲಕ್ಷ ಕೋಟಿ ರೂ. ಆಗಬಹುದು. ಒಟ್ಟು 31.50 ಲಕ್ಷ ಕೋಟಿ ರೂ. ಸಂಗ್ರಹವಾಗಬಹುದು ಎಂದು ತಿಳಿಸಿದ್ದಾರೆ.
ಬಜೆಟ್ ಪ್ರಕಾರ ಪ್ರಸಕ್ತ ಸಾಲಿಗೆ 27.50 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಅಂದಾಜಿಸಲಾಗಿತ್ತು. ಆರ್ಥಿಕ ಚಟುವಟಿಕೆಗಳು ಚುರುಕಾಗಿರುವುದನ್ನು, ತೆರಿಗೆ ನೆಲೆ ವೃದ್ಧಿಸಿರುವುದನ್ನು ಇದು ಬಿಂಬಿಸಿದೆ.