ನವ ದೆಹಲಿ: ಆದಾಯ ತೆರಿಗೆಯ ಶ್ರೇಣಿಗಳಲ್ಲಿ ಹೊಸ ಬದಲಾವಣೆಯ ಪರಿಣಾಮ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಗಳಲ್ಲಿ ಯಾರಿಗೆ ಯಾವುದು ಸೂಕ್ತ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹೊಸ ಪದ್ಧತಿಗೆ ಸರ್ಕಾರ ಒತ್ತು ನೀಡಿದ್ದೇಕೆ? (Union Budget 2023) ಹಾಗಾದರೆ ಹಳೆಯ ಪದ್ಧತಿ ಅಂತ್ಯವಾಗಲಿದೆಯೇ? ಎಂಬಿತ್ಯಾದಿ ಪ್ರಶ್ನೆಗಳೂ ಉಂಟಾಗಿವೆ. ಚಾರ್ಟರ್ಡ್ ಅಕೌಂಟೆಂಟ್‌ಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಹೊಸ ತೆರಿಗೆ ಪದ್ಧತಿಗೆ ಹೆಚ್ಚಿನ ತೆರಿಗೆದಾರರನ್ನು ಆಕರ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ತೆರಿಗೆಯ ದರಗಳನ್ನು ಇಳಿಸಿದೆ. ತೆರಿಗೆದಾರರ ನೆಲೆಯನ್ನು ವಿಸ್ತರಿಸಲೂ ಇದು ಸಹಕಾರಿಯಾಗಲಿದೆ. ತೆರಿಗೆ ಸೋರಿಕೆಯನ್ನು ತಡೆಯಲೂ ಪ್ರಯೋಜನವಾಗಲಿದೆ.
ಹೊಸ ಪದ್ಧತಿಯಲ್ಲಿ ಯಾವುದೇ ಡಿಡಕ್ಷನ್‌ಗಳಿಗೆ ಅವಕಾಶ ಇಲ್ಲದಿರುವುದರಿಂದ, ತೆರಿಗೆ ಕಡಿತದ ಸೌಲಭ್ಯಕ್ಕಾಗಿ ಉಳಿತಾಯ ಮಾಡುವ ಪ್ರಮೇಯವೇ ಇರುವುದಿಲ್ಲ. ಆಗ ಜನತೆ ಉಳಿತಾಯದ ಬದಲಿಗೆ ವೆಚ್ಚಕ್ಕೇ ಆದ್ಯತೆ ನೀಡುವ ಸಾಧ್ಯತೆ ಇದೆ. ಜನತೆ ವೆಚ್ಚ ಮಾಡುವುದರಿಂದ ಆರ್ಥಿಕ ಚಟುವಟಿಕೆಗಳು ಚೇತರಿಸಲಿದೆ. ಹೀಗಿದ್ದರೂ, ಇದುವರೆಗೆ ತೆರಿಗೆ ಉಳಿಸುವುದಕ್ಕೋಸ್ಕರ ಅನೇಕ ಮಂದಿ ಉಳಿತಾಯ ಮಾಡುತ್ತಿದ್ದರು. ಆದರೆ ಭವಿಷ್ಯದ ದಿನಗಳಲ್ಲಿ ತೆರಿಗೆ ಉಳಿಸುವುದಕ್ಕಾಗಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಕಡಿಮೆಯಾಗಬಹುದು ಎನ್ನುತ್ತಾರೆ ಚಾರ್ಟರ್ಡ್ ಅಕೌಂಟೆಂಟ್ ವಿಜಯ್ ಸಾಗರ್ ಶೆಣೈ.
ಹಣಕಾಸು ಸಚಿವರು ಹೇಳಿದ್ದೇನು?
ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಐದು ಅನುಕೂಲಗಳನ್ನು ಕಲ್ಪಿಸಲಾಗಿದೆ. ಮೊದಲನೆಯದಾಗಿ ತೆರಿಗೆ ರಿಬೇಟ್. ಪ್ರಸ್ತುತ ವಾರ್ಷಿಕ 5 ಲಕ್ಷ ರೂ. ತನಕ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಈ ರಿಬೇಟ್ ಮಿತಿಯನ್ನು 7 ಲಕ್ಷ ರೂ.ಗೆ ಏರಿಸಲಾಗುವುದು. ಹೀಗಾಗಿ 7 ಲಕ್ಷ ರೂ. ತನಕ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ.
ಎರಡನೆಯದಾಗಿ ಹೊಸ ಆದಾಯ ತೆರಿಗೆ ಶ್ರೇಣಿಯನ್ನು ಜಾರಿಗೊಳಿಸಲಾಗುವುದು. ತೆರಿಗೆಯ ಶ್ರೇಣಿಗಳನ್ನು 6ರಿಂದ 5ಕ್ಕೆ ಇಳಿಸಲಾಗುತ್ತಿದೆ. ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗೆ ವಿಸ್ತರಿಸಲಾಗುವುದು. ನೂತನ ಆದಾಯ ತೆರಿಗೆ ಶ್ರೇಣಿಗಳು ಇಂತಿವೆ.
0-3 ಲಕ್ಷ ರೂ. | ಇಲ್ಲ |
3-6 ಲಕ್ಷ ರೂ. | 5% |
6-9 ಲಕ್ಷ ರೂ. | 10% |
9-12 ಲಕ್ಷ ರೂ. | 15% |
12-15 ಲಕ್ಷ ರೂ. | 20% |
15 ಲಕ್ಷ ರೂ.ಗಿಂತ ಮೇಲ್ಪಟ್ಟು | 30% |
ಹೊಸ ತೆರಿಗೆ ಪದ್ಧತಿಯ ಪ್ರಯೋಜನವೇನು?
ಈ ಸುಧಾರಣೆಯಿಂದ ಹೊಸ ತೆರಿಗೆ ಪದ್ಧತಿಯಲ್ಲಿ (Income tax) ಎಲ್ಲ ತೆರಿಗೆದಾರಿಗೆ ಅನುಕೂಲವಾಗಲಿದೆ. ವಾರ್ಷಿಕ 9 ಲಕ್ಷ ರೂ. ಆದಾಯ ಇರುವ ವ್ಯಕ್ತಿ 45,000 ರೂ. ತೆರಿಗೆ ಪಾವತಿಸಿದರೆ ಸಾಕು. ಇದು ವ್ಯಕ್ತಿಯ ಆದಾಯದ ಕೇವಲ 5% ಮಾತ್ರ. ಈಗ 9 ಲಕ್ಷ ರೂ. ಗಳಿಸುತ್ತಿರುವ ವ್ಯಕ್ತಿ 60,000 ರೂ. ತೆರಿಗೆ ಪಾವತಿಸಬೇಕಾಗುತ್ತದೆ.
ಈಗ ವಾರ್ಷಿಕ 15 ಲಕ್ಷ ರೂ. ಆದಾಯ ಇರುವವರು 20% ತೆರಿಗೆ ಕಟ್ಟಬೇಕಾಗುತ್ತದೆ. 1,87,500 ರೂ. ಪಾವತಿಸಬೇಕಾಗುತ್ತದೆ. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ 10% ಅಂದರೆ 1.5 ಲಕ್ಷ ರೂ. ನೀಡಿದರೆ ಸಾಕಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮೂರನೆಯದಾಗಿ ಕುಟುಂಬ ಪಿಂಚಣಿ ಸೇರಿದಂತೆ ಪಿಂಚಣಿದಾರರು ಮತ್ತು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯಲ್ಲಿ 15.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವಿದ್ದರೆ 52,500 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗಲಿದೆ.
ನಾಲ್ಕನೆಯದಾಗಿ ದೇಶದಲ್ಲಿ ವೈಯಕ್ತಿಕ ಆದಾಯಕ್ಕೆ ಗರಿಷ್ಠ 42.74% ತೆರಿಗೆ ದರವಿದೆ. ಇದು ಜಗತ್ತಿನಲ್ಲಿಯೇ ಗರಿಷ್ಠ ತೆರಿಗೆಗಳಲ್ಲೊಂದು. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಇದನ್ನು 39%ಕ್ಕೆ ತಗ್ಗಿಸಲಾಗುವುದು. ಕೊನೆಯದಾಗಿ ಸರಕಾರೇತರ ಉದ್ಯೋಗಿಗಳಿಗೆ ನಿವೃತ್ತಿಯ ಸಂದರ್ಭ ರಜೆಯ ನಗದೀಕರಣ ಸೌಲಭ್ಯದಲ್ಲಿ ತೆರಿಗೆ ವಿನಾಯಿತಿ ಮಿತಿಗೆ ಇದ್ದ 3 ಲಕ್ಷ ರೂ.ಗಳ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸಲಾಗಿದೆ.
ಹಳೆಯ ಪದ್ಧತಿ ಮುಂದುವರಿಯಲಿದೆಯೇ?
ಹೊಸ ತೆರಿಗೆ ಪದ್ಧತಿ ಮುಂದುವರಿಯಲಿದೆ. ಆದರೆ ನಾಗರಿಕರು ಹಳೆಯ ಪದ್ಧತಿಯ ಆಯ್ಕೆಯನ್ನೂ ಮಾಡಿಕೊಳ್ಳಲು ಅವಕಾಶ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಆದರೆ ಭವಿಷ್ಯದ ದಿನಗಳಲ್ಲಿ ಹಳೆಯ ಪದ್ಧತಿ ಕೊನೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ತೆರಿಗೆ ದರದಲ್ಲಿ ಬದಲಾವಣೆಗಳ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ನೇರ ತೆರಿಗೆಗಳಲ್ಲಿ 37,000 ಕೋಟಿ ರೂ. ನಷ್ಟವಾಗಲಿದೆ. ಪರೋಕ್ಷ ತೆರಿಗೆಗಳಲ್ಲಿ 1,000 ಕೋಟಿ ರೂ. ನಷ್ಟವಾಗಲಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
ಹಳೆಯ ಪದ್ಧತಿ ಮತ್ತು ಹೊಸ ಪದ್ಧತಿಯ ವ್ಯತ್ಯಾಸಗಳೇನು?
ಹಳೆಯ ಪದ್ಧತಿಯಲ್ಲಿ ಹಲವಾರು ಡಿಡಕ್ಷನ್‌ಗಳನ್ನು (ತೆರಿಗೆ ಕಡಿತ) ತೆರಿಗೆದಾರರು ತಮ್ಮದಾಗಿಸಬಹುದು. ಹೊಸ ಪದ್ಧತಿಯಲ್ಲಿ ಇಂಥ ತೆರಿಗೆ ಕಡಿತಗಳು ಇರುವುದಿಲ್ಲ. ಆದರೆ ಹೊಸ ಪದ್ಧತಿಯಲ್ಲಿ ತೆರಿಗೆ ದರಗಳು ಕಡಿಮೆ. ಹೀಗಾಗಿ ಎರಡೂ ಪದ್ಧತಿಯಲ್ಲಿ ನೀಡಬೇಕಾಗುವ ತೆರಿಗೆಯ ಪ್ರಮಾಣ ಒಂದೇ ರೀತಿ ಇರುತ್ತದೆ. ಆದ್ದರಿಂದ ತೆರಿಗೆದಾರರು ತಮ್ಮ ಆದಾಯ ಮತ್ತು ಡಿಡಕ್ಷನ್ ಸಾಧ್ಯತೆಗಳನ್ನು ಪರಿಗಣಿಸಿ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.
ಹಳೆಯ ತೆರಿಗೆ ಪದ್ಧತಿ ಯಾರಿಗೆ ಸೂಕ್ತ?
EY India ಸಂಸ್ಥೆಯ ವಿಶ್ಲೇಷಕರ ಪ್ರಕಾರ ವಾರ್ಷಿಕ 15.5 ಲಕ್ಷ ರೂ.ಗಿಂತ ಹೆಚ್ಚು ಆದಾಯವಿದ್ದು, 4.25 ಲಕ್ಷ ರೂ.ಗಿಂತ ಹೆಚ್ಚು ಡಿಡಕ್ಷನ್ ಪಡೆಯಲು ಸಾಧ್ಯವಿದ್ದರೆ 2023ರ ಏಪ್ರಿಲ್ 1ರಿಂದ ಹಳೆಯ ತೆರಿಗೆ ಪದ್ಧತಿ ಸೂಕ್ತ.
ಒಟ್ಟಾರೆ ಆದಾಯ | ಹಳೆ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ತೆರಿಗೆ ಕಡಿತ (ರೂ.) | ಹಳೆಯ ತೆರಿಗೆ ಪದ್ಧತಿಯಲ್ಲಿ ಪಾವತಿಸಬೇಕಾದ ತೆರಿಗೆ | ಹೊಸ ತೆರಿಗೆ ಪದ್ಧತಿಯಲ್ಲಿ ಪಾವತಿಸಬೇಕಾದ ತೆರಿಗೆ |
7.5 ಲಕ್ಷ ರೂ. | 2,50,000 | 0 | 0 |
10 | 3,00,000 | 54,600 | 54,600 |
12.5 | 3,62,500 | 93,600 | 93,600 |
15 | 4,08,332 | 1,45,600 | 1,45,600 |
20 | 4,25,000 | 2,96,400 | 2,96,400 |
ವಾರ್ಷಿಕ 7.5 ಲಕ್ಷ ರೂ. ಆದಾಯ ಇರುವವರು ಹಳೆಯ ಪದ್ಧತಿಯಲ್ಲಿ 2.5 ಲಕ್ಷ ರೂ. ತೆರಿಗೆ ವಿನಾಯಿತಿ ಮತ್ತು ಡಿಡಕ್ಷನ್ ಪಡೆಯಬಹುದು. ಇದರಿಂದ ತೆರಿಗೆಗೆ ಅರ್ಹ ವೇತನ 5 ಲಕ್ಷ ರೂ.ಗೆ ತಗ್ಗಲಿದೆ. ಹಾಗೂ ತೆರಿಗೆ ರಿಬೇಟ್‌ಗೆ ಅರ್ಹತೆ ಪಡೆಯಬಹುದು ಹಾಗೂ ತೆರಿಗೆ ಮುಕ್ತನಾಗಬಹುದು. ಹೊಸ ಪದ್ಧತಿಯಲ್ಲಿ 50,000 ರೂ. ತೆರಿಗೆ ಸ್ಟ್ಯಾಂಡರ್ಡ್ ಹಾಗೂ ಯಾವುದೇ ತೆರಿಗೆ ನೀಡಬೇಕಾಗುವುದಿಲ್ಲ.
ಹೊಸ ತೆರಿಗೆ ಪದ್ಧತಿ ಯಾರಿಗೆ ಸೂಕ್ತ?
ವಾರ್ಷಿಕ ಆದಾಯ 10 ಲಕ್ಷ ರೂ. ಇದ್ದರೆ ಸೆಕ್ಷನ್ 80 ಸಿ, 80 ಡಿ, 80 ಟಿಟಿಎ, ಎಚ್‌ಆರ್‌ಎ ವಿನಾಯಿತಿ, ಎಲ್‌ಟಿಎ ವಿನಾಯಿತಿ ರೂಪದಲ್ಲಿ 3 ಲಕ್ಷ ರೂ. ತನಕ ಡಿಡಕ್ಷನ್ ಕ್ಕೇಮ್ ಮಾಡಿಕೊಳ್ಳಬಹುದು. ಆದರೆ ಡಿಡಕ್ಷನ್ 3 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ಅಂಥ ವೇತನದಾರ ತೆರಿಗೆದಾರರಿಗೆ ಹೊಸ ಪದ್ಧತಿ ಸೂಕ್ತ.
ವಾರ್ಷಿಕ ಆದಾಯ 12.5 ಲಕ್ಷ ರೂ. ಇದ್ದು, ಡಿಡಕ್ಷನ್ 3,62,500 ರೂ.ಗಿಂತ ಕಡಿಮೆ ಇದ್ದರೆ ಹೊಸ ತೆರಿಗೆ ಪದ್ಧತಿ ಸೂಕ್ತ.
ವಾರ್ಷಿಕ ಆದಾಯ 15 ಲಕ್ಷ ರೂ. ಇದ್ದು 4,08,332 ರೂ. ಡಿಡಕ್ಷನ್ ಮಾಡಲು ಸಾಧ್ಯವಿದ್ದರೆ ಹಳೆಯ ಪದ್ಧತಿ ಸೂಕ್ತ.
ಇದನ್ನೂ ಓದಿ: Union Budget 2023: ಮಧ್ಯಮ ವರ್ಗಕ್ಕೆ ಬಂಪರ್, ವಾರ್ಷಿಕ 7 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ