Site icon Vistara News

ವಿಸ್ತಾರ Info | ಆಧಾರ್‌ ಕಾರ್ಡ್‌ ಬಳಸುವಾಗ ಏನು ಮಾಡಬೇಕು- ಮಾಡಬಾರದು? UIDAI ಮಾರ್ಗದರ್ಶಿ

adaar

ಆಧಾರ್‌ ಕಾರ್ಡ್‌ ಬಳಕೆಗೆ ಸಂಬಂಧಿಸಿ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಇತ್ತೀಚೆಗೆ ನೂತನ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಜನತೆ ತಮ್ಮ ಗುರುತಿನ ಆನ್‌ಲೈನ್‌ ಅಥವಾ ಆಫ್‌ಲೈನ್‌ ದೃಢೀಕರಣ ಸಲುವಾಗಿ ಆಧಾರ್‌ ಸಂಖ್ಯೆಯನ್ನು ಬಳಸುತ್ತಾರೆ. (ವಿಸ್ತಾರ Info) ಬ್ಯಾಂಕಿಂಗ್‌, ಟೆಲಿಕಾಂ ಸೇರಿ ಹಲವು ಸೇವೆಗಳನ್ನು ಪಡೆಯುವಾಗ ಆಧಾರ್‌ ಅನ್ನು ಬಳಸುತ್ತಾರೆ. ಹೀಗಿದ್ದರೂ, ಹಲವರಲ್ಲಿ ಆಧಾರ್‌ ಬಳಕೆ ಬಗ್ಗೆ ತಪ್ಪು ಕಲ್ಪನೆಗಳೂ ಇವೆ. ಈ ಹಿನ್ನೆಲೆಯಲ್ಲಿ ಯುಐಡಿಎಐ 2022ರ ಸೆಪ್ಟೆಂಬರ್‌ 23ರಂದು ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಏನು ಮಾಡಬೇಕು- ಏನು ಮಾಡಬಾರದು ಎಂಬುದನ್ನು ಪಟ್ಟಿ ಮಾಡಿದೆ.

ಆಧಾರ್‌ ಕಾರ್ಡ್-‌ ಏನು ಮಾಡಬಹುದು?

ಆಧಾರ್‌ ಕಾರ್ಡ್‌ ನಿಮ್ಮ ಡಿಜಿಟಲ್‌ ಐಡೆಂಟಿಟಿ. ನಿಮ್ಮ ಆಯ್ಕೆಯ ಅನ್ವಯ ಗುರುತನ್ನು ದೃಢಪಡಿಸಲು ಬಳಸಿಕೊಳ್ಳಿ.

ಆಧಾರ್‌ ಸಂಖ್ಯೆಯನ್ನು ಯಾವುದೇ ವಿಶ್ವಾಸಾರ್ಹ ಸಂಸ್ಥೆಗೆ ನೀಡುವಾಗ, ನಿಮ್ಮ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ಅಥವಾ ಪಾಸ್‌ ಪೋರ್ಟ್‌, ಮತದಾರರ ಚೀಟಿ, ರೇಷನ್‌ ಕಾರ್ಡ್‌ ವಿವರ ಕೊಡುವಾಗ ವಹಿಸುವಷ್ಟೇ ಎಚ್ಚರಿಕೆ ವಹಿಸಿ.

ಆಧಾರ್‌ ಸಂಖ್ಯೆಯನ್ನು ಪಡೆಯುವ ಸಂಸ್ಥೆ ನಿಮ್ಮ ಒಪ್ಪಿಗೆಯನ್ನು ಪಡೆದಿರಬೇಕು. ಹೇಳದಿದ್ದರೆ ನೀವು ಕೇಳಬಹುದು.

ಒಂದು ವೇಳೆ ನೀವು ನಿಮ್ಮ ಆಧಾರ್‌ ಸಂಖ್ಯೆ ನೀಡಲು ಬಯಸದಿದ್ದರೆ, ಯುಐಡಿಎಐ ಮೂಲಕ ವರ್ಚುವಲ್‌ ಐಡೆಂಟಿಫೈರ್‌ (ವಿಐಡಿ-Virtual Identifier) ಬಳಸಬಹುದು. ವಿಐಡಿಯನ್ನು ಸುಲಭವಾಗಿ ಪಡೆಯಬಹುದು. ಹಾಗೂ ಅದನ್ನು ಆಧಾರ್‌ ಕಾರ್ಡ್‌ ಸಂಖ್ಯೆಗೆ ಬದಲಾಗಿ ಬಳಸಬಹುದು. ದಿನದ ಅಂತ್ಯಕ್ಕೆ ವರ್ಚುವಲ್‌ ಐಡಿಯನ್ನು ಬದಲಿಸಬಹುದು.

ನೀವು ನಿಮ್ಮ ಆಧಾರ್‌ ದೃಢೀಕರಣದ ಕಳೆದ 6 ತಿಂಗಳಿನ ಹಿಸ್ಟರಿಯನ್ನು ಯುಐಡಿಎಐ ವೆಬ್‌ಸೈಟ್‌ನಲ್ಲಿ ಅಥವಾ ಎಂ-ಆಧಾರ್‌ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಬಹುದು. ನಿಯಮಿತವಾಗಿ ಪರಿಶೀಲಿಸಬಹುದು.

ಯುಐಡಿಎಐ ಪ್ರತಿಯೊಂದು ದೃಢೀಕರಣವನ್ನೂ (Authentication) ಇ-ಮೇಲ್‌ ಮೂಲಕ ತಿಳಿಸುತ್ತದೆ. ಆದ್ದರಿಂದ ನಿಮ್ಮ ಪರಿಷ್ಕೃತ ಇ-ಮೇಲ್‌ ಐಡಿಯನ್ನು ಯುಐಡಿಎಐನಲ್ಲಿ ಸಲ್ಲಿಸಿರಿ.

ಹಲವು ಸೇವೆಗಳಿಗೆ ಒಟಿಪಿ ಆಧಾರಿತ ಆಧಾರ್‌ ದೃಢೀಕರಣ ಇರುತ್ತದೆ. ಆದರಿಂದ ಯುಐಡಿಎಐನಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಮಾಡಿಟ್ಟುಕೊಳ್ಳಿ.

ಯುಐಡಿಎಐ ಆಧಾರ್‌ ಲಾಕಿಂಗ್‌ ಮತ್ತು ಬಯೊಮೆಟ್ರಿಕ್‌ ಲಾಕಿಂಗ್‌ ಅನುಕೂಲವನ್ನು ನೀಡುತ್ತದೆ. ದೀರ್ಘಾವಧಿಗೆ ಆಧಾರ್‌ ಬಳಕೆ ಇರದಿದ್ದರೆ ಲಾಕ್‌ ಮಾಡಿ ಇಡಬಹುದು. ಬೇಕಾದಾಗ ತಕ್ಷಣ ಅನ್‌ಲಾಕ್‌ ಮಾಡಬಹುದು.

ನಿಮ್ಮ ಆಧಾರ್‌ ಕಾರ್ಡ್‌ನ ದುರ್ಬಳಕೆ ಆಗಿದೆ ಎಂಬ ಸಂದೇಹ ಬಂದರೆ ಅಥವಾ ಆಧಾರ್‌ ಬಗ್ಗೆ ವಿಚಾರಿಸಲು ಬಯಸುತ್ತಿದ್ದರೆ, ಯುಐಡಿಎಐ ಅನ್ನು ಟೋಲ್‌ ಫ್ರಿ ಸಹಾಯವಾಣಿ ಸಂಖ್ಯೆ 1947 ಅನ್ನು ಬಳಸಬಹುದು. ಇ-ಮೇಲ್-‌ help@uidai.gov.in

ಯುಐಡಿಎಐನ ಪರಿಷ್ಕೃತ ಮಾಹಿತಿಗಳಿಗೆ ಸಂಸ್ಥೆಯ ಮಾಧ್ಯಮ ಚಾನೆಲ್‌ಗಳಾದ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಕೂ ಅನ್ನು ಗಮನಿಸಬಹುದು.

ಏನು ಮಾಡಬಾರದು?

ಆಧಾರ್‌ ಕಾರ್ಡ್‌ ಅನ್ನು ಎಲ್ಲೆಂದರಲ್ಲಿ ಇಡದಿರಿ.

ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್‌ ಬುಕ್‌, ಟ್ವಿಟರ್‌ ಇತ್ಯಾದಿ) ನಿಮ್ಮ ಆಧಾರ್‌ ಸಂಖ್ಯೆ ನೀಡದಿರಿ.

ಯಾವುದೇ ಅನಧಿಕೃತ ಸಂಸ್ಥೆಗೆ ಆಧಾರ್‌ ಒಟಿಪಿ ಕೊಡದಿರಿ.

ಎಂ-ಆಧಾರ್‌ ಪಿನ್‌ ಅನ್ನು ಹಂಚದಿರಿ.

Exit mobile version