Site icon Vistara News

ದೇಶದ ನಾನಾ ಕಡೆಗಳಲ್ಲಿ 100 ರೂ. ಗಡಿ ದಾಟಿದ ಟೊಮ್ಯಾಟೊ, ಮಾವಿನ ಹಣ್ಣುದರ

tomato

ಬೆಂಗಳೂರು: ದೇಶದ ನಾನಾ ಕಡೆಗಳಲ್ಲಿ ಟೊಮ್ಯಾಟೊ ದರ ಪ್ರತಿ ಕೆ.ಜಿಗೆ 100 ರೂ.ಗಳ ಗಡಿಯನ್ನು ದಾಟಿದೆ. ಬಿಸಿಗಾಳಿಯ ಪರಿಣಾಮ ಟೊಮ್ಯಾಟೊ ಮತ್ತು ಮಾವಿನ ಹಣ್ಣಿನ ಫಸಲಿಗೆ ಹಾನಿ ಉಂಟಾಗಿರುವುದು ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಬಿಸಿಗಾಳಿಗೆ ಟೊಮ್ಯಾಟೊದ ಹೂವುಗಳು ಮುರುಟಿ ಹೋಗುತ್ತವೆ. ಪರಿಣಾಮ ಫಸಲು ಕುಸಿಯುತ್ತದೆ.

ಮಾವಿನ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಉತ್ತರಪ್ರದೇಶದಲ್ಲಿ ಈ ಸಲ ಕಳೆದ ಎರಡು ದಶಕಗಳಲ್ಲೇ ಕನಿಷ್ಠ ಎನ್ನಿಸುವಷ್ಟು ಕಡಿಮೆ ಉತ್ಪಾದನೆಯಾಗಿದೆ. ಬಿಸಿ ಗಾಳಿಗೆ ಶೇ.80 ಫಸಲು ಹಾನಿಯಾಗಿರುವುದು ಇದಕ್ಕೆ ಕಾರಣವಾಗಿದೆ. ಉತ್ತರಪ್ರದೇಶ ಪ್ರತಿ ವರ್ಷ ಸಾಮಾನ್ಯವಾಗಿ 45 ಲಕ್ಷ ಟನ್‌ ಮಾವನ್ನು ಉತ್ಪಾದಿಸುತ್ತದೆ. ಭಾರತದ ಮಾವು ಉತ್ಪಾದನೆಯಲ್ಲಿ ಶೇ.24 ಪಾಲನ್ನು ಹೊಂದಿದೆ.

ಮತ್ತೊಂದು ಕಡೆ ಕಳೆದ 15 ದಿನಗಳಿಂದ ಟೊಮ್ಯಾಟೊ ದರ ಹಲವು ಕಡೆಗಳಲ್ಲಿ 100 ರೂ.ಗಳ ಗಡಿ ದಾಟಿದೆ. ಭುವನೇಶ್ವರದಲ್ಲಿ ಪ್ರತಿ ಕೆಜಿಗೆ 120 ರೂ.ಗೆ ಜಿಗಿದಿದೆ. ಉತ್ತರ ಮತ್ತು ದಕ್ಷಿಣದ ಕೆಲವು ಮಾರುಕಟ್ಟೆಗಳಲ್ಲಿ ದರ ಏರಿಕೆಯಾಗಿದ್ದು, ಈ ಸಲ ಮಾವಿನ ರಫ್ತು ಕೂಡ ಇಳಿಕೆಯಾಗಲಿದೆ. ಸಾಮಾನ್ಯವಾಗಿ ಭಾರತವು ಯುಎಇ, ಒಮಾನ್‌, ಕತಾರ್‌ಗೆ ಮಾವಿನ ರಫ್ತು ಮಾಡುತ್ತದೆ.

ಟೊಮ್ಯಾಟೊ ದರ ಜುಲೈನಲ್ಲಿ ಇಳಿಕೆ ಸಂಭವ

ಮಾರುಕಟ್ಟೆಗೆ ಟೊಮ್ಯಾಟೊದ ಹೊಸ ಫಸಲು ಜುಲೈನಲ್ಲಿ ಬರಲಿದ್ದು, ಅಲ್ಲಿಯವರೆಗೆ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ತರಕಾರಿ ಮಾರಾಟಗಾರರ ಸಂಘದ ಆಧ್ಯಕ್ಷ ಶ್ರೀರಾಮ್‌ ಗಾಡ್ವೆ ತಿಳಿಸಿದ್ದಾರೆ. ದೇಶಾದ್ಯಂತ ಅಡುಗೆಮನೆಯ ಅತ್ಯವಶ್ಯಕ ತರಕಾರಿಯಾಗಿರುವ ಟೊಮ್ಯಾಟೊ ದರ ಏರಿಕೆ ಸರಕಾರಗಳಿಗೂ ಸವಾಲಾಗಿದೆ. ಆಹಾರ ಹಣದುಬ್ಬರವನ್ನು ನಿಯಂತ್ರಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಟೊಮ್ಯಾಟೊ ದರ ನಿಯಂತ್ರಣವೂ ಅನಿವಾರ್ಯ. ಭಾರತ ವಾರ್ಷಿಕ 2 ಕೋಟಿ ಟನ್ ಟೊಮ್ಯಾಟೊ ಉತ್ಪಾದಿಸುತ್ತದೆ.

ಇದನ್ನೂ ಓದಿ: ಮಾವು ನೋಡಿದರೆ ಸಿಹಿ.. ಬೆಲೆ ಕೇಳಿದರೆ  ಕಹಿ..

Exit mobile version