Site icon Vistara News

TOYOTA ದಿಂದ ಇವಿ ಬಿಡಿಭಾಗ ಉತ್ಪಾದನೆಗೆ ರಾಜ್ಯದಲ್ಲಿ ₹4,800 ಕೋಟಿ ಹೂಡಿಕೆ

ಬೆಂಗಳೂರು: TOYOTA ಸಮೂಹವು ಕರ್ನಾಟಕದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಿಡಿಭಾಗಗಳ ಉತ್ಪಾದನೆಗೆ 624 ದಶಲಕ್ಷ ಡಾಲರ್ (₹4,800 ಕೋಟಿ ) ಬಂಡವಾಳ ಹೂಡಲು ನಿರ್ಧರಿಸಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಆಟೊ ಪಾರ್ಟ್ಸ್ ಈ ಹೂಡಿಕೆ ಸಂಬಂಧ ರಾಜ್ಯ ಸರಕಾರದ ಜತೆ ಎಂಒಯುಗೆ ಅಂಕಿತ ಹಾಕಿದೆ.

ಭಾರತದ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್‌ ವಾಹನ ಉತ್ಪಾದನೆಯ ಜಾಗತಿಕ ತಾಣವಾಗುವ ಗುರಿಗೆ ಪೂರಕವಾಗಿ ಟೊಯೊಟಾ ಕಾರ್ಯಪ್ರವೃತ್ತವಾಗಿದೆ. ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೂ ಇದು ಪುಷ್ಟಿ ನೀಡಲಿದೆ. ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಪರ್ಯಾಯ ಇಂಧನ ಬಳಕೆಯ ವಾಹನಗಳ ಬಳಕೆ ಭಾರತಕ್ಕೆ ಅತಿ ಅಗತ್ಯವೂ ಆಗಿದೆ. ತೈಲದ ಆಮದು ವೆಚ್ಚ ತಗ್ಗಿಸುವುದು ಹಾಗೂ ಪರಿಸರಸ್ನೇಹಿ ಇಂಧನ ಬಳಕೆ ತುರ್ತು ಅಗತ್ಯವಾಗಿ ಪರಿಣಮಿಸಿದೆ. ಇದುವರೆಗೆ ದುಬಾರಿ ದರ, ಎಲೆಕ್ಟ್ರಿಕ್‌ ವಾಹನಗಳ ಮಾದರಿಯ ಆಯ್ಕೆಗಳ ಕೊರತೆ, ಚಾರ್ಜಿಂಗ್‌ ಸ್ಟೇಷನ್‌ಗಳ ಕೊರತೆ ಮುಂತಾದ ಕಾರಣಗಳಿಂದ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರ ಮಂದಗತಿಯಲ್ಲಿತ್ತು. ಟೊಯೊಟಾ ಹೂಡಿಕೆ ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ.

3,500 ಉದ್ಯೋಗ ಸೃಷ್ಟಿ
ಟೊಯೊಟಾದ ಈ ಹೂಡಿಕೆಯ ಪರಿಣಾಮ 3,500 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಟೊಯೊಟಾ ಕಿರ್ಲೋಸ್ಕರ್‌ನ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ತಿಳಿಸಿದ್ದಾರೆ. ಪೂರೈಕೆಯ ಸರಣಿ ವ್ಯವಸ್ಥೆಗೊಳಿಸಿದ ಬಳಿಕ ಮತ್ತಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯವಾಗಿ ಎಲೆಕ್ಟ್ರಿಕ್‌ ವಾಹನಗಳ ಬಿಡಿಭಾಗಗಳ ಉತ್ಪಾದನೆ ಹಲವು ಆಯಾಮಗಳಲ್ಲಿ ಅನುಕೂಲಕರವಾಗಲಿದೆ. ಟೊಯೊಟಾ ಗ್ರೂಪ್ ಇದುವರೆಗೆ ₹11,812 ಕೋಟಿಗಳನ್ನು ಭಾರತದಲ್ಲಿ ಹೂಡಿಕೆ ಮಾಡಿದೆ ಹಾಗೂ 8,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದೆ.

ಇದನ್ನೂ ಓದಿ | ಭಾರತೀಯರಿಗೆ ಎಸ್‌ಯುವಿಗಳ ಮೇಲೆ ಏಕೆ ಇಷ್ಟೊಂದು ಮೋಹ?

ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಹೆಚ್ಚಳ ನಿರೀಕ್ಷೆ

ಭಾರತದಲ್ಲಿ 2022-2026 ರ ಅವಧಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟದಿಂದ 20 ಶತಕೋಟಿ ಡಾಲರ್ ( ₹1.50 ಲಕ್ಷ ಕೋಟಿ) ಆದಾಯ ದೊರೆಯಬಹುದು ಎಂದು ಕ್ರಿಸಿಲ್ ವರದಿ ತಿಳಿಸಿದೆ. 2040ರ ವೇಳೆಗೆ ದೇಶದಲ್ಲಿ ಮಾರಾಟವಾಗುವ ಹೊಸ ವಾಹನಗಳಲ್ಲಿ 53% ಎಲೆಕ್ಟ್ರಿಕ್‌ ವಾಹನಗಳಾಗಿರಲಿವೆ. ಆ ವೇಳೆಗೆ ಚೀನಾದಲ್ಲಿ ಮಾರಾಟವಾಗುವ ಹೊಸ ವಾಹನಗಳಲ್ಲಿ 77% ಎಲೆಕ್ಟ್ರಿಕ್‌ ವಾಹನಗಳಾಗಿರಲಿವೆ.

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಇನ್ನೂ ಶೈಶವಾವಸ್ಥೆಯಲ್ಲಿದೆ. ಒಟ್ಟು ವಾಹನ ಮಾರಾಟದಲ್ಲಿ ಕೇವಲ 1% ಇದೆ. ಆದರೆ ಕೆಲ ರಾಷ್ಟ್ರಗಳಲ್ಲಿ ಇದು 5%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಭಾರತೀಯ ರಸ್ತೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಮತ್ತು ಕೆಲವು ಸಾವಿರ ಎಲೆಕ್ಟಿçಕ್ ಕಾರುಗಳು ಓಡಾಡುತ್ತಿವೆ.
ಭಾರತದ ಆಟೊಮೊಬೈಲ್ ಉದ್ದಿಮೆ ವಿಶ್ವದಲ್ಲೇ 5ನೇ ಅತಿ ದೊಡ್ಡದಾಗಿದೆ. 2030ರ ವೇಳೆಗೆ ಜಗತ್ತಿನಲ್ಲೇ ನಂ.1 ಆಗುವ ನಿರೀಕ್ಷೆ ಇದೆ. ಆದರೆ ಸಾಂಪ್ರದಾಯಿಕ ಇಂಧನ ಮಾದರಿಯ ವಾಹನಗಳ ಉತ್ಪಾದನೆಯಿಂದ ಮಾತ್ರ ಇದು ಸಾಧ್ಯವಿಲ್ಲ.

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಶೇ.100ರಷ್ಟು ನೇರ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ) ಮಾಡಲು ಸರಕಾರ ಅವಕಾಶ ನೀಡಿದ್ದು, ಇದು ಜಾಗತಿಕ ಮಟ್ಟದ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಮಾತ್ರವಲ್ಲದೆ ಭಾರತದ ಅಗಾಧ ಮಾರುಕಟ್ಟೆಯೂ ಪೂರಕವಾಗಿದೆ. ಇಂಡಿಯಾ ಎನರ್ಜಿ ಸ್ಟೋರೇಜ್ ಅಲೈಯನ್ಸ್ ಪ್ರಕಾರ ಭಾರತೀಯ ಇವಿ ಮಾರುಕಟ್ಟೆ 2026ರ ವೇಳೆಗೆ ಶೇ.36ರಷ್ಟು ವೃದ್ಧಿಸಲಿದೆ. ಸರಕಾರ ಎಲೆಕ್ಟ್ರಿಕ್‌ ವಾಹನ ಬಳಕೆಯನ್ನು ಉತ್ತೇಜಿಸಲುಹಲವು ಕ್ರಮಗಳನ್ನು ಕೂಗೊಂಡಿದೆ. ಇನ್ಸೆಂಟಿವ್‌ಗಳನ್ನು ನೀಡುತ್ತಿದೆ. ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮಾನ್ಯುಫಾಕ್ಷರಿಂಗ್ ಆಫ್ ಹೈಬ್ರಿಡ್ ಆ್ಯಂಡ್ ಎಲೆಕ್ಟಿçಕ್ ವೆಹಿಕಲ್ಸ್ ಇನ್ ಇಂಡಿಯಾ (ಫೇಮ್) ಯೋಜನೆ ಅಡಿಯ ಎರಡನೇ ಹಂತದಲ್ಲಿ 1.65 ಲಕ್ಷ ಎಲೆಕ್ಟ್ರಿಕ್‌ ವಾಹನಗಳಿಗೆ ಇನ್ಸೆಂಟಿವ್ ವಿತರಿಸಲಾಗಿದೆ. 2021ರ ಮೇನಲ್ಲಿ ಎಸಿಸಿ ಬ್ಯಾಟರಿ ಸ್ಟೋರೇಜ್ ಉತ್ಪಾದನೆಗೆ ಉತ್ಪಾದನೆ ಆಧಾರಿತ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಅನ್ವಯಿಸಲಾಗಿದೆ. ಇಂಥ ಬ್ಯಾಟರಿಗಳನ್ನು ಭಾರತದಲ್ಲಿಯೇ ತಯಾರಿಸಲು ಹಾಗೂ ಇದರ ಆಮದನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

https://vistaranews.com/2022/04/22/explainer-electric-vehicles-on-fire-in-india/
Exit mobile version