ನವ ದೆಹಲಿ: ತಂತ್ರಜ್ಞಾನ ವಲಯದಲ್ಲಿ ಈ ವರ್ಷದ ಉದ್ಯೋಗ ಕಡಿತದ (Tech layoffs) ಮಟ್ಟ 2008ರ ಮಹಾ ಆರ್ಥಿಕ ಹಿಂಜರಿತದ ಅವಧಿಯನ್ನೂ ಮೀರಿದೆ ಎಂದು ವರದಿಯಾಗಿದೆ.
2008ರಲ್ಲಿ ಅಮೆರಿಕದ ಬ್ಯಾಂಕಿಂಗ್ ದಿಗ್ಗಜ ಲೆಹ್ಮನ್ ಬ್ರದರ್ಸ್ ದಿವಾಳಿಯಾಗುವುದರೊಂದಿಗೆ ಜಾಗತಿಕ ಮಹಾ ಆರ್ಥಿಕ ಹಿಂಜರಿತ (Great Recession) ಸಂಭವಿಸಿತ್ತು. ಆಗ ತಂತ್ರಜ್ಞಾನ ಕಂಪನಿಗಳು 65,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ವರ್ಷ 965 ಟೆಕ್ ಕಂಪನಿಗಳಲ್ಲಿ 150,000 ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಚಾಲೆಂಜರ್, ಗ್ರೇ & ಕ್ರಿಸ್‌ಮಸ್ ಕಂಪನಿಯ (Challenger, Gray & Christmas) ವರದಿ ತಿಳಿಸಿದೆ.
ಮೆಟಾ, ಅಮೆಜಾನ್, ಟ್ವಿಟರ್, ಮೈಕ್ರೊಸಾಫ್ಟ್, ಸೇಲ್ಸ್‌ಫೋರ್ಸ್ ಮತ್ತಿತರ ಟೆಕ್ ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದು, 2023ರಲ್ಲಿ ಮತ್ತಷ್ಟು ಉದ್ಯೋಗ ನಷ್ಟವನ್ನು ನಿರೀಕ್ಷಿಸಲಾಗಿದೆ ಎಂದು ಚಾಲೆಂಜರ್ ವರದಿ ಎಚ್ಚರಿಸಿದೆ.
layoffs.fyi ವೆಬ್ ಸೈಟ್ ಪ್ರಕಾರ ಕೋವಿಡ್-19 ಬಿಕ್ಕಟ್ಟಿನ ಬಳಿಕ 1,495 ಟೆಕ್ ಕಂಪನಿಗಳು 246,267 ಸಿಬ್ಬಂದಿಯನ್ನು ವಜಾಗೊಳಿಸಿವೆ. 2022ರಲ್ಲಿ ಇದು ತೀವ್ರವಾಗಿತ್ತು. 2023ರಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ತಿಳಿಸಿದೆ. ನವೆಂಬರ್ ಮಧ್ಯ ಭಾಗದಲ್ಲಿ ಅಮೆರಿಕದಲ್ಲಿ 73 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿವೆ. ಮೆಟಾ, ಟ್ವಿಟರ್, ಸೇಲ್ಸ್‌ಫೋರ್ಸ್, ನೆಟ್ ಫ್ಲಿಕ್ಸ್, ಸಿಸ್ಕೊ ಮೊದಲಾದ ಕಂಪನಿಗಳು ಹುದ್ದೆ ಕಡಿತಗೊಳಿಸಿವೆ. ಭಾರತದಲ್ಲಿ 17,000 ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.