ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಹಲವಾರು ಬಗೆಯ ಇನ್ವೆಸ್ಟ್ ಮೆಂಟ್‌ಗಳಿಗೆ ತೆರಿಗೆ ಉಳಿತಾಯದ ಅನುಕೂಲ ಸಿಗುತ್ತದೆ. ಪ್ರಾವಿಡೆಂಟ್ ಫಂಡ್, ಪಿಂಚಣಿ ಯೋಜನೆಗಳು, ( Tax saving scheme ) ಜೀವ ವಿಮೆ, ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್, ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್‌ಎಸ್‌ಇ), ಪಿಪಿಎಫ್, ಟ್ಯಾಕ್ಸ್-ಸೇವಿಂಗ್ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಹೂಡಿಕೆ ಮಾಡಿದರೆ ಟ್ಯಾಕ್ಸ್ ರಿಲೀಫ್ ಸಿಗುತ್ತದೆ. ಈ ಯೋಜನೆಗಳಲ್ಲಿ ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ತನಕದ ಹೂಡಿಕೆಗೆ ತೆರಿಗೆ ಉಳಿತಾಯದ ಲಾಭ ಸಿಗುತ್ತದೆ. ಅಂದರೆ ನಿಮ್ಮ ತೆರಿಗೆಗೆ ಅರ್ಹ ಆದಾಯದಲ್ಲಿ ಅಷ್ಟು ಮೊತ್ತಕ್ಕೆ ತೆರಿಗೆ ಇರುವುದಿಲ್ಲ.
ಹೀಗಿದ್ದರೂ, ಪ್ರತಿಯೊಂದು ಉಳಿತಾಯ ಯೋಜನೆಗೂ ಅದರದ್ದೇ ಆದ ಅನುಕೂಲ- ಅನಾನುಕೂಲಗಳು ಇವೆ. ಅವುಗಳನ್ನು ತಿಳಿದುಕೊಂಡು ಹೂಡಿಕೆ ಮಾಡಬೇಕಾಗುತ್ತದೆ. ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ನಲ್ಲಿ ಲಾಕ್ ಇನ್ ಅವಧಿ ಮೂರು ವರ್ಷಗಳ ಅಲ್ಪ ಕಾಲದ್ದಾಗಿರುತ್ತದೆ. ಆದರೆ ಹೋಲಿಸುವುದಿದ್ದರೆ ರಿಸ್ಕ್ ಜಾಸ್ತಿ. ಉದ್ಯೋಗಿಗಳ ಭವಿಷ್ಯನಿಧಿಯಲ್ಲಿ (ಇಪಿಎಫ್) ಲಾಕ್ ಇನ್ ಅವಧಿ ಸುದೀರ್ಘವಾಗಿರುತ್ತದೆ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್‌ಗೆ 55 ವರ್ಷದ ತನಕ ಲಾಕ್ ಇನ್ ಅವಧಿ ಇದ್ದರೆ, ಪಿಪಿಎಫ್‌ಗೆ 15 ವರ್ಷಗಳ ಲಾಕ್ ಇನ್ ಅವಧಿ ಇದೆ. ಆದರೆ ಇವು ಸುರಕ್ಷಿತ ಹೂಡಿಕೆಯ ಫಂಡ್‌ಗಳಾಗಿವೆ. ಆದರೆ ಇವುಗಳ ರಿಟರ್ನ್ ಅಲ್ಪ. ಎನ್‌ಎಸ್‌ಸಿನಲ್ಲಿ ತುಸು ಹೆಚ್ಚು ಆದಾಯ ಸಿಗಬಹುದು. ಇವುಗಳಿಗೆ ಹೋಲಿಸಿದರೆ ಇಎಲ್‌ಎಸ್‌ಎಸ್‌ನಲ್ಲಿ ಆದಾಯ ಹೆಚ್ಚು.
ಸಾರ್ವಜನಿಕ ಭವಿಷ್ಯ ನಿಧಿ ( Public Provident Fund -PPF): ನಿವೃತ್ತಿ ಬದುಕಿನ ಉಳಿತಾಯಕ್ಕೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ವಿಧಾನ. ಇದರ ಜತೆಗೆ ತೆರಿಗೆ ಕಡಿತದ ಅನುಕೂಲವನ್ನೂ ಪಡೆಯಬಹುದು. ಒಂದು ವೇಳೆ ಸೆಕ್ಷನ್ 80 ಸಿ ಅಡಿಯಲ್ಲಿ ಟ್ಯಾಕ್ಸ್ ರಿಲೀಫ್‌ಗೆ ಬೇಕಾಗುವಷ್ಟನ್ನು ಇತರ ಸಾಧನಗಳೇ ಕೊಡುತ್ತಿದ್ದರೂ, ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದೇ.
ಪಿಪಿಎಫ್‌ನಲ್ಲಿ ವರ್ಷಕ್ಕೆ 500 ರೂ. ಕನಿಷ್ಠ ಹೂಡಿಕೆಯಿಂದ ಆರಂಭಿಸಬಹುದು. ಇದು 15 ವರ್ಷಗಳ ಯೋಜನೆಯಾಗಿದೆ. ವರ್ಷಕ್ಕೆ ಗರಿಷ್ಠ 1.50 ಲಕ್ಷ ರೂ. ತನಕ ಇದರಲ್ಲಿ ಹೂಡಿಕೆ ಮಾಡಬಹುದು. ಪಿಪಿಎಫ್ ಹೂಡಿಕೆಗೆ ಈಗ 7.10% ಬಡ್ಡಿ ದರ ಸಿಗುತ್ತಿದೆ. ಪಿಪಿಎಫ್‌ನಲ್ಲಿ ಸಿಗುವ ಬಡ್ಡಿ ಎಷ್ಟೇ ಇದ್ದರೂ ತೆರಿಗೆ ಮುಕ್ತ. ಪಿಪಿಎಫ್ ಖಾತೆಯಲ್ಲಿ ಇರುವ ಇಡೀ ಬ್ಯಾಲೆನ್ಸ್ ವೆಲ್ತ್ ಟ್ಯಾಕ್ಸ್‌ನಿಂದ ಮುಕ್ತವಾಗಿರುತ್ತದೆ. ಅದಕ್ಕೆ ಯಾವುದೇ ಮಿತಿ ಇಲ್ಲ. ಆದರೆ ಈಗ ಬ್ಯಾಂಕ್ ಬ್ಯಾಲೆನ್ಸ್ ಕೂಡ ವೆಲ್ತ್ ಟ್ಯಾಕ್ಸ್‌ನಿಂದ ಮುಕ್ತವಾಗಿದೆ.
ಇದನ್ನೂ ಓದಿ: Money Guide : ತೆರಿಗೆ ಉಳಿಸಲು ಮತ್ತೊಂದು ಮನೆ ಖರೀದಿಸುವುದು ಸೂಕ್ತವೇ?
ಪಿಪಿಎಫ್ ಖಾತೆಯಲ್ಲಿ ಮಾಡುವ ಉಳಿತಾಯವು ಕಷ್ಟಕಾಲಕ್ಕೆ ನೆರವಾಗುತ್ತದೆ. ಪಿಪಿಎಫ್ ಖಾತೆಯಲ್ಲಿ ಇರುವ ಹಣವನ್ನು ಜಪ್ತಿ ಮಾಡಲು ಭಾರತದಲ್ಲಿನ ಯಾವ ಕೋರ್ಟ್ ಕೂಡ ಆದೇಶಿಸುವ ಹಾಗಿಲ್ಲ. ಆದ್ದರಿಂದ ಸಾಲದಾತರು ಪಿಪಿಎಫ್ ಅಕೌಂಟ್‌ನಲ್ಲಿರುವ ಹಣದ ಮೇಲೆ ಕ್ಲೇಮ್ ಮಾಡಿಕೊಳ್ಳುವಂತಿಲ್ಲ. ಅಂಚೆ ಕಚೇರಿ ಹಾಗೂ ಬ್ಯಾಂಕ್ ಶಾಖೆಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ಪಿಪಿಎಫ್ ನಲ್ಲಿ ಮೂರನೇ ವರ್ಷದಿಂದ ಸಾಲ ತೆಗೆದುಕೊಳ್ಳಬಹುದು. ಬ್ಯಾಲೆನ್ಸ್‌ನಲ್ಲಿ 25% ಮೊತ್ತಕ್ಕೆ ಸಮನಾಗುವಷ್ಟು ಸಾಲ ಸಿಗುತ್ತದೆ. 36 ತಿಂಗಳೊಳಗೆ ಮರು ಪಾವತಿಸಿದರೆ 1 % ಬಡ್ಡಿ ಇರುತ್ತದೆ. 36 ತಿಂಗಳು ಮೀರಿದರೆ ಬಳಿಕ 6% ಬಡ್ಡಿ ದರ ಅನ್ವಯವಾಗುತ್ತದೆ.