ನವ ದೆಹಲಿ: ಬ್ಯಾಂಕ್‌ಗಳಲ್ಲಿ ವಾರಸುದಾರಿಕೆ ಇಲ್ಲದೆ (Unclaimed deposits) ಆರ್‌ಬಿಐಗೆ ವರ್ಗಾವಣೆಯಾಗಿರುವ ಹಣದ ಮೊತ್ತ 2023ರ ಫೆಬ್ರವರಿ ವೇಳೆಗೆ 35,012 ಕೋಟಿ ರೂ.ಗೆ ಇಳಿಕೆಯಾಗಿದೆ. 2022ರ ಮಾರ್ಚ್ ವೇಳೆಯಲ್ಲಿ ಇದು 48,262 ಕೋಟಿ ರೂ. ಇತ್ತು. ಅಂದರೆ 13,250 ಕೋಟಿ ರೂ. ಇಳಿಕೆಯಾಗಿದೆ ಎಂದು ಹಣಕಾಸು ಖಾತೆಯ ಸಹಾಯಕ ಸಚಿವ ಭಾಗ್ವತ್ ಕರಾಡ್ ತಿಳಿಸಿದ್ದಾರೆ.
ವಾರಸುದಾರಿಕೆ ಇಲ್ಲದ ಹಣದ ಮೊತ್ತದಲ್ಲಿ ಇಳಿಕೆಯಾಗಿದೆ ಎಂದರೆ, ವಾರಸುದಾರರು ಆ ಹಣವನ್ನು ಪಡೆದಿದ್ದಾರೆ ಎಂದು ಅರ್ಥವಾಗುತ್ತದೆ. ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳು ವಾರಸುದಾರರಿಗೆ ಇಂಥ ಹಣದ ಬಗ್ಗೆ ಮಾಹಿತಿ ನೀಡಲು ಯತ್ನಿಸುತ್ತಿವೆ ಎಂದು ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಯಲ್ಲಿ 10 ವರ್ಷಗಳ ಕಾಲ ಠೇವಣಿಗೆ ಸಂಬಂಧಿಸಿ ಯಾವುದೇ ವರ್ಗಾವಣೆಗಳು ನಡೆಯದಿದ್ದರೆ, ವಾರಸುದಾರರಿಲ್ಲದ ಹಣ ಎನ್ನಿಸುತ್ತದೆ. ಅಂಥ ಖಾತೆ ನಿಷ್ಕ್ರಿಯ ಖಾತೆ ಪಟ್ಟಿಗೆ ಸೇರುತ್ತದೆ. ಇಂಥ ಹಣವನ್ನು ಆರ್‌ಬಿಐನ ಠೇವಣಿದಾರರು ಮತ್ತು ಹಣಕಾಸು ಶೈಕ್ಷಣಿಕ ಜಾಗೃತಿ ನಿಧಿಗೆ ವರ್ಗಾಯಿಸಲಾಗುವುದು. 10 ವರ್ಷಗಳ ಬಳಿಕ ವಾರಸುದಾರರು ಸೂಕ್ತ ದಾಖಲಾತಿ ಕೊಟ್ಟು ಹಣವನ್ನು ಪಡೆಯಲೂ ಅವಕಾಶ ಇದೆ.
ವಿಮೆ ವಲಯದಲ್ಲೂ ವಾರಸುದಾರರಿಲ್ಲದ ಹಣ:
ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ಆರಂಭಿಕ ಷೇರು ಬಿಡುಗಡೆ ಅಥವಾ ಐಪಿಒದ ಗಾತ್ರ ಬರೋಬ್ಬರಿ 21,000 ಕೋಟಿ ರೂ. ನಿಮಗೆ ಅಚ್ಚರಿಯಾಗಬಹುದಾದ ಮತ್ತೊಂದು ಸಂಗತಿ ಏನೆಂದರೆ ಇಷ್ಟೇ ಮೊತ್ತದ ಹಣ ಎಲ್‌ಐಸಿಯಲ್ಲಿ ಪಾಲಿಸಿದಾರರ ವಾರಸುದಾರಿಕೆ ಇಲ್ಲದೆ ಜಮೆಯಾಗಿರುವ ಹಣದ ಮೊತ್ತವೂ 21,336 ಕೋಟಿ ರೂ.ಗಳಾಗಿದೆ.
ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ, ಐಪಿಒಗೆ ಮುನ್ನ ಎಲ್‌ಐಸಿ ಸಲ್ಲಿಸಿರುವ ವಿವರಗಳ ಪ್ರಕಾರ, 2021ರ ಸೆಪ್ಟೆಂಬರ್ ನಲ್ಲಿ ಕ್ಲೇಮ್ ಮಾಡದಿರುವ ಹಣದ ಮೊತ್ತ 21,500 ಕೋಟಿ ರೂ.ಗೆ ಏರಿತ್ತು. ಅಂದರೆ ಬೆಂಗಳೂರಿನ ಬಿಬಿಎಂಪಿಯ 2021ರ ಬಜೆಟ್ ಗಾತ್ರದ ಎರಡು ಪಟ್ಟು ಆಗಬಹುದು. ಇದರಲ್ಲಿ ಎರಡು ಸಲ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಬಹುದು.
ಈ ಹಣವು 10 ವರ್ಷಗಳೊಳಗಿನ ಅವಧಿಯಲ್ಲಿ ಕ್ಲೇಮ್ ಆಗದೆ ಉಳಿದಿರುವ ಮೊತ್ತವಾಗಿದ್ದು, ಪಾಲಿಸಿದಾರರು ಅಥವಾ ಕಾನೂನುಬದ್ಧವಾಗಿ ಅವರ ವಾರಸುದಾರರು ಈಗಲೂ ಕ್ಲೇಮ್ ಮಾಡಿಕೊಳ್ಳಲು ಸಾಧ್ಯವಿದೆ.
25 ವರ್ಷದ ತನಕ ಕ್ಲೇಮ್ ಸಾಧ್ಯ
ಎಲ್‌ಐಸಿಯಲ್ಲಿ ಪಾಲಿಸಿದಾರರ ಹಣ ಕ್ಲೇಮ್ ಆಗದೆ ಬಾಕಿಯಾಗಿದ್ದರೆ, ಸಂಸ್ಥೆಯಲ್ಲಿ ವಿಚಾರಿಸಿ ಪಡೆದುಕೊಳ್ಳಬಹುದು. 10 ವರ್ಷಗಳ ಬಳಿಕವೂ ಕ್ಲೇಮ್ ಆಗದಿದ್ದರೆ, ಆ ಹಣವು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (ಎಸ್‌ಸಿಡಬ್ಲ್ಯು ಎಫ್) ವರ್ಗಾವಣೆಯಾಗುತ್ತದೆ. 2019ರ ಸೆಪ್ಟೆಂಬರ್ ತನಕ 1,255 ಕೋಟಿ ರೂ.ಗಳು ಎಸ್‌ಸಿಡಬ್ಲ್ಯುಎಫ್‌ಗೆ ಸಂದಾಯವಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ. ಎಸ್ ಸಿಡಬ್ಲ್ಯು ಎಫ್‌ಗೆ ವರ್ಗಾವಣೆಯಾದ ಬಳಿಕವೂ 25 ವರ್ಷಗಳ ತನಕ ಕ್ಲೇಮ್ ಮಾಡಲು ಅವಕಾಶ ಇದೆ. ಎಲ್ ಐಸಿಯು ತನ್ನಲ್ಲಿರುವ ಅನ್ ಕ್ಲೇಮ್ ನಿಧಿಯ ವಿವರಗಳನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಿದ್ದು, ಪಾಲಿಸಿದಾರರು ಇದರ ಉಪಯೋಗ ಪಡೆದುಕೊಳ್ಳಬಹುದು.
ಪಾಲಿಸಿದಾರರು ಪತ್ತೆ ಹಚ್ಚುವುದು ಹೇಗೆ?
ಎಲ್ ಐಸಿ ಪಾಲಿಸಿದಾರರು ಎಲ್‌ಐಸಿಯ ವೆಬ್ ಸೈಟ್ ತೆರೆದು ಅನ್ ಕ್ಲೇಮ್ಡ್ ಆಂಡ್ ಔಟ್ ಸ್ಟ್ಯಾಂಡಿಂಗ್ ಅಮೌಂಟ್ಸ್ ಟು ಪಾಲಿಸಿ ಹೋಲ್ಡರ್ಸ್ ವಿಭಾಗವನ್ನು ಕ್ಲಿಕ್ಕಿಸಬೇಕು. ಎಲ್ ಐಸಿ ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಜನ್ಮದಿನಾಂಕ ವಿವರ ನಮೂದಿಸಿ ಅನ್ ಕ್ಲೇಮ್ ಮೊತ್ತ ಇದೆಯೇ ಎಂದು ಪರಿಶೀಲಿಸಬಹುದು. ಪಾಲಿಸಿದಾರರು ತಮ್ಮ ಮನೆಯವರು ಅಥವಾ ನಾಮಿನಿಗೆ ಪಾಲಿಸಿಯ ವಿವರಗಳನ್ನು ತಿಳಿಸದೆ ಮೃತಪಟ್ಟಿದ್ದರೆ, ಮೆಚ್ಯೂರಿ ಮೊತ್ತವನ್ನು ಪಡೆಯಲು ಮರೆತಿದ್ದರೆ, ದಾಖಲೆಗಳು ಕಳೆದು ಹೋಗಿದ್ದರೆ ಅಥವಾ ಇನ್ನಾವುದಾದರೂ ಕಾರಣದಿಂದ ತಮಗೆ ಬರಬೇಕಾದ ಹಣವನ್ನು ಕ್ಲೇಮ್ ಮಾಡದಿರಬಹುದು.