ಬೆಂಗಳೂರು: ನಮ್ಮ ದೇಶ ನಿಧಾನವಾಗಿ ಡಿಜಿಟಲ್ ಪೇಮಂಟ್ (Digital Payments)ನತ್ತ ಹೆಜ್ಜೆ ಹಾಕುತ್ತಿದೆ. ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆಯನ್ನು ವ್ಯಾಪಕಗೊಳಿಸಿದೆ. ಹೀಗಾಗಿ ಇದೀಗ ಹೆಚ್ಚಿನವರು ಕೈಯಲ್ಲಿ ಕ್ಯಾಶ್ ಹಿಡಿದುಕೊಂಡು ಓಡಾಡುವುದೇ ಇಲ್ಲ. ಇದೇ ಕಾರಣಕ್ಕೆ ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ನಗದು ಪಡೆಯಲು ಒದ್ದಾಡುತ್ತೇವೆ. ಎಟಿಂ ಹುಡುಕಿಕೊಂಡು ಓಡಾಡುತ್ತೇವೆ. ಕೆಲವೊಮ್ಮೆ ಎಟಿಂನಲ್ಲಿ ದುಡ್ಡು ಖಾಲಿಯಾಗಿದ್ದರೆ ಕಥೆ ಮುಗಿದೇ ಹೋಯಿತು. ಆದರೆ ಇನ್ನು ಮುಂದೆ ನಿಮಗೆ ಇಂತಹ ಸಮಸ್ಯೆ ಎದುರಾಗದು. ಯಾಕೆಂದರೆ ವರ್ಚ್ಯುವಲ್ ಎಟಿಎಂ (Virtual ATM) ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲಿದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಎಟಿಎಂಗೆ ಹೋಗದೆ ನಿಮ್ಮ ಹತ್ತಿರದ ಅಂಗಡಿಯಿಂದ ಹಣ ಪಡೆಯಲು ವರ್ಚ್ಯುವಲ್ ಎಟಿಎಂ ಸಹಾಯ ಮಾಡುತ್ತದೆ. ಕೇವಲ ಒಂದೇ ಒಂದು ಒಟಿಪಿ ಸಹಾಯದಿಂದ ನಿಮ್ಮ ಹತ್ತಿರದ ಯಾವುದೇ ಪೇಮಾರ್ಟ್ (PayMart) ಇಂಡಿಯಾ ಅಂಗಡಿಯಿಂದ ಹಣವನ್ನು ಪಡೆಯಬಹುದು. ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್‌ಫೋನ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮತ್ತು ಇಂಟರ್‌ನೆಟ್ ಇದ್ದರೆ ಸಾಕು. ಚಂಡೀಗಢ ಮೂಲದ ಫಿನ್‌ಟೆಕ್ ಕಂಪೆನಿಯು ಈ ವರ್ಚ್ಯುವಲ್ ಎಟಿಎಂ ಸೇವೆ ಆರಂಭಿಸಿದೆ.
ನಗದು ಪಡೆಯುವುದು ಹೇಗೆ?
ʼʼಮೊದಲು ನಿಮ್ಮ ಬ್ಯಾಂಕ್‌ನ ಆ್ಯಪ್ ಡೌನ್‌ಲೋಡ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್ ನೀಡಿ ಬ್ಯಾಂಕಿಂಗ್ ಆ್ಯಪ್ ಓಪನ್ ಮಾಡಿ. ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಪೇಮಾರ್ಟ್‌ನೊಂದಿಗೆ ಎಂಪನೆಲ್ ಮಾಡಲಾದ ಹತ್ತಿರದ ಅಂಗಡಿಗೆ ಹೋಗಿ ನೀವು ಒಟಿಪಿ ತಿಳಿಸಿದರೆ ನಗದು ಲಭಿಸುತ್ತದೆʼʼ ಎಂದು ಪೇಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Paymart India Pvt Ltd)ನ ಸ್ಥಾಪಕ ಮತ್ತು ಸಿಇಒ ಅಮಿತ್ ನಾರಂಗ್ ತಿಳಿಸಿದ್ದಾರೆ.
ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪೇಮಾರ್ಟ್‌ನಲ್ಲಿ ವರ್ಚ್ಯುವಲ್ ಎಟಿಎಂಗಾಗಿ ನೋಂದಾಯಿಸಲಾದ ಹೆಸರು, ಸ್ಥಳ ಮತ್ತು ಫೋನ್ ಸಂಖ್ಯೆಗಳೊಂದಿಗೆ– ಅಂಗಡಿಗಾರರ ಪಟ್ಟಿಯನ್ನು ತೋರಿಸಲಾಗುತ್ತದೆ. “ಹಣ ಹಿಂಪಡೆಯಲು ಯಾವುದೇ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಯಂತ್ರ ಅಗತ್ಯವಿಲ್ಲʼʼ ಎಂದು ಅವರು ವಿವರಿಸಿದ್ದಾರೆ. ಪ್ರಯಾಣದ ವೇಳೆ ಈ ಸೇವೆಯಿಂದ ಅನುಕೂಲವಾಗಲಿದೆ.
ಎಲ್ಲಿ ಲಭ್ಯ?
ಫಿನ್‌ಟೆಕ್ ಸಂಸ್ಥೆಯು ಈ ಸೇವೆಯನ್ನು ಇಂಡಿಯನ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಕರೂರ್ ವೈಶ್ಯ ಬ್ಯಾಂಕ್ ಸಹಭಾಗಿತ್ವದೊಂದಿಗೆ ಹೊರತಂದಿದೆ. ʼʼಪ್ರಸ್ತುತ ವರ್ಚ್ಯುವಲ್ ಎಟಿಎಂ ಸೇವೆಯು ಚಂಡೀಗಢ, ದೆಹಲಿ, ಹೈದರಾಬಾದ್, ಚೆನ್ನೈ ಮತ್ತು ಮುಂಬೈಯ ಆಯ್ದ ಸ್ಥಳಗಳಲ್ಲಿ ಮಾತ್ರ ಲಭ್ಯವಿದೆ. ಶೀಘ್ರ ಎಲ್ಲ ಕಡೆ ದೊರೆಯಲಿದೆʼʼ ಎಂದು ಅಮಿತ್ ನಾರಂಗ್ ವಿವರಿಸಿದ್ದಾರೆ. ಮೇ ವೇಳೆಗೆ ಇದು ದೇಶಾದ್ಯಂತ ಲಭಿಸುವ ಸಾಧ್ಯತೆ ಇದೆ. ವರ್ಚ್ಯುವಲ್ ಎಟಿಎಂ ಬಳಸಲು ಗ್ರಾಹಕರು ಸದ್ಯಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಈ ಸೌಲಭ್ಯ ಬಳಸಿಕೊಂಡು ಪ್ರತಿ ವಹಿವಾಟಿಗೆ ಕನಿಷ್ಠ ಮೊತ್ತ 100 ರೂ. ಮತ್ತು ಗರಿಷ್ಠ 2,000 ರೂ.ಗಳನ್ನು ಹಿಂಪಡೆಯಬಹುದು. ಗರಿಷ್ಠ ಮಿತಿಯನ್ನು ತಿಂಗಳಿಗೆ 10,000 ರೂ.ಗೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ತನಿಖೆ ಆರಂಭಿಸಿದ ಇ.ಡಿ!
ಪ್ರಯೋಜನವೇನು?
ವರ್ಚ್ಯುವಲ್ ಎಟಿಎಂ ದೂರದ ಪ್ರದೇಶ, ವಿವಿಧೆಡೆಗಳ ಗ್ರಾಹಕರಿಗೆ ಸೇವೆ ಸಲ್ಲಿಸಲು ಬ್ಯಾಂಕ್‌ಗಳಿಗೆ ಸಹಾಯ ಮಾಡುತ್ತವೆ. ಸಾಂಪ್ರದಾಯಿಕ ಎಟಿಎಂ ಅನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಬ್ಯಾಂಕ್ ಶಾಖೆಗಳಲ್ಲಿನ ಜನಸಂದಣಿಯನ್ನು ಕರಗಿಸುತ್ತದೆ. ಎಂಪನೆಲ್ ಮಾಡಲಾದ ಅಂಗಡಿಯವರು ವಹಿವಾಟುಗಳ ಮೇಲೆ ಕಮಿಷನ್ ಗಳಿಸುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ