ನವ ದೆಹಲಿ: ಭಾರತದ ವೇಗದ ರೈಲು ಎಂದು ಹೆಸರಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಂಟೆಗೆ 180 ಕಿ.ಮೀ ಚಲಿಸಬಲ್ಲುದು. (Vande Bharat Express) ಇಷ್ಟು ಸಾಮರ್ಥ್ಯ ಇದ್ದರೂ ಕಳೆದ ಎರಡು ವರ್ಷಗಳಲ್ಲಿ ಸರಾಸರಿ 83 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸಿದೆ. ಇದಕ್ಕೆ ಕಾರಣ ಹಳಿಗಳ ಪರಿಸ್ಥಿತಿ ಕಳಪೆಯಾಗಿರುವುದು. ಮಾಹಿತಿ ಹಕ್ಕು ಕಾಯಿದೆಯ ಅಡಿ ಕೇಳಿದ ಪ್ರಶ್ನೆಗೆ ಈ ಉತ್ತರ ಲಭಿಸಿದೆ. ಸುಧಾರಿತ ವಂದೇ ಭಾರತ್ ರೈಲುಗಳು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲುದು.
ಮಧ್ಯಪ್ರದೇಶ ಮೂಲದ ಚಂದ್ರ ಶೇಖರ್ ಗೌರ್ ಎಂಬುವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಳಿದ ಪ್ರಶ್ನೆಗೆ, ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು 2021-22ರಲ್ಲಿ ಗಂಟೆಗೆ 84.48 ಕಿ.ಮೀ ಹಾಗೂ 2022-23ರಲ್ಲಿ 81.38 ಕಿ.ಮೀ ವೇಗದಲ್ಲಿ ಸಂಚರಿಸಿದೆ ಎಂಬ ಉತ್ತರ ಸಿಕ್ಕಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲಾಗಿದ್ದು, ರಿಸರ್ಚ್ ಡಿಸೈನ್ಸ್ & ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಇದರ ವಿನ್ಯಾಸವನ್ನು ಸಿದ್ಧಪಡಿಸಿದೆ. ಚೆನ್ನೈನಲ್ಲಿ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಇದನ್ನು ಉತ್ಪಾದಿಸುತ್ತದೆ. ಮುಂಬಯಿ ಸಿಎಸ್‌ಎಂಟಿ-ಸಾಯಿನಗರ್ ಶಿರಿಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸರಾಸರಿ 64 ಕಿ.ಮೀ ವೇಗದಲ್ಲಿ ಸಂಚರಿಸಿದೆ. ನವ ದೆಹಲಿ-ವಾರಾಣಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸರಾಸರಿ 95 ಕಿ.ಮೀ ವೇಗದಲ್ಲಿ ಸಂಚರಿಸಿದೆ.
ರೈಲ್ವೆ ಇಲಾಖೆಯಿಂದ ಈ ಸಲದ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 217 ವಿಶೇಷ ರೈಲುಗಳನ್ನು (Special trains) ದೇಶಾದ್ಯಂತ ಬಿಡಲಾಗುತ್ತಿದೆ. 4,010 ಟ್ರಿಪ್‌ಗಳನ್ನು ಈ ರೈಲುಗಳು ನಿರ್ವಹಿಸಲಿವೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ. ಬೇಸಿಗೆಯ ಕಾಲದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಾದ ಸಲುವಾಗಿ ಪ್ರಯಾಣದ ದಟ್ಟಣೆ ಹೆಚ್ಚು ಇರುವುದು ಸಾಮಾನ್ಯ. ಆದ್ದರಿಂದ ಇಲಾಖೆ ಹೆಚ್ಚುವರಿ ರೈಲುಗಳನ್ನು ಬಿಡುತ್ತಿದೆ.
ನೈಋತ್ಯ ರೈಲ್ವೆ, ಸೌತ್ ಸೆಂಟ್ರಲ್ ರೈಲ್ವೆಯಲ್ಲಿ ಅನುಕ್ರಮವಾಗಿ 69 ಮತ್ತು 48 ವಿಶೇಷ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ರೈಲ್ವೆ ಮತ್ತು ದಕ್ಷಿಣ ರೈಲ್ವೆಯಲ್ಲಿ ಅನುಕ್ರಮವಾಗಿ 40 ಮತ್ತು 20 ರೈಲುಗಳನ್ನು ಬಿಡಲಾಗುತ್ತಿದೆ. ಈಸ್ಟ್ ಸೆಂಟ್ರಲ್ ಮತ್ತು ಸೆಂಟ್ರಲ್ ರೈಲ್ವೆ ವಲಯದಲ್ಲಿ ತಲಾ 10 ಮತ್ತು ನಾರ್ತ್ ವೆಸ್ಟರ್ನ್ ರೈಲ್ವೆಯಲ್ಲಿ 16 ರೈಲುಗಳನ್ನು ಬಿಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ರೈಲ್ವೆ (Indian Railways) 2022-23ರಲ್ಲಿ 2.40 ಲಕ್ಷ ಕೋಟಿ ರೂ. ಆದಾಯ ಗಳಿಸಿದ್ದು, 2021-22ಕ್ಕೆ ಹೋಲಿಸಿದರೆ 25% ಏರಿಕೆ ದಾಖಲಿಸಿದೆ. 2022-23ರಲ್ಲಿ ಸರಕು ಆದಾಯ ಕೂಡ 1.62 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 15% ವೃದ್ಧಿಸಿದೆ. ವಿಶೇಷವೇನೆಂದರೆ ಪ್ರಯಾಣಿಕರ ಸಂಚಾರದಿಂದ ರೈಲ್ವೆ ಆದಾಯ 61% ಏರಿಕೆಯಾಗಿದೆ. 63,300 ಕೋಟಿ ರೂ.ಗೆ ವೃದ್ಧಿಸಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಮೂರು ವರ್ಷಗಳ ಬಳಿಕೆ ರೈಲ್ವೆ ತನ್ನ ಪಿಂಚಣಿ ವೆಚ್ಚವನ್ನು ಪೂರ್ಣವಾಗಿ ಭರಿಸಿಕೊಂಡಿದೆ. ಆದಾಯದಲ್ಲಿ ಹೆಚ್ಚಳ ಮತ್ತು ಬಿಗಿಯಾದ ವೆಚ್ಚ ನಿರ್ವಹಣೆಯ ಪರಿಣಾಮ ಈ ಫಲಿತಾಂಶ ಲಭಿಸಿದೆ. ಎಲ್ಲ ವೆಚ್ಚವನ್ನು ಕಳೆದ ಬಳಿಕ ರೈಲ್ವೆ 3,200 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಕೂಡ ಗಳಿಸಿದೆ. ಪ್ರಯಾಣಿಕರ ಮೂಲದಿಂದ ರೈಲ್ವೆ 2022-23ರಲ್ಲಿ 63,300 ಕೋಟಿ ರೂ, 2021-22ರಲ್ಲಿ 39,214 ಕೋಟಿ ರೂ. ಗಳಿಸಿದೆ. ಅಂದರೆ 61% ವೃದ್ಧಿಸಿದೆ. 2021-22ರಲ್ಲಿ ಒಟ್ಟಾರೆ ಆದಾಯ 1,91,278 ಕೋಟಿ ರೂ. ಇದ್ದರೆ 2022-23ರಲ್ಲಿ 2,39,803 ಕೋಟಿ ರೂ.ಗಳಾಗಿತ್ತು. ರೈಲ್ವೆ ಸೇಫ್ಟಿ ಫಂಡ್‌ನಲ್ಲಿ 2022-23ರಲ್ಲಿ 30,001 ಕೋಟಿ ರೂ. ವ್ಯಯಿಸಲಾಗಿತ್ತು.