ಹೂವಪ್ಪ, ಬೆಂಗಳೂರು
ಅಕ್ಕಿ ಬೆಲೆ ಏರಿಕೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ ಜನಸಾಮಾನ್ಯರನ್ನು ಕಂಗೆಡಿಸಿದೆ. (Vegetables Prices ) ಮದುವೆ ಸೀಸನ್, ಹಬ್ಬಗಳ ಸಾಲು ಬರುತ್ತಿವೆ. ಇಂತಹ ಸಂದರ್ಭದಲ್ಲೇ ತರಕಾರಿ ಬೆಲೆಗಳು ಏರುತ್ತಿವೆ. ಟೊಮ್ಯಾಟೊ, ಕ್ಯಾರೆಟ್, ಹುರುಳಿಕಾಯಿ ಬೆಲೆ ಏರಿದೆ.
ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ 90% ರಿಂದ 50%ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಏರಿದೆ. ಹೆಚ್ಚು ತರಕಾರಿ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಪ್ರದೇಶಗಳಲ್ಲಿ ಕಳೆದ ತಿಂಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳು ನೆಲಕಚ್ಚಿವೆ. ಹೂವು, ಹೀಚುಗಾಯಿ ನೆಲಕ್ಕೆ ಬಿದ್ದು ಕೊಳೆಯುವುದಲ್ಲದೆ ನಿರಂತರ ಮಳೆಗೆ ಗಿಡಗಳಲ್ಲೇ ಕೊಳೆಯುತ್ತಿದೆ. ಇದರ ಪರಿಣಾಮ ತರಕಾರಿ ಇಳುವರಿ ಕ್ಷೀಣಿಸಿದೆ. ಇದು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಲು ಕಾರಣವಾಗಿದೆ ಎನ್ನುತ್ತಾರೆ ಎಪಿಎಂಸಿ ತರಕಾರಿ ವ್ಯಾಪಾರಿ ಭೋರೆಗೌಡ.
ಬಹುತೇಕ ತರಕಾರಿಗಳು ದುಬಾರಿ: ಬದನೆಕಾಯಿ, ಬೆಂಡೆಕಾಯಿ, ಸೌತೆ ಕಾಯಿ ಹೊರತುಪಡಿಸಿ ಉಳಿದ ತರಕಾರಿಗಳು ತುಟ್ಟಿಯಾಗಿವೆ. ಕಳೆದ ತಿಂಗಳ ಹಿಂದೆ ಗ್ರಾಹಕರು ಚಿಲ್ಲರೆ ದರದಲ್ಲಿ ಕೆಜಿಗೆ 15-20 ರೂ. ಗೆ ಸಿಗುತ್ತಿದ್ದ ಟೊಮ್ಯಾಟೊವನ್ನು ಈಗ 40-50 ರೂ. ಗೆ ಕೊಳ್ಳಬೇಕಾಗಿದೆ. ಹುರಳೀಕಾಯಿಗೆ 30-40 ರೂ. ಇದ್ದ ಬೆಲೆ ಈಗ 80-120 ರೂ.ಗೆ ಏರಿದೆ. ಕ್ಯಾರೆಟ್‌ಗೆ 30-40 ರೂ. ಇದ್ದ ಬೆಲೆ 80-100ರೂ. ಗೆ ಏರಿಕೆಯಾಗಿದೆ. ನುಗ್ಗೆಕಾಯಿಗೆ 50-60 ರೂ. ಗೆ ಇದ್ದ ಬೆಲೆ ಈಗ 80-90 ರೂ.ಗೆ ಜಿಗಿದಿದೆ.
ಹಾಗಲಕಾಯಿ,ಮೂಲಂಗಿ, ಹಿರೇಕಾಯಿ, ಗೊರಿಕಾಯಿ, ಕ್ಯಾಪ್ಸಿಕಮ್‌ಗೆ 30 ರೂ. ಇದ್ದ ಬೆಲೆ 50-60 ಏರಿಕೆಯಾಗಿದೆ. ಬೆಂಡೆಕಾಯಿ ದರ ಕೆ.ಜಿಗೆ 30-40 ರೂ. ಇದೆ.
ಹೀಗೆ ಮಳೆ ಮುಂದುವರೆದರೆ ತರಕಾರಿ ಬೆಳೆ ಗಳು ಮತ್ತಷ್ಟು ಬೆಳೆ ನಾಶವಾಗುತ್ತವೆ. ಹೊಸ ಬೆಳೆ ಮಾಡಲು ಮಳೆ ಬಿಡುತ್ತಿಲ್ಲ. ಮುಂದೆ ದಸರಾ, ದೀಪಾವಳಿ ಇದೆ. ಹೀಗಾಗಿ ಬೇಡಿಕೆ ಹೆಚ್ಚಾದಂತೆ ತರಕಾರಿಗಳ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ ಹೊರತು ಬೆಲೆ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ತರಕಾರಿ ವರ್ತಕರ ಸಂಘದ ನಿರ್ದೇಶಕರು ದೇವರಾಜ.
ಟೊಮ್ಯಾಟೊ ದರ ಹೆಚ್ಚಳ
ಟೊಮ್ಯಾಟೊ ಬೆಲೆ ಗ್ರಾಹಕರಿಗೆ ಮತ್ತು ರೈತರ ಜತೆಗೆ ಕಣ್ಣಮುಚ್ಚಾಲೆ ಆಡುತ್ತಿದೆ. ದಿಡೀರ್ ಬೆಲೆ ಏರಿಕೆ ಇಳಿಕೆ ಕಾಣುತ್ತಿದೆ ಈ ಹಿಂದೆ ಬೆಳೆ ಇದ್ದಾಗ ಬೆಲೆ ಇಲ್ಲದೆ ಕೆಜಿಗೆ 2-3 ರೂ.ಗೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಚಿಲ್ಲರೆ ದರದಲ್ಲಿ 15-20 ರೂ.ಗೆ ಸಿಗುತ್ತಿದ್ದ ಟೊಮ್ಯಾಟೊಗೆ ಈಗ 40-50 ರೂ. ಕೊಡಬೇಕಾಗಿದೆ.12 ಕೆಜಿ ತುಂಬಿದ ಸಣ್ಣ ಬಾಕ್ಸ್‌ಗೆ ಕಳೆದೆರಡು ತಿಂಗಳ ಹಿಂದೆ ಇದ್ದ ಸಗಟು ಬೆಲೆ 80-100 ರೂ. ಅದು ಈಗ 300-400 ರೂ. ಗೆ ಏರಿಕೆಯಾಗಿದೆ.
ಕೋಲಾರ ಮಾರುಕಟ್ಟೆ ಟೊಮ್ಯಾಟೊ ಮಾರುಕಟ್ಟೆ ಎಂದು ಹೆಸರುವಾಸಿಯಾಗಿದ್ದು, ಉತ್ತರ ಭಾರತದ ಮಾರುಕಟ್ಟೆಗಳಾದ ಕೋಲ್ಕತ್ತಾ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶಗಳಿಗೆ ಇಲ್ಲಿಂದ ಟೊಮ್ಯಾಟೊ ರವಾನೆಯಾಗುತ್ತದೆ. ಆದರೆ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಹೋಗುತ್ತಿಲ್ಲ. ಮಳೆಯಿಂದ ಬೆಳೆಹಾನಿಯಾಗಿದ್ದು, ಗುಣಮಟ್ಟದ ಟೊಮ್ಯಾಟೊ ಸಿಗುತ್ತಿಲ್ಲ. ಡ್ಯಾಮೇಜ್ ಟೊಮೊಟೊ ತುಂಬಿ ಕಳಿಸಿದರೆ ದೂರದ ಪ್ರದೇಶಕ್ಕೆ ಹೋಗುವಷ್ಟರಲ್ಲಿ ಮತ್ತಷ್ಟು ಡ್ಯಾಮೇಜ್ ಆಗಿ ಬೆಲೆ ಕಳೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ಕೋಲಾರದ ವ್ಯಾಪಾರಿಗಳು. ದಾವಣಗೆರೆ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸ್ವಲ್ಪ ಬೆಳೆ ಬಂದಿದೆ. ಹೀಗಾಗಿ ಬೆಲೆ ನಿಯಂತ್ರ ಣದಲ್ಲಿದೆ ಇಲ್ಲದಿದ್ದರೆ ಬೆಲೆ 80 ರೂ. ಆಗುತಿತ್ತು ಎಂದು ಹೇಳುತ್ತಾರೆ ಬೆಂಗಳೂರು ಎಪಿಎಂಸಿ ವ್ಯಾಪಾರಿಗಳು.
ನಿಂಬೆ ಹಣ್ಣು ಬೆಲೆ ಭಾರಿ ಹೆಚ್ಚಳ
ನಿಂಬೆಹಣ್ಣು ಯಾವುದಕ್ಕೆ ಬೇಡ ಹೇಳಿ, ಪಾನಕ, ಚಿತ್ರಾನ್ನ, ಮಾಂಸಾಹಾರಿ ಖಾದ್ಯಗಳು ಸೇರಿದಂತೆ ಎಲ್ಲದಕ್ಕೂ ಬೇಕು.ಆದರೆ ನಿಂಬೆ ಹಣ್ಣಿನ ದರ ಗಗನಕ್ಕೇರಿದೆ. ನಿಂಬೆಹಣ್ಣು ಮುಖ್ಯವಾಗಿ ವಿಜಯಪುರದಿಂದ ಬರುತ್ತದೆ. ಆದರೆ ಕಳೆದ ಹದಿನೈದು ದಿನಗಳಿಂದ ದಾಸ್ತಾನು ಖಾಲಿಯಾಗಿದೆ. ಪೂರೈಕೆ ಬಾರಿ ಕಡಿಮೆಯಾಗಿದೆ ಹೀಗಾಗಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಕೆ ಆರ್ ಮಾರುಕಟ್ಟೆ ನಿಂಬೆಹಣ್ಣು ವ್ಯಾಪಾರಿ ಕೃಷ್ಣಕುಮಾರ್. ಉತ್ತಮ ಗುಣಮಟ್ಟದ ಒಂದು ನಿಂಬೆಹಣ್ಣು ಬೆಲೆ 8-10ರೂ. ಹಾಗೂ ಸಣ್ಣ ಗಾತ್ರದ ಹಣ್ಣುಗಳನ್ನು 5-6 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಉತ್ಪಾದನೆಯಲ್ಲಿ ಕುಸಿತ: ಆಂಧ್ರಪ್ರದೇಶ, ಕರ್ನಾಟಕದಲ್ಲಿ ಲಿಂಬೆ ಬೆಳೆಯುತ್ತಿದ್ದು, ಕಳೆದ ಎರಡು ವರ್ಷ ಗಳಿಂದ ಹೆಚ್ಚು ಮಳೆಯ ಪ್ರಭಾವದಿಂದ ಉತ್ಪಾದನೆಯಲ್ಲಿ 60-70 ರಷ್ಟು ಕುಸಿತವಾಗಿದೆ.
ಸೊಪ್ಪಿನ ಬೆಲೆ ಏರಿಕೆ
ಮಳೆಯ ಅಬ್ಬರಕ್ಕೆ ಸೊಪ್ಪು ಬೆಳೆ ಶೇ. 60-70 ನಾಶವಾಗಿದೆ. ಅಲ್ಪ ಸ್ವಲ್ಪ ಇದ್ದ ಸೊಪ್ಪು ಅಲ್ಲಲ್ಲೇ ಮಾರಾಟವಾಗುತ್ತಿದೆ. ಇದರ ಪರಿಣಾಮ ಸೊಪ್ಪುಗಳ ಬೆಲೆ ಗಗನಕ್ಕೆರಿದೆ. ಚಿಲ್ಲರೆ ಅಂಗಡಿಗಳಲ್ಲಿ ಸೊಪ್ಪುಗಳೇ ಕಾಣುತ್ತಿಲ್ಲ. ಕಳೆದ ತಿಂಗಳ ಹಿಂದೆ ಒಂದು ಕಟ್ಟಿಗೆ ಮೆಂತೆ 30-35 ರೂ. ಇತ್ತು. ಈಗ 40-50 ರೂ.ಗೆ ಏರಿದೆ. ಕೊತ್ತಂಬರಿ ಸೊಪ್ಪು 70-90 ರೂ.ಗೆ ಜಿಗಿದಿದೆ. ಚಕೊತಾ, ಪಾಲಾಕ್, ಹರಿವೆ ಸೊಪ್ಪುಗಳ ಬೆಲೆ 30-50 ರೂ. ಗೆ ಏರಿಕೆಯಾಗಿದೆ ಎನ್ನುತ್ತಾರೆ ಎಪಿಎಂಸಿ ಸೊಪ್ಪುಗಳ ವ್ಯಾಪಾರಿ ಮಣಿ.