ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ತೆರಿಗೆ ಪಾವತಿಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುಡ್‌ನ್ಯೂಸ್ ನೀಡಿದೆ. ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ತಿಳಿಸಿದ್ದಾರೆ (UPI Transaction Limit).
ಮಿತಿಯ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ತೆರಿಗೆ ವಹಿವಾಟುಗಳನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ʼʼಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂ.ವರೆಗೆ ಹಣ ಕಳುಹಿಸಬಹುದು. ಇನ್ನು ಮುಂದೆ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಹಣ ಕಳುಹಿಸಲು ಸಾಧ್ಯ. ಅಂದರೆ ಒಂದು ವಹಿವಾಟಿನಲ್ಲಿ ನೀವು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿದೆʼʼ ಎಂದು ಅವರು ಹೇಳಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC)ಯ ಸಭೆಯ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಆದರೆ ಇದು ತೆರಿಗೆ ಪಾವತಿಗೆ ಮಾತ್ರ ಅನ್ವಯವಾಗುತ್ತದೆ.
#WATCH | RBI Governor Shaktikanta Das says, "Real GDP growth for 2024-25 is projected at 7.2% with Q1 at 7.1%, Q2 at 7.2%, Q3 at 7.3%, and Q4 at 7.2%. Real GDP growth for Q1 of 2025-26 is projected at 7.2%."
— ANI (@ANI) August 8, 2024
(Video source: RBI) pic.twitter.com/KCBKg11Qd0
“ಪ್ರಸ್ತುತ ಕೆಲವೊಂದು (ಉದಾಹರಣೆಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ) ಕ್ಷೇತ್ರಗಳಿಗೆ ಹೊರತುಪಡಿಸಿ ಯುಪಿಐ ವಹಿವಾಟು 1 ಲಕ್ಷ ರೂ. ಮಿತಿಯನ್ನು ಹೊಂದಿದೆ. ಇದೀಗ ಯುಪಿಐ ಮೂಲಕ ತೆರಿಗೆ ಪಾವತಿಯ ಮಿತಿಯನ್ನು ಪ್ರತಿ ವಹಿವಾಟಿಗೆ 5 ಲಕ್ಷ ರೂ.ಗೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಇದರಿಂದ ಯುಪಿಐ ಬಳಸಿ ತೆರಿಗೆ ಪಾವತಿಸುವ ಗ್ರಾಹಕರಿಗೆ ಅನುಕೂಲವಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ.
ಡೆಲಿಗೇಟೆಡ್ ಪೇಮೆಂಟ್ಸ್ ವಿಧಾನ
ಇದರ ಜತೆಗೆ ಆರ್‌ಬಿಐ ‘ಡೆಲಿಗೇಟೆಡ್ ಪೇಮೆಂಟ್ಸ್’ ಎಂಬ ಹೊಸ ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಲು ಅನುವು ಮಾಡಿಕೊಡುವ ಫೀಚರ್ ಇದಾಗಿದೆ. ಇದರಲ್ಲಿ ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮಿತಿಯವರೆಗೆ ಯುಪಿಐ ವಹಿವಾಟುಗಳನ್ನು ನಡೆಸಲು ದ್ವಿತೀಯ ಬಳಕೆದಾರನಿಗೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ದ್ವಿತೀಯ ಬಳಕೆದಾರರಿಗೆ ಪ್ರತ್ಯೇಕ ಯುಪಿಐ-ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ಅಗತ್ಯವಿಲ್ಲ. ಈ ವೈಶಿಷ್ಟ್ಯವು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಗಮಗೊಳಿಸಲಿದೆ.
ರೆಪೋ ದರಲ್ಲಿ ಯಾವುದೇ ಬದಲಾವಣೆ ಇಲ್ಲ
ಇದೇ ವೇಳೆ ರೆಪೋ ದರವನ್ನೂ ಪ್ರಕಟಿಸಲಾಗಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೆಪೋ ದರ ಸತತ 9ನೇ ಬಾರಿಯೂ ಶೇ. 6.50ರಲ್ಲಿಯೇ ಮುಂದುವರಿಯಲಿದೆ. ಜತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಶೇ. 7.2 ಎಂದು ಆರ್‌ಬಿಐ ಅಂದಾಜಿಸಿದೆ. ಮಾತ್ರವಲ್ಲ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಪ್ರಸ್ತುತ ಚೆಕ್ ಹಾಕಿದರೆ ಕ್ಲಿಯರ್ ಆಗಲು ಎರಡು ದಿನಗಳು ಬೇಕಾಗುತ್ತವೆ. ಅದನ್ನು ಕೆಲವೇ ಗಂಟೆಗಳಿಗೆ ಇಳಿಯಲಿದೆ.
ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!