ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ವಿಶ್ವ ವಿಖ್ಯಾತ ವೆಂಕಟೇಶ್ವರ ದೇವಾಲಯದಲ್ಲಿ ಒಂದೇ ದಿನ ದಾಖಲೆಯ 10 ಕೋಟಿ ರೂ. ನಗದು ಕಾಣಿಕೆಗಳು ಸಂಗ್ರಹವಾಗಿದೆ.
ದೇವಾಲಯದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಮ್ (TTD) ಈ ವಿಷಯವನ್ನು ದೃಢಪಡಿಸಿದೆ.
ನೆರೆಯ ತಮಿಳುನಾಡು, ಅದರಲ್ಲೂ ಮುಖ್ಯವಾಗಿ ತಿರುನೆಲ್ವೇಲಿಯಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದುದು ಇದಕ್ಕೆ ಕಾರಣ ಎಂದು ವರದಿಯಾಗಿದೆ. ಜನರು ವೈಯಕ್ತಿಕವಾಗಿ ನೀಡಿರುವ ಹಾಗೂ ಖಾಸಗಿ ಕಂಪನಿಗಳಿಂದ ಬಂದ ನಗದು ಕಾಣಿಕೆಗಳು ಸೇರಿ ಹತ್ತು ಕೋಟಿ ರೂ. ಸಂಗ್ರಹವಾಗಿತ್ತು.
ಉದ್ಯಮಿಯಿಂದ 7 ಕೋಟಿ ರೂ. ಕಾಣಿಕೆ
ತಿರುನಲ್ವೇಲಿಯ ಉದ್ಯಮಿ ಗೋಪಾಲ ಬಾಲಕೃಷ್ಣನ್ ಎಂಬುವರು ದೇವಾಲಯದ ಭಕ್ತರಾಗಿದ್ದು, ಅವರೊಬ್ಬರೇ 7 ಕೋಟಿ ರೂ.ಗಳನ್ನು ಕಾಣಿಕೆಯಾಗಿ ನೀಡಿದರು. ಅವರು ದೇವಾಲಯಕ್ಕೆ ಸೇರಿದ ಟ್ರಸ್ಟ್ ಗಳಿಗೆ ದೇಣಿಗೆ ಕೊಟ್ಟರು. ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್, ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್, ವೆಂಕಟೇಶ್ವರ ವೇದ ಪರೀಕ್ಷಣ ಟ್ರಸ್ಟ್, ಬಾಲಾಜಿ ಇನ್‌ಸ್ಟಿಟ್ಯೂಟ್ ಆಫ್ ಸರ್ಜರಿ ರಿಸರ್ಚ್ ಆಂಡ್ ರಿಹಬಿಲಿಟೇಶನ್ ಆಋ ಡಿಸಬಲ್ಡ್, ವೆಂಕಟೇಶ್ವರ ಭಕ್ತಿ ಚಾನಲ್ ಮತ್ತು ವೆಂಕಟೇಶ್ವರ ಸರ್ವ ಶ್ರೇಯಸ್ ಟ್ರಸ್ಟ್‌ಗೆ ತಲಾ 1 ಕೋಟಿ ರೂ. ಕಾಣಿಕೆ ಸಲ್ಲಿಸಿದರು.
ತಿರುನಲ್ವೇಲಿ ಮೂಲದ ಎ-ಸ್ಟಾರ್ ಟೆಸ್ಟಿಂಗ್ ಆಂಡ್ ಇನ್ಸ್‌ಪೆಕ್ಷನ್ ಪ್ರೈವೇಟ್ ಲಿಮಿಟಡ್ ಕಂಪನಿಯು ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್‌ಗೆ 1 ಕೋಟಿ ರೂ.ಗಳನ್ನು ಸಲ್ಲಿಸಿತು. ಟಿಟಿಡಿಯ ಕಾರ್ಯಕಾರಿ ಅಧಿಕಾರಿ ಎ.ವಿ ಧರ್ಮ ರೆಡ್ಡಿ ಅವರಿಗೆ ದಾನಿಗಳು ದೇಣಿಗೆ ಸಲ್ಲಿಸಿದರು. ಅಧಿಕಾರಿಗಳ ಪ್ರಕಾರ ಕೋವಿಡ್ ಬಿಕ್ಕಟ್ಟಿನ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಬರುತ್ತಿರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಕೆ ಸಲ್ಲಿಸುತ್ತಿದ್ದಾರೆ.