ಮುಂಬಯಿ: ಐಸಿಐಸಿಐ ಬ್ಯಾಂಕ್‌ನಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿ ವಿಡಿಯೊಕಾನ್ ಕಂಪನಿಯ ಚೇರ್ಮನ್ ವೇಣುಗೋಪಾಲ್ ಧೂತ್ (Videocon Chairman) ಅವರನ್ನು ಸಿಬಿಐ ಮುಂಬಯಿನಲ್ಲಿ ಸೋಮವಾರ ಬಂಧಿಸಿದೆ.
ಸಿಬಿಐ ಕಳೆದ ಶುಕ್ರವಾರ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಬಂಧಿಸಿತ್ತು. 2018ರಲ್ಲಿ ಚಂದಾ ಕೊಚ್ಚಾರ್ ಬ್ಯಾಂಕ್‌ನ ಸಿಇಒ ಹುದ್ದೆಯಿಂದ ನಿರ್ಗಮಿಸಿದ್ದರು. ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ವಹಿಸಲಾಗಿತ್ತು.
ಏನಿದು ಹಗರಣ?
ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಸಿಇಒ ಆಗಿ 2009 ಮೇನಲ್ಲಿ ಅಧಿಕಾರ ವಹಿಸಿದ್ದರು. ಬಳಿಕ ವಿಡಿಯೊಕಾನ್ ಗ್ರೂಪ್‌ನ ಕಂಪನಿಗಳಿಗೆ ಅಕ್ರಮವಾಗಿ 1,875 ಕೋಟಿ ರೂ. ಬ್ಯಾಂಕ್ ಸಾಲವನ್ನು ಮಂಜೂರು ಮಾಡಿದ್ದ ಆರೋಪವನ್ನು ಚಂದಾ ಕೊಚ್ಚಾರ್ ಎದುರಿಸುತ್ತಿದ್ದಾರೆ. 2017ರಲ್ಲಿ ವಿಡಿಯೊಕಾನ್ ಸಾಲ ಅನುತ್ಪಾದಕ ಸಾಲವಾಗಿ ಬದಲಾಗಿತ್ತು. ಬ್ಯಾಂಕ್‌ಗೆ ಇದರಿಂದ ನಷ್ಟ ಉಂಟಾಗಿತ್ತು. ಬ್ಯಾಂಕ್‌ಗೆ ಒಟ್ಟು 1730 ಕೋಟಿ ರೂ. ವಂಚನೆಯಾಗಿದೆ.
ವಿಡಿಯೊಕಾನ್ ಸಮೂಹವು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಒಟ್ಟು 40,000 ಕೋಟಿ ರೂ. ಸಾಲ ತೆಗೆದುಕೊಂಡಿತ್ತು. ಅದರ ಭಾಗವಾಗಿ ಐಸಿಐಸಿಐ ಬ್ಯಾಂಕ್‌ನಿಂದಲೂ ಸಾಲ ಪಡೆಯಲಾಗಿತ್ತು.