Site icon Vistara News

Unified Pension Scheme: ಏಕೀಕೃತ ಪಿಂಚಣಿ ಯೋಜನೆ; ನೌಕರರಿಗೆ ಸಿಗುವ ಟಾಪ್‌ 9 ಪ್ರಯೋಜನಗಳಿವು

Unified Pension Scheme

ನಿವೃತ್ತಿಯ ಬಳಿಕ ಸರ್ಕಾರಿ ನೌಕರರಿಗೆ (central government employees) ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ 23 ಲಕ್ಷ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ʼಏಕೀಕೃತ ಪಿಂಚಣಿ ಯೋಜನೆʼಗೆ (Unified Pension Scheme) ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ. 2004ರ ಜನವರಿ 1ರ ಅನಂತರ ಸೇವೆಗೆ ಸೇರಿದವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಈ ಯೋಜನೆ ಕುರಿತ ಮತ್ತಷ್ಟು ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಯುಪಿಎಸ್‌ ವೈಶಿಷ್ಟ್ಯಗಳೇನು?

1. ಖಚಿತ ಪಿಂಚಣಿ

ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳು ನಿವೃತ್ತಿಯ ಹಿಂದಿನ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇ. 50ರಷ್ಟು ಖಚಿತವಾದ ಪಿಂಚಣಿಯನ್ನು ಪಡೆಯುತ್ತಾರೆ. 25 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರ ಪಿಂಚಣಿಯು ಅವರ ಅವಧಿಗೆ ಅನುಗುಣವಾಗಿರುತ್ತದೆ. ಕನಿಷ್ಠ ಅರ್ಹತಾ ಸೇವಾ ಅವಧಿಯನ್ನು 10 ವರ್ಷಗಳಿಗೆ ನಿಗದಿಪಡಿಸಲಾಗಿದೆ.

2. ಖಚಿತವಾದ ಕುಟುಂಬ ಪಿಂಚಣಿ

ಅಪಘಾತದಿಂದ ನೌಕರ ಮರಣ ಹೊಂದಿದರೆ ಅವರ ಸಂಗಾತಿಯು ಅಥವಾ ಅವಲಂಬಿತರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಮರಣದ ಮೊದಲು ಉದ್ಯೋಗಿ ಪಡೆಯುತ್ತಿದ್ದ ಪಿಂಚಣಿಯ ಶೇ. 60ರಷ್ಟು ಅವರ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ದೊರೆಯುತ್ತದೆ.

3. ಖಚಿತವಾದ ಕನಿಷ್ಠ ಪಿಂಚಣಿ

ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನೌಕರರಿಗೆ ನಿವೃತ್ತಿಯ ಅನಂತರ ತಿಂಗಳಿಗೆ 10,000 ರೂ. ಕನಿಷ್ಠ ಪಿಂಚಣಿಯ ಖಾತರಿ ಇದೆ.

4. ಹಣದುಬ್ಬರ ಸೂಚ್ಯಂಕ

ಖಚಿತ ಮತ್ತು ಕುಟುಂಬ ಪಿಂಚಣಿ ಎರಡೂ ಹಣದುಬ್ಬರ ಸೂಚ್ಯಂಕಕ್ಕೆ ಒಳಪಟ್ಟಿರುತ್ತವೆ. ಈ ಹೊಂದಾಣಿಕೆಯು ಪಿಂಚಣಿಗಳು ಹಣದುಬ್ಬರಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.

5. ದರ ಏರಿಕೆ ಪರಿಹಾರ

ಸೇವೆಯಲ್ಲಿರುವ ಉದ್ಯೋಗಿಗಳಂತೆಯೇ ಯುಪಿಎಸ್ ಅಡಿಯಲ್ಲಿ ನಿವೃತ್ತರಾದ ಕೈಗಾರಿಕಾ ಕಾರ್ಮಿಕರಿಗೆ (AICPI-IW) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ದರ ಏರಿಕೆ ಪರಿಹಾರವನ್ನು ಪಡೆಯುತ್ತಾರೆ.


6. ನಿವೃತ್ತಿಯ ಮೇಲೆ ಒಟ್ಟು ಮೊತ್ತ

ಗ್ರಾಚ್ಯುಟಿ ಜೊತೆಗೆ ಉದ್ಯೋಗಿಗಳು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತದ ಪಾವತಿಯನ್ನು ಸ್ವೀಕರಿಸುತ್ತಾರೆ. ಈ ಪಾವತಿಯು ವೇತನ ಮತ್ತು ತುಟ್ಟಿ ಭತ್ಯೆ ಸೇರಿ ನಿವೃತ್ತಿಯ ದಿನಾಂಕ ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವೆಗೆ ಉದ್ಯೋಗಿಯ ಮಾಸಿಕ ವೇತನದ 1/10 ಭಾಗವಾಗಿರುತ್ತದೆ. ಈ ಒಟ್ಟು ಮೊತ್ತದ ಪಾವತಿಯು ಖಚಿತವಾದ ಪಿಂಚಣಿಯ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.

7. ಸರ್ಕಾರದ ಕೊಡುಗೆ

ಈ ಪಿಂಚಣಿ ಯೋಜನೆಯಡಿ ಸರ್ಕಾರವು ತನ್ನ ಕೊಡುಗೆಯನ್ನು ಶೇ. 14ರಿಂದ ಶೇ.18.5ಕ್ಕೆ ಹೆಚ್ಚಿಸುತ್ತಿದೆ. ಆದರೆ ನೌಕರರ ಕೈಯಿಂದ ಈಗಿರುವ ಪ್ರಮಾಣದಷ್ಟೇ ಹಣ ಈ ಯೋಜನೆಗೆ ಸಂದಾಯವಾಗುತ್ತದೆ. ಹಾಗಾಗಿ ಇದರಿಂದ ನೌಕರರಿಗೆ ಹೆಚ್ಚು ಪ್ರಯೋಜನ ಸಿಗುವಂತಾಗುತ್ತದೆ.


8. ನಿವೃತ್ತಿ ಹೊಂದಿದವರಿಗೂ ಅನ್ವಯ

ಏಕೀಕೃತ ಪಿಂಚಣಿ ಯೋಜನೆಯ ನಿಬಂಧನೆಗಳು ರಾಷ್ಟ್ರೀಯ ಪಿಂಚಣಿ ಯೋಜನೆ ಹೊಂದಿರುವ ಹಿಂದಿನ ನಿವೃತ್ತರಿಗೆ ಅಂದರೆ ಈಗಾಗಲೇ ನಿವೃತ್ತಿ ಹೊಂದಿದವರಿಗೂ ಅನ್ವಯಿಸುತ್ತದೆ. ಹಿಂದಿನ ಅವಧಿಯ ಬಾಕಿಯನ್ನು ಪಿಪಿಎಫ್ ದರಗಳಲ್ಲಿ ಬಡ್ಡಿಯೊಂದಿಗೆ ಪಾವತಿಸಲಾಗುತ್ತದೆ.

ಇದನ್ನೂ ಓದಿ: Unified pension scheme: ಕೇಂದ್ರ ಸರ್ಕಾರದ ಯುಪಿಎಸ್ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳ ವಿರೋಧ

9. ಏಕೀಕೃತ ಪಿಂಚಣಿ ಯೋಜನೆಗೆ ಸೇರುವ ಆಯ್ಕೆ

ಅಸ್ತಿತ್ವದಲ್ಲಿರುವ ಎನ್‌ಪಿಎಸ್, ವಿಆರ್‌ಎಸ್ ಜೊತೆಗೆ ಎನ್‌ಪಿಎಸ್ ಜೊತೆಗೆ ಭವಿಷ್ಯದ ಉದ್ಯೋಗಿಗಳು ಯುಪಿಎಸ್‌ಗೆ ಸೇರುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ಆಯ್ಕೆಯನ್ನು ಒಮ್ಮೆ ಮಾಡಿಕೊಂಡರೆ ಅದೇ ಅಂತಿಮವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಯುಪಿಎಸ್ ಅನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ರಾಜ್ಯ ಸರ್ಕಾರಗಳೂ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ಕೇಂದ್ರದಂತೆ ರಾಜ್ಯ ಸರ್ಕಾರವೂ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.

Exit mobile version