ನವ ದೆಹಲಿ: ದೇಶದಲ್ಲಿ ಟೊಮ್ಯಾಟೊ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. (Tomato price) ಇದರ ಪರಿಣಾಮ ನಿರ್ದಿಷ್ಟ ನಗರಗಳಲ್ಲಿ ಟೊಮ್ಯಾಟೊ ದರ ಇಳಿಯಲಿದೆ. ಏಕೆಂದರೆ ಇದರ ಹೋಲ್‌ಸೇಲ್ ದರವನ್ನು ಕೇಂದ್ರ ಸರ್ಕಾರ ಪ್ರತಿ ಕೆ.ಜಿಗೆ 80 ರೂ.ಗೆ ಭಾನುವಾರ ಕಡಿತಗೊಳಿಸಿದೆ.
ದಿಲ್ಲಿ, ನೋಯ್ಡಾ, ಲಖನೌ, ಕಾನ್ಪುರ, ವಾರಾಣಸಿ, ಪಟನಾ, ಮುಜಾಫರ್, ಆಗ್ರಾದಲ್ಲಿ ನ್ಯಾಶನಲ್ ಕೋಪರೇಟಿವ್ ಕನ್‌ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ (NCCF) ಮತ್ತು ನ್ಯಾಶನಲ್ ಅಗ್ರಿಕಲ್ಚರಲ್ ಕೋಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ (NAFED) ಮೂಲಕ, ಪ್ರತಿ ಕೆ.ಜಿಗೆ 80 ರೂ.ಗಳ ಸಗಟು ದರದಲ್ಲಿ ಟೊಮ್ಯಾಟೊ ಮಾರಾಟವಾಗಲಿದೆ. ಎನ್‌ಸಿಸಿಎಫ್ ದಿಲ್ಲಿ, ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಜನತೆಯ ಅನುಕೂಲಕ್ಕಾಗಿ ಸಬ್ಸಿಡಿ ದರದಲ್ಲಿ ಟೊಮ್ಯಾಟೊವನ್ನು ವ್ಯಾನ್‌ಗಳ ಮೂಲಕ ಮಾರಾಟ ಮಾಡುತ್ತಿದೆ.
ದೇಶದ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಟೊಮ್ಯಾಟೊ ದರದ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ದಿಲ್ಲಿ-ಎನಸಿಆರ್ ಮತ್ತು ಇತರ ಕಡೆಗಳಲ್ಲಿ ಜುಲೈ 16ರಿಂದ ಟೊಮ್ಯಾಟೊ ಸಗಟು ದರವನ್ನು ಕೆ.ಜಿಗೆ 90 ರೂ.ಗಳಿಂದ 80 ರೂ.ಗೆ ಇಳಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.
ಟೊಮ್ಯಾಟೊ ದರ ರಿಟೇಲ್ ಮಾರುಕಟ್ಟೆಯಲ್ಲಿ ಕೆಲವು ನಗರಗಳಲ್ಲಿ ಈಗಲೂ ಪ್ರತಿ ಕೆ.ಜಿ ಟೊಮ್ಯಾಟೊ ದರ 250 ರೂ.ಗೆ ಏರಿಕೆಯಾಗಿದೆ. ಮುಂಗಾರು ಮಳೆಯ ಕೊರತೆ, ಟೊಮ್ಯಾಟೊ ಬೆಳೆಗೆ ಬಂದಿರುವ ರೋಗದ ಹಾವಳಿಯಿಂದ ಮಾರುಕಟ್ಟೆಗೆ ಪೂರೈಕೆಯಲ್ಲಿ ಭಾರಿ ಕೊರತೆಯಾಗಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಟೊಮ್ಯಾಟೊದ ರಾಷ್ಟ್ರೀಯ ಸರಾಸರಿ ದರ ಪ್ರತಿ ಕೆ.ಜಿಗೆ 117 ರೂ. ಆಗಿದೆ. ದಿಲ್ಲಿಯಲ್ಲಿ ಶನಿವಾರ ವ್ಯಾನ್‌ಗಳ ಮೂಲಕ 18,000 ಕೆ.ಜಿ ಟೊಮ್ಯಾಟೊ ಮಾರಾಟವಾಗಿದೆ.
ಕೇಂದ್ರ ಸರ್ಕಾರದ ಪರವಾಗಿ ಎನ್‌ಸಿಸಿಎಫ್ ಮತ್ತು ನಾಫೆಡ್ (NAFFD) ಟೊಮ್ಯಾಟೊವನ್ನು ಮಾರಾಟ ಮಾಡುತ್ತಿವೆ. ಕೇಂದ್ರ ಸರ್ಕಾರವು ಟೊಮ್ಯಾಟೊದ ಸಗಟು ದರವನ್ನು ಕೆಜಿಗೆ 80 ರೂ.ಗೆ ಇಳಿಸಿರುವುದರಿಂದ ರಿಟೇಲ್ ದರ ಕೂಡ ತಗ್ಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೆಟ್ರೊಗಳ ಪೈಕಿ ದಿಲ್ಲಿಯಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊ ದರ 178 ರೂ, ಮುಂಬಯಿನಲ್ಲಿ 150 ರೂ, ಚೆನ್ನೈನಲ್ಲಿ 132 ರೂ.ಗೆ ಏರಿತ್ತು. ಉತ್ತರ ಪ್ರದೇಶದ ಹಾಪುಡ್‌ನಲ್ಲಿ ಗರಿಷ್ಠ 250 ರೂ.ಗೆ ಏರಿತ್ತು.
ಟೊಮ್ಯಾಟೊ ದರ ಏರಿಕೆಯಾಗಿದ್ದೇಕೆ?
ಸಾಮಾನ್ಯವಾಗಿ ಜುಲೈ-ಆಗಸ್ಟ್ ಮತ್ತು ಅಕ್ಟೋಬರ್ -ನವೆಂಬರ್‌ನಲ್ಲಿ ಟೊಮ್ಯಾಟೊ ದರ ಏರುತ್ತದೆ. ಏಕೆಂದರೆ ಆ ತಿಂಗಳುಗಳಲ್ಲಿ ಉತ್ಪಾದನೆ ಕಡಿಮೆ ಇರುತ್ತದೆ. ಇದರ ಪರಿಣಾಮ ಪೂರೈಕೆಯಲ್ಲಿ ಏರುಪೇರಾಗುತ್ತದೆ. ದರ ಜಿಗಿಯುತ್ತದೆ. ಈ ವರ್ಷ ಪ್ರಮುಖ ನಗರಗಳಲ್ಲಿ ಟೊಮ್ಯಾಟೊ ದರ ಕೆ.ಜಿಗೆ 155 ರೂ.ಗಳಿಂದ 200 ರೂ. ತನಕ ಏರಿಕೆಯಾಗಿದೆ.
ಟೊಮ್ಯಾಟೊ ಪೆಟ್ರೋಲಿಗಿಂತ ದುಬಾರಿಯಾಗಿದೆ. ಮೆಕ್ ಡೊನಾಲ್ಡ್ ತನ್ನ ಆಹಾರಗಳ ಮೆನುವಿನಿಂದ ಟೊಮ್ಯಾಟೊವನ್ನು ಹೊರಗಿಟ್ಟಿದೆ. ಟೊಮ್ಯಾಟೊ ದರ ಏರಿಕೆಯಿಂದ ಹಣದುಬ್ಬರ ಹೆಚ್ಚಬಹುದು ಎಂದು ಆರ್‌ಬಿಐನ ಸಂಶೋಧಕರ ವರದಿ ಕಳವಳ ವ್ಯಕ್ತಪಡಿಸಿದೆ.
ಟೊಮ್ಯಾಟೊ ಬೆಳೆಯುವ ಪ್ರದೇಶಗಳು:
ಭಾರತದಲ್ಲಿ ರಾಬಿ ಅವಧಿಯ ಹಾಗೂ ಖಾರಿಫ್ ಅವಧಿಯ ಟೊಮ್ಯಾಟೊ ಬೆಳೆ ಸಾಮಾನ್ಯ. ರಾಬಿ ಕೊಯ್ಲು ಚಳಿಗಾಲದ ಅವಧಿಯದ್ದಾಗಿದ್ದರೆ ಖಾರಿಫ್ ಮಳೆಗಾಲದ ಬೆಳೆಯಾಗಿದೆ. ರಾಬಿ ಬೆಳೆಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದ ಭಾಗಗಳಲ್ಲಿ ಬೆಳೆಯಲಾಗುತ್ತದೆ. ರಾಬಿಯ ಫಸಲು ಮಾರ್ಚ್- ಆಗಸ್ಟ್‌ನಲ್ಲಿ ಉತ್ತರಪ್ರದೇಶ ಮತ್ತು ನಾಸಿಕ್‌ನಿಂದ ಬರುತ್ತದೆ. ಈ ಪ್ರದೇಶಗಳು ಟೊಮ್ಯಾಟೊವನ್ನು ಬೆಳೆಯುವ ಪ್ರಮುಖ ಪ್ರದೇಶಗಳಾಗಿವೆ.
ಬೆಳೆ ಹಾನಿಗೆ ಕಾರಣವೇನು?
ಮುಂಗಾರು ಮಳೆಯ ಕೊರತೆ, ತೀವ್ರ ಉಷ್ಣ ಹವಾಮಾನ, ಕೀಟಾಣುಗಳ ಹಾವಳಿಯಿಂದ ಈ ವರ್ಷ ಟೊಮ್ಯಾಟೊ ಬೆಳೆಯ ಉತ್ಪಾದನೆ ಗಣನೀಯ ಕುಂಠಿತವಾಗಿದೆ. ಜನವರಿ-ಮಾರ್ಚ್ ಅವಧಿಯಲ್ಲಿ ಮೊದಲ ಹಂತದ ಟೊಮ್ಯಾಟೊ ಬೆಳೆಯನ್ನು ಬೆಳೆಯಲಾಗಿತ್ತು. ಇದರ ಫಸಲು ಏಪ್ರಿಲ್-ಜೂನ್‌ನಲ್ಲಿ ಬಂದಿದೆ. ಈ ರಾಬಿ ಬೆಳೆ ರೈತರಿಗೆ ಉತ್ತಮ ಆದಾಯ ಕೊಡುತ್ತಿದ್ದರೂ, ಈ ಸಲ ಫಸಲೇ ಕಡಿಮೆಯಾಗಿದೆ.
ಎರಡು ವೈರಸ್‌ಗಳ ಹಾವಳಿ:
ದಿಢೀರ್ ಉಷ್ಣತೆ ಏರಿದಾಗ ಕೀಟಗಳ ಹಾವಳಿಯೂ ಜೋರಾಯಿತು. ಫಸಲು ನಾಶವಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವೈರಸ್ ದಾಳಿಯಿಂದ ಟೊಮ್ಯಾಟೊ ಬೆಳೆಯ ಫಸಲು ಕುಸಿಯಿತು. ಮಹಾರಾಷ್ಟ್ರದಲ್ಲಿ ಕುಕುಂಬರ್ ಮೊಸಾಯಿಕ್ ವೈರಸ್ (cucumber mosaic virus – CMV) ಹಾಗೂ ಕರ್ನಾಟಕದಲ್ಲಿ ಟೊಮ್ಯಾಟೊ ಮೊಸಾಯಿಕ್ ವೈರಸ್ (tomato mosaic virus) ಹಾವಳಿಯಾಗಿತ್ತು.
ಇದನ್ನೂ ಓದಿ: Tomato Price : ಟೊಮ್ಯಾಟೋಗೆ 2 ಲಕ್ಷ ರೂ. ಖರ್ಚು ಮಾಡಿ 9 ಲಕ್ಷ ಲಾಭ ಮಾಡಿದ ಚಿಕ್ಕೋಡಿ ರೈತ!
ಇತರ ತರಕಾರಿಗಳ ದರ ಏನು?
ಕೆಲವು ರಾಜ್ಯಗಲ್ಲಿ ಇತರ ತರಕಾರಿಗಳ ದರ ಏರುಗತಿಯಲ್ಲಿದೆ. ಕ್ಯಾಲಿಫ್ಲವರ್, ಆಲೂಗಡ್ಡೆ, ಈರುಳ್ಳಿ, ಕ್ಯಾಬೇಜ್, ಬೀಟ್ ರೂಟ್, ಬೆಂಡೆ, ಹಸಿಮೆಣಸಿನ ದರ ಏರಿದೆ. ಈ ವರ್ಷ ಆರಂಭದಲ್ಲಿ ತೀವ್ರ ಉಷ್ಣ ಹವಾಮಾನ, ಬಳಿಕ ಮಳೆಯ ಕೊರತೆ ಹಾಗೂ ಅಂತಿಮವಾಗಿ ಕೆಲ ರಾಜ್ಯಗಳಲ್ಲಿ ಭಾರಿ ಮಳೆಯ ಅನಾಹುತವನ್ನು ಭಾರತ ಎದುರಿಸಿದೆ. ಇದರ ಪರಿಣಾಮ ತರಕಾರಿಗಳ ದರ ಏರಲಿದೆ. ಹಣದುಬ್ಬರ ಹೆಚ್ಚಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ ರಿಟೇಲ್ ಹಣದುಬ್ಬರ 4.81% ಇತ್ತು. ಎಲ್ ನಿನೊ ಪರಿಣಾಮದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆ ಸವಾಲಾಗಿದೆ ಎಂದು ಈ ಹಿಂದೆ ಆರ್‌ಬಿಐ ವರದಿ ಕೂಡ ತಿಳಿಸಿತ್ತು.
ಟೊಮ್ಯಾಟೊ ದರ ಯಾವಾಗ ಇಳಿಕೆಯಾಗಲಿದೆ?
ಖಾರಿಫ್ ಅವಧಿಯ ಟೊಮ್ಯಾಟೊ ಬೆಳೆ ಬಂದ ಬಳಿಕ ಟೊಮ್ಯಾಟೊ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಆಗಸ್ಟ್ ಮಧ್ಯ ಭಾಗದ ತನಕ ಕಾಯಬೇಕಾಗುತ್ತದೆ. ಅಂದರೆ ಇನ್ನೂ ಒಂದು ತಿಂಗಳು ಟೊಮ್ಯಾಟೊ ದರ ಉನ್ನತ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.