Site icon Vistara News

2000 Notes withdrwan : ನೋಟು ವಿನಿಮಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

2000 notes

ನವ ದೆಹಲಿ: ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಯಾವುದೇ ಐಡಿ ಪ್ರೂಫ್‌, ಸ್ಲಿಪ್‌ ಇಲ್ಲದೆಯೂ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸೋಮವಾರ ವಜಾಗೊಳಿಸಿದೆ. (2000 Notes withdrwan) ಈ ಹಿಂದೆ ದಿಲ್ಲಿ ಹೈಕೋರ್ಟ್‌ ಈ ಕುರಿತ ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

2,000 ರೂ. ನೋಟುಗಳನ್ನು ಹಿಂತೆಗೆದುಕೊಂಡಿರುವುದು ಕಾರ್ಯಾಂಗದ ನೀತಿಯಾಗಿದೆ (executive policy decision) ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌ ನರಸಿಂಹ ಅವರನ್ನು ಒಳಗೊಂಡಿದ್ದ ಪೀಠ ತಿಳಿಸಿದೆ. ವಕೀಲ ಅಶ್ವಿನಿ ಉಪಾಧ್ಯಾಯ ಅವರು ವೈಯಕ್ತಿಕ ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ದಿಲ್ಲಿ ಹೈಕೋರ್ಟ್‌ ಕಳೆದ ಮೇ 29ರಂದು ಐಡಿ ಮತ್ತು ಸ್ಲಿಪ್‌ ಇಲ್ಲದೆಯೇ 2,000 ರೂ. ನೋಟು ವಿನಿಮಯವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತ್ತು. ಜನತೆಗೆ ಉಂಟಾಗಬಹುದಾದ ಅನಾನುಕೂಲತೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನೀತಿಯ ಭಾಗವಾಗಿದೆ ಎಂದು ತಿಳಿಸಿತ್ತು. ಹಾಗೂ ಅರ್ಜಿಯನ್ನು ವಜಾಗೊಳಿಸಿತ್ತು.

ಎರಡು ಸಾವಿರ ರೂ. ಮುಖಬೆಲೆಯ ನೋಟನ್ನು ಯಾವುದೇ ಐಡಿ ಪ್ರೂಫ್‌, ಸ್ಲಿಪ್‌ ಇಲ್ಲದೆಯೆ ವಿನಿಮಯ ಮಾಡಲು ಅವಕಾಶ ಕೊಡುವುದರಿಂದ ಕ್ರಿಮಿನಲ್‌ ಮತ್ತು ಭಯೋತ್ಪಾದಕರಿಗೆ ಅನುಕೂಲವಾದೀತು ಎಂದು ಉಪಾಧ್ಯಾಯ ಅವರು ದೂರು ಸಲ್ಲಿಸಿದ್ದರು. ಆರ್‌ಬಿಐ ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಲು ಮೇ 23ರಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. (2000 Notes Withdrwan) ಜನತೆ ಯಾವುದೇ ದಾಖಲೆಯ ಅಗತ್ಯ ಇಲ್ಲದೆಯೇ 2000 ರೂ. ನೋಟುಗಳನ್ನು ಬದಲಿಸಬಹುದು. 2023ರ ಸೆಪ್ಟೆಂಬರ್‌ 30 ತನಕ ವಿನಿಮಯ ಮಾಡಬಹುದು. ಬಳಿಕ ಕೂಡ ನೋಟಿಗೆ ಮಾನ್ಯತೆ ಇರುತ್ತದೆ.

ಇದನ್ನೂ ಓದಿ: Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ

ಆಧಾರ್‌ ಕಾರ್ಡ್‌ ಅಥವಾ ಯಾವುದೇ ಅಧಿಕೃತ ವೆರಿಫೈಡ್‌ ಡಾಕ್ಯುಮೆಂಟ್ಸ್‌ ಅಗತ್ಯ ಇಲ್ಲ. ಯಾವುದೇ ಅರ್ಜಿಯನ್ನೂ ಭರ್ತಿ ಮಾಡಬೇಕಾಗಿಲ್ಲ. ಆದರೆ ಒಂದು ಸಲಕ್ಕೆ ಒಟ್ಟು 20,000 ರೂ. ಮೌಲ್ಯದ 2,000 ರೂ. ನೋಟುಗಳಿಗೆ ಇದು ಅನ್ವಯವಾಗುತ್ತದೆ.

Exit mobile version