ನವ ದೆಹಲಿ: ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್‌ನ ಪುನಶ್ಚೇತನಕ್ಕೆ ೧,೬೪,೦೦೦ ಕೋಟಿ ರೂ.ಗಳ ಮೆಗಾ ಪ್ಯಾಕೇಜ್ ಒದಗಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್ಸೆನ್ನೆಲ್‌ಗೆ ಇದರಿಂದ ಸಹಾಯಕವಾಗಲಿದೆ. ಜತೆಗೆ ಸಂಸ್ಥೆಯ ಫೈಬರ್ ನೆಟ್‌ವರ್ಕ್ ವಹಿವಾಟು ವಿಸ್ತರಣೆಗೆ ಮತ್ತು ಒಟ್ಟಾರೆ ಸೇವೆಯ ಗುಣಮಟ್ಟ ಸುಧಾರಣೆಗೆ ನೆರವಾಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ತಿಳಿಸಿದ ಸಚಿವರು, ಬಿಎಸ್ಸೆನ್ನೆಲ್‌ನ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ಸೇವೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ೪ಜಿ ಸೇವೆಯನ್ನು ವಿಸ್ತರಿಸಿ ಪ್ರತಿ ಬಳಕೆದಾರರ ಮೂಲಕ ಸರಾಸರಿ ೧೭೦-೧೮೦ ರೂ. ಆದಾಯ (average revenue per user) ಗಳಿಸಲು ಸಹಕಾರಿಯಾಗಲಿದೆ ಎಂದರು.
ಈ ೧.೬೪ ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ನಗದು ಮತ್ತು ನಗದೇತರ ಭಾಗವಿದೆ. ಸುಮಾರು ೪೪,೦೦೦ ಕೋಟಿ ರೂ. ನಗದನ್ನು ಸ್ಪೆಕ್ಟ್ರಮ್, ಬಂಡವಾಳ ಹೂಡಿಕೆ ಇತ್ಯಾದಿ ವೆಚ್ಚಕ್ಕೆ ಬಳಸಲಾಗುವುದು. ಉಳಿದ ೧.೨೦ ಲಕ್ಷ ಕೋಟಿ ರೂ. ನಗದೇತರ ನೆರವಾಗಿರಲಿದೆ. ೪ ವರ್ಷಗಳಲ್ಲಿ ನಾನಾ ಹಂತಗಳಲ್ಲಿ ಈ ನೆರವನ್ನು ನೀಡಲಾಗುವುದು. ಇದರ ಫಲಿತಾಂಶ ಮುಂದಿನ ೨ ವರ್ಷಗಳಲ್ಲಿ ಕಾಣಬಹುದು ಎಂದು ಸಚಿವರು ತಿಳಿಸಿದರು.
ಬಿಎಸ್ಸೆನ್ನೆಲ್ ಜತೆಗೆ ಬಿಬಿಎನ್‌ಎಲ್ ವಿಲೀನಕ್ಕೆ ಅನುಮೋದನೆ: ಬಿಎಸ್ಸೆನ್ನೆಲ್ ಜತೆಗೆ ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (ಬಿಬಿಎನ್‌ಎಲ್) ವಿಲೀನಕ್ಕೆ ಕೂಡ ಕೇಂದ್ರ ಸಚಿವ ಸಂಪುಟ ಒಪ್ಪಿದೆ. ಪ್ರಸ್ತುತ ಬಿಎಸ್ಸೆನ್ನೆಲ್ ೬.೮ ಲಕ್ಷ ಕೋಟಿ ರೂ.ಗಳ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಅನ್ನು ಒಳಗೊಂಡಿದೆ. ವಿಲೀನದ ಪರಿಣಾಮ ಹೆಚ್ಚುವರಿ ೫.೬೭ ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ದೊರೆಯಲಿದೆ. ಬಿಬಿಎನ್‌ಎಲ್ ೧.೮೫ ಲಕ್ಷ ಗ್ರಾಮಪಂಚಾಯಿತಿಗಳನ್ನು ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ವ್ಯಾಪ್ತಿಗೆ ಒಳಪಡಿಸಿದೆ.
ಎಲ್ಲ ಹಳ್ಳಿಗೂ ೪ಜಿ : ಬಿಎಸ್ಸೆನ್ನೆಲ್‌ಗೆ ಕಾಯಕಲ್ಪ ನೀಡುವ ಮೂಲಕ ದೇಶದ ಎಲ್ಲ ಗ್ರಾಮಗಳಲ್ಲೂ ೪ಜಿ ಸೌಲಭ್ಯ ಸಿಗುವಂತಾಗಲು ಸರ್ಕಾರ ಕಾರ್ಯಪ್ರವೃತ್ತವಾಗಲಿದೆ.
೨೫,೦೦೦ ಗ್ರಾಮಗಳಿಗೆ ೨೬,೩೧೬ ಕೋಟಿ ರೂ. ಹೂಡಿಕೆಯಲ್ಲಿ ನೆಟ್‌ವರ್ಕ್ ಸಂಪರ್ಕ: ದೇಶದ ಉದ್ದಗಲಕ್ಕೂ ಸುಮಾರು ೨೫ ಸಾವಿರ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸೌಲಭ್ಯವನ್ನು ಹೊಂದಿಲ್ಲ. ಈ ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಲಭಿಸುವಂತಾಗಲು ಸರ್ಕಾರ ಮೂಲಸೌಕರ್ಯ ಕಲ್ಪಿಸಲಿದೆ ಎಂದು ಟೆಲಿಕಾಂ ಸಚಿವರು ತಿಳಿಸಿದ್ದಾರೆ. ಡಿಜಿಟಲ್ ಇಂಡಿಯಾ ಗುರಿ ಸಾಧಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕವಾಗಲಿದೆ. ಈ ಹಿಂದೆ ಉಪಗ್ರಹ ಆಧಾರಿತ ಸಮೀಕ್ಷೆ ಮೂಲಕ ೨೫ ಸಾವಿರ ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಿಗದಿರುವುದನ್ನು ಪತ್ತೆ ಹಚ್ಚಲಾಗಿತ್ತು.