ಮುಂಬಯಿ: ವಿದೇಶಗಳಲ್ಲಿ ತೈಲ ಮತ್ತು ಅನಿಲ ಉತ್ಪಾದನೆ ಘಟಕಗಳ ಅಭಿವೃದ್ಧಿ ನೆಪದದಲ್ಲಿ ವಿಡಿಯೊಕಾನ್ ಗ್ರೂಪ್ 60,000 ಕೋಟಿ ರೂ. ಬ್ಯಾಂಕ್ ಸಾಲವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯವಿ ಕಳೆದ ಶುಕ್ರವಾರ ವಿಶೇಷ ಪಿಎಂಎಲ್‌ಎ ಕೋರ್ಟ್‌ಗೆ ತಿಳಿಸಿದೆ. (Videocon Group) ವಿಡಿಯೊಕಾನ್ ಗ್ರೂಪ್ ಮೊಜಾಂಬಿಕ್, ಬ್ರೆಜಿಲ್, ಇಂಡೊನೇಷ್ಯಾ, ಆಸ್ಟ್ರೇಲಿಯಾ, ಈಸ್ಟ್ ಟಿಮೋರ್‌ನಲ್ಲಿ ತನ್ನ ತೈಲ ಮತ್ತು ಅನಿಲ ಘಟಕಗಳ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮವಾಗಿ ಬ್ಯಾಂಕ್ ಸಾಲದ ಹಣವನ್ನು ವರ್ಗಾವಣೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್‌ಗೆ ತಿಳಿಸಿದೆ.
ವಿಡಿಯೊಕಾನ್ ಗ್ರೂಪ್ ಉದ್ಯಮಿ ಸಚಿನ್ ದೇವ್ ದುಗ್ಗಲ್ ಜತೆ ಅಕ್ರಮವಾಗಿ ಹಣಕಾಸು ವ್ಯವಹಾರಗಳನ್ನು ನಡೆಸಿದೆ. ಈ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯ ಇದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಕಳೆದ 2020ರ ಜೂನ್ 23ರಂದು ಇ.ಡಿಯು ವಿಡಿಯೊಕಾನ್ ಸಮೂಹದ ಸ್ಥಾಪಕ ವೇಣುಗೋಪಾಲ್ ಧೂತ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಐಸಿಐಸಿಐ ಬ್ಯಾಂಕ್ ಸಾಲ ಹಗರಣದಲ್ಲಿ ಆರೋಪಿಯಾಗಿರುವ ವೇಣುಗೋಪಾಲ್ ಧೂತ್‌ಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಜಾಮೀನು ನೀಡಿತ್ತು. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.