Site icon Vistara News

UPI Payment: ಇಂದಿನಿಂದ UPIಗೆ ಹೊಸ ನಿಯಮ; ಏನೇನು ಬದಲಾವಣೆ ನೋಡಿ

UPI

ಹೊಸದಿಲ್ಲಿ: ಡಿಜಿಟಲ್‌ ಯುಪಿಐ ಪಾವತಿಗಳಿಗೆ (UPI payment) ಇಂದಿನಿಂದ (ಜನವರಿ 01, 2024) ಹೊಸ ನಿಯಮಗಳು ಅನ್ವಯವಾಗಲಿವೆ.

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಈಗ ದೇಶದಲ್ಲಿ ಹಣ ಪಾವತಿಗೆ ಅತಿ ಹೆಚ್ಚು ಬಳಸಲಾಗುತ್ತಿರುವ ವಿಧಾನ. UPI ಪಾವತಿಗಳನ್ನು ಇನ್ನಷ್ಟು ಉತ್ತಮಗೊಳಿಸಲು, ಕೆಲವು ಹೊಸ ನಿಯಮಗಳು ಮತ್ತು ಬದಲಾವಣೆಗಳನ್ನು ಜನವರಿ 1, 2024ರಿಂದ ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾದ ಬದಲಾವಣೆಗಳು ಇಲ್ಲಿವೆ.

UPIಗಳ ನಿಷ್ಕ್ರಿಯಗೊಳಿಸುವಿಕೆ

ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ UPI ಐಡಿಗಳು ಮತ್ತು ಸಂಖ್ಯೆಗಳನ್ನು ರದ್ದುಗೊಳಿಸಲು Paytm, Google Pay, PhonePe ಮತ್ತು ಬ್ಯಾಂಕ್‌ಗಳಂತಹ ಪಾವತಿ ಅಪ್ಲಿಕೇಶನ್‌ಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಕೇಳಿದೆ.

ಯುಪಿಐ ಐಡಿಗಳು ಮತ್ತು ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳನ್ನು 12 ತಿಂಗಳುಗಳಿಗಿಂತ ಹೆಚ್ಚು ಕಾಲ ವಹಿವಾಟುಗಳಿಗೆ ಬಳಸದಿದ್ದರೆ ನಿಷ್ಕ್ರಿಯಗೊಳಿಸಲಾಗುತ್ತದೆ. ನಿಷ್ಕ್ರಿಯ ಖಾತೆಗಳ ಸಂಭಾವ್ಯ ದುರುಪಯೋಗವನ್ನು ತಡೆಯುವ ಗುರಿಯನ್ನು ಇದು ಹೊಂದಿದೆ.

ಹೆಚ್ಚಿದ ವಹಿವಾಟು ಮಿತಿಗಳು

NPCI ಯುಪಿಐ ವಹಿವಾಟುಗಳಿಗೆ 1 ಲಕ್ಷ ರೂಪಾಯಿಗಳ ಹೊಸ ಗರಿಷ್ಠ ದೈನಂದಿನ ಪಾವತಿ ಮಿತಿಯನ್ನು ನಿಗದಿಪಡಿಸಿದೆ. ಆದರೆ ಡಿಸೆಂಬರ್ 8ರಂದು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಗಾಗಿ ಯುಪಿಐ ವಹಿವಾಟಿನ ಮಿತಿಯನ್ನು ಆರ್‌ಬಿಐ 5 ಲಕ್ಷಕ್ಕೆ ಹೆಚ್ಚಿಸಿದೆ. ಮೊದಲು ವಹಿವಾಟಿನ ಮಿತಿ 1 ಲಕ್ಷ ರೂ. ಇತ್ತು.

ವಿನಿಮಯ ಶುಲ್ಕ

ಈ ಬದಲಾವಣೆಯನ್ನು 2023ರ ಆರಂಭದಲ್ಲಿ ಘೋಷಿಸಲಾಯಿತು. 2,000 ರೂ.ಗಳನ್ನು ಮೀರಿದ ನಿರ್ದಿಷ್ಟ ವ್ಯಾಪಾರಿ UPI ವಹಿವಾಟುಗಳಿಗೆ ಮತ್ತು ಆನ್‌ಲೈನ್ ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಪಾವತಿ ಸಾಧನಗಳ (PPI) ಮೂಲಕ ನಡೆಸಿದರೆ, 1.1 ಪ್ರತಿಶತದಷ್ಟು ಇಂಟರ್‌ಚೇಂಜ್ ಶುಲ್ಕ ಅನ್ವಯಿಸುತ್ತದೆ.

ನಾಲ್ಕು ಗಂಟೆಗಳ ಸಮಯದ ಮಿತಿ

ಆನ್‌ಲೈನ್ ಪಾವತಿ ವಂಚನೆಯ ಹೆಚ್ಚುತ್ತಿರುವ ಪ್ರಕರಣಗಳನ್ನು ಕಡಿಮೆ ಮಾಡಲು, ಮೊದಲು ವಹಿವಾಟು ನಡೆಸದ ಬಳಕೆದಾರರ ನಡುವೆ ರೂ 2,000ಕ್ಕಿಂತ ಹೆಚ್ಚಿನ ಮೊತ್ತದ ಮೊದಲ ಪಾವತಿಗೆ ನಾಲ್ಕು ಗಂಟೆಗಳ ಕಾಲ ಮಿತಿ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ವರದಿಯ ಪ್ರಕಾರ, ಶೀಘ್ರದಲ್ಲೇ UPI ಬಳಕೆದಾರರು ʼಟ್ಯಾಪ್ ಮತ್ತು ಪೇ’ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಸಾಧ್ಯವಾಗಲಿದೆ.

ಯುಪಿಐ ಎಟಿಎಂ

ಯುಪಿಐ ಎಟಿಎಂಗಳನ್ನು ದೇಶಾದ್ಯಂತ ಪರಿಚಯಿಸಲು ಆರ್‌ಬಿಐ ಸಜ್ಜಾಗಿದೆ. ಈ ಎಟಿಎಂಗಳೊಂದಿಗೆ, ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಹಿಂಪಡೆಯಲು ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.

ನವೆಂಬರ್ 2023ರಲ್ಲಿ UPI ವಹಿವಾಟುಗಳು 17.4 ಲಕ್ಷ ಕೋಟಿ ಮೌಲ್ಯದ ಹೊಸ ಉತ್ತುಂಗವನ್ನು ತಲುಪಿದೆ, ಅಕ್ಟೋಬರ್ 2023ರಲ್ಲಿ 17.16 ಲಕ್ಷ ಕೋಟಿಗೆ ಹೋಲಿಸಿದರೆ 1.4 ಶೇಕಡಾ ಹೆಚ್ಚಾಗಿದೆ. ಅದೇ ಸಮಯದಲ್ಲಿ, ವಹಿವಾಟುಗಳ ಸಂಖ್ಯೆ 1.5 ಶೇಕಡಾ ಕುಸಿದಿದೆ. ಒಂದು ತಿಂಗಳ ಹಿಂದಿನ ಗರಿಷ್ಠ ದಾಖಲೆ 11.41ರಿಂದ 11.24 ಶತಕೋಟಿಗೆ ಕಡಿಮೆಯಾಗಿದೆ.

ಇದನ್ನೂ ಓದಿ: Term Insurance : 1 ಸಾವಿರಕ್ಕೆ 1 ಕೋಟಿ ಇನ್ಷೂರೆನ್ಸ್!‌ ಫುಲ್‌ ಡಿಟೇಲ್ಸ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌

Exit mobile version