ನವ ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರಿಗೆ ೪ ತಿಂಗಳ ಸೆರೆವಾಸದ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಸೋಮವಾರ ಪ್ರಕಟಿಸಿದೆ.
ಮಲ್ಯಗೆ ಸುಪ್ರೀಂಕೋರ್ಟ್ ೨,೦೦೦ ರೂ.ಗಳ ದಂಡವನ್ನೂ ವಿಧಿಸಿದೆ. ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ ೪೦ ದಶಲಕ್ಷ ಡಾಲರ್ ಹಣವನ್ನು ( 312 ಕೋಟಿ ರೂ.) ಅಕ್ರಮವಾಗಿ ವರ್ಗಾಯಿಸಿದ ಆರೋಪವನ್ನು ಮಲ್ಯ ಎದುರಿಸುತ್ತಿದ್ದರು.
ಈ ೪೦ ದಶಲಕ್ಷ ಡಾಲರ್ ಹಣವನ್ನು ೪ ವಾರದೊಳಗೆ ಠೇವಣಿ ಇಡಬೇಕು. ಇಲ್ಲದಿದ್ದರೆ ಆಸ್ತಿ ಜಪ್ತಿ ಮಾಡಲಾಗುವುದು ಎಂದೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್ ನರಸಿಂಹ ಅವರನ್ನು ಒಳಗೊಂಡಿದ್ದ ಪೀಠ ಈ ತೀರ್ಪು ನೀಡಿದೆ.
ಮಲ್ಯ ವಿರುದ್ಧದ ಕೇಸ್ ಏನು?
ಕಿಂಗ್‌ಫಿಶರ್ ಏರ್‌ಲೈನ್ಸ್‌ನ ೯,೦೦೦ ಕೋಟಿ ರೂ. ಸುಸ್ತಿ ಸಾಲದ ಮರು ವಸೂಲು ಪ್ರಕರಣದಲ್ಲಿ ವಿಜಯ್ ಮಲ್ಯ ಪ್ರಮುಖ ಆರೋಪಿ. ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಮಲ್ಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಈ ಕೇಸ್‌ನಲ್ಲಿ ಮಲ್ಯ ನ್ಯಾಯಾಂಗ ನಿಂದನೆಯನ್ನೂ ಎದುರಿಸುತ್ತಿದ್ದಾರೆ.
೨೦೧೬ರಲ್ಲಿ ಬ್ರಿಟನ್ ಮೂಲದ ಸ್ಪಿರಿಟ್ ತಯಾರಕ ಡಿಯಾಜಿಯೊ ಜತೆಗಿನ ವ್ಯವಹಾರದಲ್ಲಿ ೪೦ ದಶಲಕ್ಷ ಡಾಲರ್ ಹಣದ ಲೆಕ್ಕವನ್ನು ಕೋರ್ಟ್‌ಗೆ ಒಪ್ಪಿಸುವಲ್ಲಿ ಮಲ್ಯ ವಿಫಲರಾಗಿದ್ದರು. ಮಲ್ಯ ಈ ಹಣವನ್ನು ಮಕ್ಕಳ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಇದು ನ್ಯಾಯಾಂಗ ನಿಂದನೆ ಕೇಸ್ ಕೂಡ ಆಗಿದ್ದು, ಸುಪ್ರೀಂಕೋರ್ಟ್ ಮಲ್ಯಗೆ ಇಂದು ಶಿಕ್ಷೆ ನೀಡುವ ಸಾಧ್ಯತೆ ಇದೆ.
ವಿಜಯ್ ಮಲ್ಯ ಕಳೆದ ೨೦೧೬ರ ಮಾರ್ಚ್‌ನಿಂದಲೂ ಲಂಡನ್‌ನಲ್ಲಿ ಇದ್ದಾರೆ. ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿ ೨೦೧೭ರಲ್ಲಿ ಲಂಡನ್ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಪ್ರಯತ್ನ ಮುಂದುವರಿದಿದೆ.