ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಭಾರತದ ಆಟೊಮೊಬೈಲ್ ಉದ್ದಿಮೆಯ ದಿಗ್ಗಜರಲ್ಲಿ ಒಬ್ಬರಾಗಿರುವ ವಿಕ್ರಮ್ ಕಿರ್ಲೋಸ್ಕರ್ ಅವರು ದೇಶಕ್ಕೆ ಟೊಯೊಟಾವನ್ನು ಪರಿಚಯಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟೊಯೊಟಾ ಮೋಟಾರ್ ಕಾರ್ಪೊರೇಷನ್ 1997ರಲ್ಲಿ ಕಿರ್ಲೋಸ್ಕರ್ ಗ್ರೂಪ್‌ನೊಂದಿಗೆ ಸಹಭಾಗಿತ್ವದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಟೊಯೊಟಾ ಮೋಟಾರ್ ಕಾರ್ಪೊರೇಷನ್‌ನಲ್ಲಿ 11% ಷೇರುಗಳನ್ನು ಕಿರ್ಲೋಸ್ಕರ್ ಗ್ರೂಪ್ ಹೊಂದಿದೆ. ಬೆಂಗಳೂರಿನ ಬಿಡದಿಯಲ್ಲಿ ಪ್ರಧಾನ ಕಚೇರಿ ಮತ್ತು ಉತ್ಪಾದನಾ ಘಟಕವನ್ನು ಹೊಂದಿದೆ. ಈ ಘಟಕ 850 ಎಕರೆ ಜಾಗದಲ್ಲಿದ್ದು, ವಾರ್ಷಿಕ 1.1 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ವಿಕ್ರಮ್ ಕಿರ್ಲೋಸ್ಕರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಟೊಯೊಟಾ ಇಂಡಿಯಾ ಕೂಡ ಈ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಇಂದು ಮಧ್ಯಾಹ್ನ ವಿಕ್ರಮ್ ಕಿರ್ಲೋಸ್ಕರ್ ಅವರ ಅಂತ್ಯಕ್ರಿಯೆ ನೆರವೇರಲಿದೆ.