ನವ ದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ಬ್ಯಾಂಕ್‌ಗಳ ಮುಂದಿನ ಹಂತದ ವಿಲೀನವನ್ನು ಶೀಘ್ರದಲ್ಲಿ ಆರಂಭಿಸಲಿದೆ. ವಿಸ್ತೃತ ಅಧ್ಯಯನದ ಬಳಿಕ ಪ್ರಕ್ರಿಯೆ ಶುರುವಾಗಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿಲೀನ ಏಕೆ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾದರಿಯಲ್ಲಿ ಕನಿಷ್ಠ ೪-೫ ಬೃಹತ್ ಮತ್ತು ಪ್ರಬಲ ಬ್ಯಾಂಕ್‌ಗಳನ್ನು ಸೃಷ್ಟಿಸುವುದು ಇದರ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸಾರ್ವಜನಿಕ ವಲಯದಲ್ಲಿ ೭ ದೊಡ್ಡ ಬ್ಯಾಂಕ್‌ಗಳು ಮತ್ತು ೫ ಸಣ್ಣ ಬ್ಯಾಂಕ್‌ಗಳು ಇವೆ. ಸಂಬಂಧಿಸಿದ ಬ್ಯಾಂಕ್‌ಗಳಿಗೆ ತಿಂಗಳಿನೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಜತೆಗೂ ಸರ್ಕಾರ ಮಾತುಕತೆ ನಡೆಸಲಿದೆ.
ಇದುವರೆಗಿನ ಬ್ಯಾಂಕ್ ವಿಲೀನ
- ೨೦೧೭- ಎಸ್ಬಿಐನ ೫ ಅಧೀನ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ಗಳ ವಿಲೀನ
- ೨೦೧೯- ಬ್ಯಾಂಕ್ ಆಫ್ ಬರೋಡಾ, ವಿಜಯ ಮತ್ತು ದೇನಾ ಬ್ಯಾಂಕ್‌ಗಳ ವಿಲೀನ
- ೨೦೨೦- ಮೆಗಾ ವಿಲೀನ ಆರಂಭ
- ಪಂಜಾಬ್ ನ್ಯಾಷನಲ್ ಬ್ಯಾಂಕ್ ಜತೆ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ವಿಲೀನ
- ಕೆನರಾ ಬ್ಯಾಂಕ್ ಜತೆ ಸಿಂಡಿಕೇಟ್ ಬ್ಯಾಂಕ್ ವಿಲೀನ
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನ
ಕಳೆದ ೨೦೧೭ರಲ್ಲಿ ಸಾರ್ವಜನಿಕ ವಲಯದ ೨೭ ಬ್ಯಾಂಕ್‌ಗಳು ಇತ್ತು. ಸರ್ಕಾರ ೨೦೧೯ರಲ್ಲಿ ೧೦ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ೪ ಬೃಹತ್ ಬ್ಯಾಂಕ್‌ಗಳಾಗಿ ವಿಲೀನಗೊಳಿಸುವುದಾಗಿ ಘೋಷಿಸಿತ್ತು. ೨೦೨೦ರ ಏಪ್ರಿಲ್‌ನಿಂದ ವಿಲೀನ ಅನುಷ್ಠಾನವಾಗಿತ್ತು.
ಎಸ್‌ಬಿಐ ಬಿಟ್ಟು ಉಳಿದೆಲ್ಲ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಲಹೆ
ನ್ಯಾಶನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‌ಸಿಎಇಆರ್) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರತುಪಡಿಸಿ ಉಳಿದೆಲ್ಲ ಸಾರ್ವಜನಿಕ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಇತ್ತೀಚೆಗೆ ಸಲಹೆ ನೀಡಿದೆ.
ಎನ್‌ಸಿಎಇಆರ್ ನಿರ್ದೇಶಕ ಪೂನಮ್ ಗುಪ್ತಾ ಮತ್ತು ಎಕನಾಮಿಸ್ಟ್ ಅರವಿಂದ್ ಪನಗಾರಿಯಾ ಸಲ್ಲಿಸಿರುವ ವರದಿಯಲ್ಲಿ, ಬಹುತೇಕ ಸಾರ್ವಜನಿಕ ಬ್ಯಾಂಕ್‌ಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಬ್ಯಾಂಕ್‌ಗಳ ಆದಾಯ ಕಡಿಮೆಯಾಗಿದೆ. ಆದರೆ ನಿರ್ವಹಣೆಯ ಖರ್ಚು ವೆಚ್ಚಗಳು ಏರಿಕೆಯಾಗಿವೆ. ಹೀಗಾಗಿ ಖಾಸಗೀಕರಣಗೊಳಿಸುವುದು ಸೂಕ್ತ ಎಂದು ತಿಳಿಸಿದೆ. ಸಾರ್ವಜನಿಕ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಮುಂಬರುವ ಮುಂಗಾರು ಅಧಿವೇಶನದಲ್ಲಿ ಕಾಯಿದೆಗೆ ತಿದ್ದುಪಡಿ ತರುವ ಸಾಧ್ಯತೆ ಇದೆ.