Site icon Vistara News

Vegetable price | ಸೊಪ್ಪು, ತರಕಾರಿಗಳ ಬೆಲೆ ಗಣನೀಯ ಇಳಿಕೆ, ಗ್ರಾಹಕರು ನಿರಾಳ

vegetable

ಹೂವಪ್ಪ ಬೆಂಗಳೂರು.
ಗ್ರಾಹಕರಿಗೆ ಇದು ಸಿಹಿಸುದ್ದಿ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಈಗ ತರಕಾರಿ ಸೊಪ್ಪು ಬೆಲೆ ಇಳಿಕೆಯಿಂದ ಒಂದಷ್ಟು ನಿರಾಳವಾದಂತಾಗಿದೆ. ತರಕಾರಿ ಬೆಳೆ ಇಳುವರಿ ಹೆಚ್ಚಳವಾಗಿರುವುದರಿಂದ (Vegetable price) ಮಾರುಕಟ್ಟೆಗೆ ಪೂರೈಕೆ ಸಮೃದ್ಧವಾಗಿದೆ. ಹೀಗಾಗಿ ಬೆಲೆಗಳು ಇಳಿದಿವೆ.
ಈ ಹಿಂದೆ ಎಪಿಎಂಸಿ ಮಾರುಕಟ್ಟೆಗೆ 25-30 ಸಾವಿರ ಬಾಕ್ಸ್‌ ಟೊಮೊಟೊ ಬರುತ್ತಿತ್ತು. (ಪ್ರತಿ ಬಾಕ್ಸ್ 14 ಕೆಜಿ ) ಈಗ 50-60 ಸಾವಿರ ಬಾಕ್ಸ್ ಬರುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆ ಮಾಲೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚು ಪೂರೈಕೆಯಾಗುತ್ತದೆ. ಈ ಹಿಂದೆ ಟೊಮೊಟೊಗೆ ಉತ್ತಮ ಬೆಲೆ ಇದ್ದ ಕಾರಣ ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ಜಿಲ್ಲೆಗಳಲ್ಲೂ ಬೆಳೆಯಲಾಗಿದೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚು ಪೂರೈಕೆಯಾಗುತ್ತಿದೆ. ಲಾರಿ ಬಾಡಿಗೆ ಹೆಚ್ಚಾಗಿರುವುದರಿಂದ ಹೊರ ರಾಜ್ಯಗಳಿಗೆ ಕೂಡಾ ಹೋಗುತ್ತಿಲ್ಲ. ಸದ್ಯ ಹಬ್ಬ, ಮದುವೆ ಭರಾಟೆಯೂ ಇಲ್ಲ. ಇದು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ಎಪಿಎಂಸಿ ತರಕಾರಿ ವ್ಯಾಪಾರಿ ಶ್ರೀರಾಮರೆಡ್ಡಿ.

ಟೊಮೊಟೊ ದರ ಇಳಿಕೆ

ಅಡುಗೆಗೆ ಬಳಸುವ ಟೊಮೊಟೊ ಬೆಲೆಯಂತೂ ಕೆಜಿಗೆ 40-50 ರೂ.ಗೆ ಜಿಗಿದಿತ್ತು. ಈ ಹಿಂದೆ ಬೆಂಗಳೂರು ಎಪಿಎಂಸಿ ಮಾರುಕಟ್ಟೆಯ ಸಗಟು ಬೆಲೆ 12 ಕೆಜಿ ಸಣ್ಣ ಬಾಕ್ಸಿಗೆ 400-450 ರೂ. ಹಾಗೂ ದೊಡ್ಡ 14 ಕೆಜಿ ಬಾಕ್ಸಿಗೆ 500-600 ರೂ. ಇತ್ತು. ಈಗ ಇದರ ಬೆಲೆ ಸಣ್ಣ ಬಾಕ್ಸ್ 12 ಕೆಜಿಗೆ 60-100 ರೂ. ಗೆ ಇಳಿಕೆಯಾಗಿದೆ. ದೊಡ್ಡ ಬಾಕ್ಸ್ (14 ಕೆಜಿ) 120-150 ರೂ. ಗೆ ತಗ್ಗಿದೆ. ಚಿಲ್ಲರೆ ದರದಲ್ಲಿ ಈ ಹಿಂದೆ ಕೆಜಿಗೆ 40-50 ರೂ. ಇದ್ದ ಬೆಲೆ ಈಗ 15-20 ರೂ.ಗೆ ಇಳಿದಿದೆ.
ತರಕಾರಿ: ಹುರುಳಿಕಾಯಿ, ಕ್ಯಾರೆಟ್, ಹೀರೆಕಾಯಿ, ಬೆಂಡೆಕಾಯಿ, ನವಿಲುಕೋಸು, ಹಾಗಲಕಾಯಿ ಹೀಗೆ ಬಹುತೇಕ ತರಕಾರಿಗಳ ದರದಲ್ಲಿ 30-40% ಬೆಲೆ ಇಳಿಕೆಯಾಗಿದೆ. ಈ ಹಿಂದೆ ಹುರುಳಿಕಾಯಿ ಸಗಟು ದರ 80-120 ರೂ.ಗೆ ಜಿಗಿದಿತ್ತು. ಈಗ 20-25 ರೂ. ಕುಸಿದಿದೆ. ಈ ಹಿನ್ನೆಲೆಯಲ್ಲಿ 80-100 ರೂ. ಇದ್ದ ಚಿಲ್ಲರೆ ದರ ಈಗ 40-60 ರೂ.ಗೆ ಏರಿಕೆಯಾಗಿದೆ. ಕ್ಯಾರೆಟ್‌ನ ಸಗಟು ದರ 80-90 ರೂ.ಗಳಿಂದ 30- 40 ರೂ. ಗೆ ಇಳಿಕೆಯಾಗಿದೆ. ಚಿಲ್ಲರೆ ದರ 80-90 ರೂ.ಗಳಿಂದ 50-60 ರೂ.ಗೆ ಇಳಿದಿದೆ.

ಮೂಲಂಗಿ, ಹೂಕೋಸು, ನವಿಲುಕೋಸು, ಬದನೆಕಾಯಿ, ಬಿಳಿ ಬದನೆಕಾಯಿ, ಸಗಟು ಬೆಲೆ ಕೆಜಿಗೆ 15-20 ರೂ.ಗೆ ಮಾರಾಟವಾಗುತ್ತಿದೆ. ಹಿರೇಕಾಯಿ, ಹಾಗಲಕಾಯಿ, ಕ್ಯಾಪ್ಸಿಕಮ್ ಕೆಜಿಗೆ 30-40 ರೂ. ಗೆ ಮಾರಾಟವಾಗುತ್ತಿದೆ.

ಸೊಪ್ಪು ಅಗ್ಗ


ಕಳೆದ ಮೂರು ತಿಂಗಳಿಂದ ಸೊಪ್ಪಿನ ದರ ಗಗನಕ್ಕೇರಿತ್ತು. ಒಂದು ಕಟ್ಟು ಕೊತ್ತಂಬರಿ ಸೊಪ್ಪು 80-100 ರೂ.ಗೆ ಏರಿತ್ತು. ಮೆಂತೆ 50-60 ರೂ, ಪಾಲಾಕ್ 40-50 ರೂ, ಚಕೋತ 40-50 ರೂ.ಗೆ ಏರಿತ್ತು. ಈಗ ಅದರ ಬೆಲೆ ಕೊತ್ತಂಬರಿಯ ಒಂದು ಕಟ್ಟಿಗೆ 10-15 ರೂ. ಮೆಂತ್ಯ 15-20 ರೂ. ಪಾಲಕ್ ಚಕೊತಾ ಸಬ್ಬಸಿಗೆ 10-15 ರೂ. ಗೆ ಇಳಿಕೆಯಾಗಿದೆ.
ಹೊಸಕೋಟೆ, ಮಾಲೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಸೊಪ್ಪು ಬೆಳೆಯಲಾಗುತ್ತಿದೆ. ಒಂದು ತಿಂಗಳಿಂದ ಮಳೆ ಬಿಡುವು ಕೊಟ್ಟಿದ್ದರಿಂದ ಸೊಪ್ಪು ಬೆಳೆಯಲು ಅನುಕೂಲವಾಗಿದೆ. ಮಾರುಕಟ್ಟೆಗೆ ಸೊಪ್ಪು ಅಧಿಕ ಪ್ರಮಾಣದಲ್ಲಿ ಬರುತ್ತಿದೆ. ಇದು ಸೊಪ್ಪು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ಹೇಳುತ್ತಾರೆ ಎಪಿಎಂಸಿಯ ಸೊಪ್ಪು ವ್ಯಾಪಾರಿ ಜಿ ಮುನಿಸ್ವಾಮಿ.

ಮಳೆಯ ಬಿಡುವು, ತರಕಾರಿ ಕೃಷಿಗೆ ಅನುಕೂಲ

ಎರಡು ತಿಂಗಳಿಂದ ಮಳೆ ಬಿಡುವು ಕೊಟ್ಟಿದ್ದು, ತರಕಾರಿ ಬೆಳೆ ಮಾಡಲು ರೈತರಿಗೆ ಅನುಕೂಲವಾಗಿದೆ. ಈ ಹಿಂದೆ ತರಕಾರಿಗೆ ಉತ್ತಮ ಬೆಲೆ ಇತ್ತು. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತರಕಾರಿ ಬೆಳೆ ಮಾಡಿದ್ದಾರೆ. ಇದೇ ಸಮಯದಲ್ಲಿ ಹೊರ ರಾಜ್ಯಗಳಿಗೆ ಹೆಚ್ಚು ತರಕಾರಿ ಹೋಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಹಿಂದಿಗಿಂತ ಶೇ. 50 ಪೂರೈಕೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ತರಕಾರಿ ವರ್ತಕರ ಸಂಘದ ನಿರ್ದೇಶಕರು ದೇವರಾಜ.

Exit mobile version