ಬೆಂಗಳೂರು: ಅಮೆರಿಕದ ಯುಎಸ್ ಇಮಿಗ್ರೇಶನ್ ಫಂಡ್ (US Immigration-USIF) ವತಿಯಿಂದ ಬೆಂಗಳೂರು ಸೇರಿದಂತೆ 5 ನಗರಗಳಲ್ಲಿ ಏಪ್ರಿಲ್‌ನಲ್ಲಿ ಇಬಿ-5 ಸೆಮಿನಾರ್ ಮತ್ತು ರೋಡ್ ಶೋ ನಡೆಯಲಿದೆ. ಭಾರತೀಯರಿಗೆ ಅಮೆರಿಕದಲ್ಲಿ ಬಿಸಿನೆಸ್, ಶಿಕ್ಷಣ, ಕರಿಯರ್, ಉದ್ಯೋಗಾವಕಾಶಗಳ ಬಗ್ಗೆ ತಿಳಿಯಲು ಇದು ಸಹಕಾರಿಯಾಗಲಿದೆ. ಮುಂಬಯಿ, ದಿಲ್ಲಿ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸೆಮಿನಾರ್‌ಗಳನ್ನು ಹಮ್ಮಿಕೊಳ್ಳಲಾಗಿದೆ.
ಮುಂಬಯಿ, ದಿಲ್ಲಿ, ಹೈದರಾಬಾದ್‌ನಲ್ಲಿ ಈಗಾಗಲೇ ವಿಚಾರ ಸಂಕಿರಣಗಳು ನಡೆದಿವೆ. ಬೆಂಗಳೂರಿನಲ್ಲಿ ಏಪ್ರಿಲ್ 24-25ರಂದು ನಡೆಯಲಿದೆ. ಹೂಡಿಕೆದಾರರಿಗೆ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಯುಎಸ್ ಇಮಿಗ್ರೇಶನ್ ಫಂಡ್‌ನ ನಿಕೋಲಸ್ ಎ ಮಾಸ್ಟ್ರೋಯಿನಿ ಅವರು ತಿಳಿಸಿದ್ದಾರೆ.
ಏನಿದು ಇಬಿ-5 ವೀಸಾ?
ಇಬಿ-5 ವೀಸಾ ಕಾರ್ಯಕ್ರಮದ ಬಗ್ಗೆ ಹಾಗೂ ಅದರ ಲಾಭಗಳ ಬಗ್ಗೆ ಹೂಡಿಕೆದಾರರಿಗೆ ಅರಿವು ಮೂಡಿಸಲು ಈ ವಿಚಾರಸಂಕಿರಣ ಸಹಾಯಕವಾಗಲಿದೆ. 1990ರಲ್ಲಿ EB-5 VISA ಪ್ರೋಗ್ರಾಂ ಅನ್ನು ಸೃಷ್ಟಿಸಲಾಯಿತು. ವಿದೇಶಿ ಹೂಡಿಕೆದಾರರಿಗೆ ಅಮೆರಿಕದ ಈ ವೀಸಾ ಮೂಲಕ ಹೂಡಿಕೆ ಮಾಡಲು ಹಾದಿ ಸುಗಮವಾಗಲಿದೆ.
ಇಬಿ-5 ವೀಸಾ ಪಡೆಯುವವರು ಅಮೆರಿಕದಲ್ಲಿ ಕನಿಷ್ಠ 8 ಲಕ್ಷ ಡಾಲರ್ (ಅಂದಾಜು 6.50 ಕೋಟಿ ರೂ.) ಹೂಡಿಕೆ ಮಾಡಿದರೆ ಮತ್ತು ಕನಿಷ್ಠ 10 ಮಂದಿಗೆ ಉದ್ಯೋಗ ನೀಡಿದರೆ ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ನೇರವಾಗಿ ಅರ್ಹತೆ ಪಡೆಯುತ್ತಾರೆ. ಯುಎಸ್ ಗ್ರೀನ್ ಕಾರ್ಡ್ ಮತ್ತು ಪೌರತ್ವ ಪಡೆಯಬಹುದು. ಹೀಗಾಗಿ ಶ್ರೀಮಂತ ಭಾರತೀಯ ಹೂಡಿಕೆದಾರರು ಈ ವೀಸಾ ಯೋಜನೆಯತ್ತ ಆಕರ್ಷಿತರಾಗುತ್ತಿದ್ದಾರೆ.