ನವ ದೆಹಲಿ: ಅದಾನಿ ಗ್ರೂಪ್ ವಿರುದ್ಧದ ಹಿಂಡೆನ್‌ಬರ್ಗ್ ವರದಿಯ ಬಗ್ಗೆ ತನಿಖೆಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಗುರುವಾರ ಒಪ್ಪಿದೆ. ಶುಕ್ರವಾರ ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ (Adani group) ಹಿಂಡೆನ್ ಬರ್ಗ್ ವರದಿಯ ತನಿಖೆ ನಡೆಸಲು ನಿರ್ದೇಶಿಸುವಂತೆ ಸುಪ್ರೀಂಕೋರ್ಟ್‌ಗೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ವಕೀಲ ವಿಶಾಲ್ ತಿವಾರಿ ಅವರು ಸಾರ್ವಜನಿಕ ಹಿತಾಸಕ್ತಿ (PIL) ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶವನ್ನು ಗುರುವಾರ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರನ್ನು ಪೀಠವು ಒಳಗೊಂಡಿದೆ. ಫೆ.10ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ. ದೊಡ್ಡ ಕಾರ್ಪೊರೇಟ್ ಕುಳಗಳಿಗೆ 500 ಕೋಟಿ ರೂ.ಗಿಂತ ಹೆಚ್ಚಿನ ಸಾಲ ನೀಡುವಾಗ ಮಂಜೂರಾತಿಯ ನೀತಿಯನ್ನು ಪರಿಶೀಲಿಸಲು ವಿಶೇಷ ಸಮಿತಿ ರಚಿಸಬೇಕು ಎಂದೂ ಅವರು ಕೋರಿದ್ದಾರೆ. ಕಳೆದ ವಾರ ವಕೀಲ ಎಂ.ಎಲ್ ಶರ್ಮಾ ಅವರು ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ವಿರುದ್ಧ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಜಿವಿಕೆ ಗ್ರೂಪ್ ಅಧ್ಯಕ್ಷರ ಹೇಳಿಕೆ: ಮುಂಬಯಿ ಏರ್‌ಪೋರ್ಟ್ ಅನ್ನು ಮಾರಾಟ ಮಾಡುವ ವಿಚಾರದಲ್ಲಿ ಅದಾನಿ ಗ್ರೂಪ್ ಅಥವಾ (Adani Group) ಯಾರಿಂದಲೂ ಯಾವುದೇ ಒತ್ತಡ ಇದ್ದಿರಲಿಲ್ಲ ಎಂದು ಜಿವಿಕೆ ಗ್ರೂಪ್ ಅಧ್ಯಕ್ಷ ಸಂಜಯ್ ರೆಡ್ಡಿ ಮಂಗಳವಾರ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ, ಮುಂಬಯಿ ಏರ್ ಪೋರ್ಟ್ ಅನ್ನು ಸಿಬಿಐ ಮತ್ತು ಇ.ಡಿಯನ್ನು ಬಳಸಿ ಬಲವಂತವಾಗಿ ಜಿವಿಕೆಯಿಂದ ಕಿತ್ತುಕೊಳ್ಳಲಾಯಿತು ಎಂಬ ಹೇಳಿಕೆಗೆ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಅದಾನಿ ಗ್ರೂಪ್ 2021ರ ಜುಲೈನಲ್ಲಿ ಮುಂಬಯಿ ಏರ್‌ಪೋರ್ಟ್ ನಿಯಂತ್ರಣವನ್ನು ವಶಪಡಿಸಿಕೊಂಡಿತ್ತು. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಸಂಜಯ್ ರೆಡ್ಡಿ, ಮುಂಬಯಿ ಏರ್ ಪೋರ್ಟ್ ಮಾರಲು ಯಾರಿಂದಲೂ ತಮಗೆ ಒತ್ತಡ ಇದ್ದಿರಲಿಲ್ಲ ಎಂದು ತಿಳಿಸಿದ್ದಾರೆ.