Site icon Vistara News

Tax refund message : ತೆರಿಗೆ ರಿಫಂಡ್‌ ಮೆಸೇಜ್‌ ಸ್ಕ್ಯಾಮ್‌ ಆಗಿರಬಹುದು, ಇರಲಿ ಎಚ್ಚರ

Income tax

ನಿಮಗೆ ಟ್ಯಾಕ್ಸ್‌ ರಿಫಂಡ್‌ ಸಿಗಲಿದೆ ಎಂಬ ಮೆಸೇಜ್‌ ಅನ್ನು ನೀವು ಸ್ವೀಕರಿಸಿದ್ದೀರಾ? ಹಾಗಿದ್ದರೆ ಜಾಗರೂಕರಾಗಿರಿ. ಅದು ಒಂದು ಸ್ಕ್ಯಾಮ್‌ ಆಗಿರುವ ಸಾಧ್ಯತೆಯೂ ಇದೆ. ಅದರ ಮೂಲಕ ಹ್ಯಾಕರ್‌ಗಳು ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣ ಲಪಟಾಯಿಸಲು ಹೊಂಚು ಹಾಕುತ್ತಿರಬಹುದು. (Tax refund message )ಆದ್ದರಿಂದ ಅಂಥ ನಕಲಿ ಸಂದೇಶಗಳ ಬಗ್ಗೆ ಎಚ್ಚರ ಇರಲಿ. ಸರ್ಕಾರ ಕೂಡ ಇಂಥ ವಂಚಕ ಸಂದೇಶಗಳ ಬಗ್ಗೆ ಅಲರ್ಟ್‌ (scam alert) ಮಾಡಿದೆ.

ಸಾಮಾನ್ಯವಾಗಿ ಇಂಥ ವಂಚನೆಯಲ್ಲಿ ಬರುವ ಮೆಸೇಜ್‌ಗಳು ಹೇಗೆ ಇರುತ್ತವೆ? ನಿಮಗೆ ಆದಾಯ ತೆರಿಗೆ ಇಲಾಖೆಯ ರಿಫಂಡ್‌ ಸಿಗಲಿದೆ. ಅದು ಅನುಮೋದನೆಯಾಗಿದೆ. ಅದನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಹಾಕಲಾಗುವುದು. ಆದರೆ ಬ್ಯಾಂಕ್‌ ಅಕೌಂಟ್‌ ನಂಬರ್‌ ತಪ್ಪಾಗಿದ್ದು, ಮತ್ತೊಮ್ಮೆ ಸರಿಯಾದ ಬ್ಯಾಂಕ್‌ ಖಾತೆ ನಂಬರ್‌ ಕಳಿಸಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಈ ಇ-ಮೇಲ್‌ ಲಿಂಕ್‌ ಕ್ಲಿಕ್ಕಿಸಿ, ಬಳಿಕ ಬ್ಯಾಂಕ್‌ ಖಾತೆ ವಿವರಗಳನ್ನು ನಮೂದಿಸಿ ಎಂಬ ನಕಲಿ ಸಂದೇಶ ಬರುತ್ತದೆ.

ನೀವು ಅಪ್ಪಿತಪ್ಪಿ ಆ ವಂಚಕ ಲಿಂಕ್‌ ಅನ್ನು ಒತ್ತಿ ಬ್ಯಾಂಕ್‌ ಖಾತೆ ವಿವರಗಳನ್ನು ನಮೂದಿಸಿದರೆ ವಂಚಕರ ಬಲೆಗೆ ಬೀಳುವುದು ಬಹುತೇಕ ಖಚಿತ. ಈ ರೀತಿ ಹಲವಾರು ಪ್ರಕರಣಗಳು ವರದಿಯಾಗಿದೆ. ಇಲ್ಲೊಂದು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ರಿಫಂಡ್‌ ಅನ್ನು ಯಾವುದೋ ಲಿಂಕ್‌ ಕಳಿಸಿ ಕೊಡುವುದಿಲ್ಲ. ಬದಲಿಗೆ ಟ್ಯಾಕ್ಸ್‌ ಫಾರ್ಮ್‌ನಲ್ಲಿ ನಮೂದಿಸಿರುವ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡುತ್ತದೆ. ಆದಾಯ ತೆರಿಗೆ ಇಲಾಖೆ ವೈಯಕ್ತಿಕ ಮಾಹಿತಿಗಳನ್ನು ಇ-ಮೇಲ್‌ ಮೂಲಕ ಕೇಳುವುದೂ ಇಲ್ಲ. ವೈಯಕ್ತಿಕ ಮಾಹಿತಿಗಾಗಿ ಪಾಸ್‌ ವರ್ಡ್‌ ಕೋರುವುದಾಗಲಿ, ಒಟಿಪಿ ಕಳಿಸುವುದಾಗಲಿ ಇಲ್ಲ. ಆದ್ದರಿಂದ ಅಂಥ ಯಾವುದೇ ರಿಕ್ವೆಸ್ಟ್‌ ಬಂದರೂ ಅದು ವಂಚನೆಯಾಗಿರುತ್ತದೆ.

ಒಂದು ವೇಳೆ ವೈಯಕ್ತಿಕ ಮಾಹಿತಿ, ಬ್ಯಾಂಕ್‌ ಖಾತೆ ವಿವರ ಕೋರಿ ಐಟಿ ಇಲಾಖೆಯ ಸೋಗಿನಲ್ಲಿ ಇ-ಮೇಲ್‌ ಬಂದರೆ ಏನು ಮಾಡಬೇಕು? ಅಂಥ ಇ-ಮೇಲ್‌ಗಳನ್ನು ತೆರೆಯುವ ಗೋಜಿಗೆ ಹೋಗದಿರಿ. ಅಂಥ ಇ-ಮೇಲ್‌ಗೆ ರಿಪ್ಲೆ ಮಾಡದಿರಿ. ಅಂಥ ಇ-ಮೇಲ್‌ನಲ್ಲಿ ಇರುವ ಅಟ್ಯಾಚ್‌ಮೆಂಟ್‌ ಅನ್ನು ತೆರೆಯದಿರಿ. ಅದರಲ್ಲಿ ನಿಮ್ಮ ಕಂಪ್ಯೂಟರ್‌ ಹಾನಿ ಮಾಡಬಲ್ಲ ಕೋಡ್‌ ಇರಬಹುದು. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡದಿರಿ.

ಅಂಥ ಲಿಂಕ್‌ ಅನ್ನು ಕಟ್‌ ಮತ್ತು ಪೇಸ್ಟ್‌ ಮಾಡದಿರಿ. ಕೆಲವೊಮ್ಮೆ ನಿಜವಾದ ವೆಬ್‌ ಸೈಟ್‌ ಲಿಂಕ್‌ ಅನ್ನೇ ಹೋಲುತ್ತವೆ. ಆದ್ದರಿಂದ ನಿಗಾ ವಹಿಸಿ. anti virus software ಅಪ್‌ ಡೇಟ್‌ ಆಗಿರಲಿ. ಆದಾಯ ತೆರಿಗೆ ಇಲಾಖೆಯು ಅಂಥ ಇ-ಮೇಲ್‌ ಅಥವಾ ವೆಬ್‌ ಸೈಟ್‌ ಯುಆರ್‌ ಎಲ್‌ ಅನ್ನು webmanager@incometax.gov.in ಗೆ ಫಾರ್‌ವಾರ್ಡ್‌ ಮಾಡಬೇಕು ಎಂದು ಮನವಿ ಮಾಡಿದೆ. ನೀವು ನಿಜಕ್ಕೂ ರಿಫಂಡ್‌ ಪಡೆಯುವ ಬಗ್ಗೆ ಮಾಹಿತಿ ಪಡೆಯಬೇಕಿದ್ದರೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ ಸೈಟ್‌ನಲ್ಲಿ ಲಾಗಿನ್‌ ಆಗಿ ವಿವರ ಪಡೆಯಬಹುದು.

Exit mobile version