ನವ ದೆಹಲಿ: ಫೆಬ್ರವರಿ 1 ಕ್ಕೆ ಮಂಡನೆಯಾಗಲಿರುವ 2022-23ರ ಬಜೆಟ್‌ನಲ್ಲಿ ಗ್ರಾಮೀಣ ಭಾರತಕ್ಕೆ ಆದ್ಯತೆ ಸಿಗುವ ನಿರೀಕ್ಷೆ ಇದೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪೂರ್ಣ ಪ್ರಮಾಣದ ಬಜೆಟ್ (Union Budget 2022-23) ಇದಾಗಲಿದೆ.
ಗ್ರಾಮಾಂತರ ವಲಯದಲ್ಲಿ ಇತ್ತೀಚೆಗೆ ಬೆಳವಣಿಗೆ ಮಂದಗತಿಯಲ್ಲಿರುವುದರಿಂದ ಹೆಚ್ಚಿನ ನೆರವನ್ನು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ ಎಂದು ಸಿಸ್ಟಡಮಾಟಿಕ್ಸ್ ಷೇರ್ಸ್ & ಸ್ಟಾಕ್ಸ್‌ನ ಮುಖ್ಯ ಆರ್ಥಿಕ ತಜ್ಞ ಧನಂಜಯ್ ಸಿನ್ಹಾ ಹೇಳಿದ್ದಾರೆ.
ಕಾರ್ಪೊರೇಟ್ ವಲಯದ ಹಲವಾರು ಕಂಪನಿಗಳು ಗ್ರಾಮಾಂತರ ಮಾರುಕಟ್ಟೆಯಲ್ಲಿ ಮಂದಗತಿಯ ತೀವ್ರತೆಯನ್ನು ಗಮನಿಸಿವೆ. ಆದ್ದರಿಂದ ಗ್ರಾಮೀಣ ಉದ್ಯೋಗ, ಸಬ್ಸಿಡಿ, ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗುವ ಸಾಧ್ಯತೆ ಇದೆ. ಚುನಾವಣೆಯ ವರ್ಷ ಸಮೀಪಿಸುತ್ತಿರುವುದರಿಂದ ಗ್ರಾಮೀಣ ಆರ್ಥಿಕತೆ, ಬೇಡಿಕೆಯನ್ನು ಉತ್ತೇಜಿಸಲು ಬಜೆಟ್ ಪೂರಕ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 1.36 ಲಕ್ಷ ಕೋಟಿ ರೂ. ಮಂಜೂರು ಮಾಡಿತ್ತು. ಆದರೆ ವೆಚ್ಚವು 1.60 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ 2022-23ರ ಸಾಲಿಗೆ ಈ ವೆಚ್ಚ 2 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಉದ್ಯೋಗ ಮತ್ತು ಅಫರ್ಡಬಲ್ ಹೌಸಿಂಗ್ ಯೋಜನೆಗಳಿಗೆ ಹೆಚ್ಚಿನ ನೆರವನ್ನು ನಿರೀಕ್ಷಿಸಲಾಗಿದೆ. ಸಿಎಂಐಇ ಪ್ರಕಾರ ಗ್ರಾಮೀಣ ನಿರುದ್ಯೋಗ ದರ ಕಳೆದ ಅಕ್ಟೋಬರ್‌ನಲ್ಲಿ 8.04%ರಷ್ಟಿತ್ತು.