ನವ ದೆಹಲಿ: ಪ್ರಸಕ್ತ 2022-23ರ ಸಾಲಿನಲ್ಲಿ ಬಜೆಟ್ ಅಂದಾಜಿಗಿಂತ ೩ ಲಕ್ಷ ಕೋಟಿ ರೂ.ಗೂ ಹೆಚ್ಚುವರಿ ತೆರಿಗೆ ಸಂಗ್ರಹವನ್ನು ಸರ್ಕಾರ ನಿರೀಕ್ಷಿಸಿದೆ.
ತೆರಿಗೆ ಸಂಗ್ರಹದಲ್ಲಿ 10.9% ರಿಂದ 12.7% ತನಕ ಏರಿಕೆಯಾಗಬಹುದು. ಅಂದರೆ ಬಜೆಟ್ ಅಂದಾಜಿನ 27.6 ಲಕ್ಷ ಕೋಟಿ ರೂ.ಗಿಂತ 10.9ರಿಂದ 12.7% ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಹೆಚ್ಚುವರಿ ಸಂಗ್ರಹದಿಂದ ಸರ್ಕಾರಕ್ಕೆ ಹಣಕಾಸು ವೆಚ್ಚಗಳನ್ನು ಸರಿದೂಗಿಸಲು, ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಗೆ ವೆಚ್ಚ ಮಾಡಲು ಸಹಕಾರಿಯಾಗಲಿದೆ. 2021-22ರಲ್ಲಿ 25.2 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ನವೆಂಬರ್ 10ರ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹದಲ್ಲಿ 30.7% ಹೆಚ್ಚಳವಾಗಿದೆ. 10.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 26.7% ಹೆಚ್ಚಳವಾಗಿದೆ.
ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಲಿರುವುದರಿಂದ ಸರ್ಕಾರಕ್ಕೆ ವಿತ್ತೀಯ ಕೊರತೆಯ ನರ್ವಹಣೆಗೆ ಅನುಕೂಲವಾಗಲಿದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟು, ಜಾಗತಿಕ ಆರ್ಥಿಕ ಮಂದಗತಿಯ ಪರಿಣಾಮ ಆಹಾರ ಮತ್ತು ಇಂಧನ ಸಬ್ಸಿಡಿ ಗಣನೀಯ ಹೆಚ್ಚಳವಾಗಿದೆ. ಈ ಸಲ ವಿತ್ತೀಯ ಕೊರತೆ ಜಿಡಿಪಿಯ 6.4% ಇರಬಹುದು ಎಂದು ಅಂದಾಜಿಸಲಾಗಿದೆ.
ಕಾರಣವೇನು? : ಕೋವಿಡ್ ಬಿಕ್ಕಟ್ಟು ಉಪಶಮನವಾದ ಬಳಿಕ ತೆರಿಗೆ ಪಾವತಿಯಲ್ಲಿ ಸುಧಾರಣೆ, ಆರ್ಥಿಕತೆಯ ಚೇತರಿಕೆ ಹಾಗೂ ಹಣದುಬ್ಬರ ಇದಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.