Site icon Vistara News

ವಿಸ್ತಾರ Money Guide : Invest in gold: ಬಂಗಾರದಲ್ಲಿ ಈಗ ಹೂಡಿಕೆ ಮಾಡಬಹುದೇ?

gold bars

ಚಿನ್ನ ಮತ್ತು ರಿಯಲ್‌ ಎಸ್ಟೇಟ್‌ನಲ್ಲಿ ಜನ ಹಿಂದಿನಿಂದಲೂ ನಿರಂತರವಾಗಿ ಹೂಡಿಕೆ ಮಾಡುತ್ತಲೇ ಬಂದಿದ್ದಾರೆ. ಇತಿಹಾಸವನ್ನು ಗಮನಿಸಿದರೆ ಭೂಮಿ, ಹೆಣ್ಣು, ಹೊನ್ನಿನ ಸಲುವಾಗಿ (gold) ಅನೇಕ ಯುದ್ಧಗಳೇ ಸಂಭವಿಸಿವೆ. ಸಹಸ್ರಮಾನಗಳಲ್ಲಿ ಚಿನ್ನ ಅದೆಂಥಾ ನಿರ್ಣಾಯಕ ಪಾತ್ರ ವಹಿಸಿದೆ (Invest in gold) ಎಂಬುದನ್ನು ಚರಿತ್ರೆಯ ಅಧ್ಯಯನದ ಮೂಲಕ ನಾವು ತಿಳಿಯಬಹುದು. ಅದರಲ್ಲೂ ಕಳೆದ 100 ವರ್ಷಗಳಲ್ಲಿ ಪರ್ಯಾಯ ಹೂಡಿಕೆಯ ಸಾಧನವಾಗಿ ಬಂಗಾರ ನಿರ್ಣಾಯಕ ಪಾತ್ರ ವಹಿಸಿದೆ. (ವಿಸ್ತಾರ Money Guide)

ಆರ್ಥಿಕ ವಿಪತ್ತಿನ ಸಂದರ್ಭಗಳಲ್ಲಿ ಬಂಗಾರ ಹೂಡಿಕಗೆ ಅತ್ಯಂತ ಪ್ರಶಸ್ತ ಆಯ್ಕೆಯಾಗಿ ಹೊರಹೊಮ್ಮಿದೆ. ಜಗತ್ತಿನ ನಾನಾ ದೇಶಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳು, ಅಂದರೆ ಭಾರತದಲ್ಲಿ ಆರ್‌ಬಿಐ ಇರುವಂತೆ ಆಯಾ ದೇಶಗಳಲ್ಲಿ ಇರುವ ಸೆಂಟ್ರಲ್‌ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸಿವೆ. ಜಾಗತಿಕ ವಿಪ್ಲವಗಳು ಮತ್ತು ಅನಿಶ್ಚಿತತೆಯ ಪರಿಣಾಮ ಚಿನ್ನಕ್ಕೆ ಚಿನ್ನದಂಥ ಬೇಡಿಕೆ ಬಂದು ಬಿಟ್ಟಿದೆ. ಇದಕ್ಕೆ ಹಲವು ಕಾರಣಗಳೂ ಇವೆ. ಅವುಗಳನ್ನು ಗಮನಿಸೋಣ.‌

ರಷ್ಯಾ-ಉಕ್ರೇನ್‌ ಸಮರದ ಪರಿಣಾಮ: ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಸಮರ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಯಾಗಿ ಉಳಿದಿಲ್ಲ. ಇದರ ನೆರಳು ಇಡೀ ಭೂಮಿಯನ್ನು ಕಾಡುತ್ತಿದೆ. ಜಗತ್ತಿನಾದ್ಯಂತ ಪೂರೈಕೆಯ ಸರಣಿ (supply chain) ಅಸ್ತವ್ಯಸ್ತವಾಗಿದೆ. ಮುಖ್ಯವಾಗಿ ಇಂಧನ ವಿತರಣೆಯ ಜಾಲಕ್ಕೆ ಅಡಚಣೆ ಉಂಟಾಗಿದೆ. ಹೀಗಾಗಿ ಇಂಧನ ದರಗಳು ಏರುತ್ತಿವೆ. ಇದು ಹೂಡಿಕೆಯ ಟ್ರೆಂಡ್‌ಗಳ ಮೇಲೂ ಪ್ರಭಾವ ಬೀರುತ್ತಿದೆ.

ಅಮೆರಿಕದ ಆರ್ಥಿಕ ಬಿಕ್ಕಟ್ಟು ಎಫೆಕ್ಟ್:ರಷ್ಯಾ- ಉಕ್ರೇನ್ ಸಂಘರ್ಷದ ಬಳಿಕ ಅಮೆರಿಕ ಹಲವು ಸಮಸ್ಯೆಗಳನ್ನು ಎದುರಿಸಿದೆ. ರಷ್ಯಾದ ಬಳಿ ಇದ್ದ ಡಾಲರ್‌ ಸಂಪತ್ತನ್ನು ಅಮೆರಿಕ ನಿರ್ಬಂಧಿಸಿದ ಬಳಿಕ (froze) ಡಾಲರ್‌ ಕರೆನ್ಸಿ ಒಂದು ಆಯುಧವಾಗಿ ಬಳಕೆಯಾಗುತ್ತಿರುವುದರ ಅಪಾಯದ ಬಗ್ಗೆ ನಾನಾ ದೇಶಗಳು ಎಚ್ಚೆತ್ತುಕೊಂಡವು. ಹೀಗಾಗಿ ಡಾಲರ್‌ಗೆ ಪರ್ಯಾಯ ಸಾಧನವನ್ನು ಕಂಡುಕೊಳ್ಳಲು ಹುಡುಕಾಟ ಶುರುವಾಯಿತು. ಆಯಾ ದೇಶಗಳ ಕರೆನ್ಸಿಗಳನ್ನೇ ಡಾಲರ್‌ ಬದಲು ವಿನಿಮಯ ಮಾಡಿಕೊಳ್ಳುವ ದ್ವಿಪಕ್ಷೀಯ ಏರ್ಪಾಟುಗಳು ನಡೆಯಿತು. ಇದು ಡಾಲರ್‌ಗೆ ಸವಾಲಾಗಿ ಪರಿಣಮಿಸಿದೆ. ಅಮೆರಿಕದಲ್ಲೂ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಅಧಿಕ ಬಡ್ಡಿ ದರಗಳು ಅಲ್ಲಿನ ಬಿಸಿನೆಸ್‌ ವಲಯವನ್ನು ಕಾಡುತ್ತಿದೆ. ಉದ್ಯಮ ವಲಯ ಹೊಸ ಹೂಡಿಕೆಗಳನ್ನು ಕಡಿಮೆ ಮಾಡಿದರೆ ಉದ್ಯೋಗಾವಕಾಶಗಳೂ ಕುಸಿಯಲಿವೆ. ಆಗ ಸಾಲದ ಬಿಕ್ಕಟ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಮೂರು ಬ್ಯಾಂಕ್‌ಗಳು ಈಗಾಗಲೇ ದಿವಾಳಿಯಾಗಿವೆ. ಎಫ್‌ಡಿ ಬಡ್ಡಿ ದರ ಏರಿಕೆಯಾಗಿರುವುದರಿಂದ ಜನ ಎಫ್‌ಡಿಗಳಲ್ಲಿ ಹೂಡಿಕೆ ಹೆಚ್ಚಿಸುತ್ತಿದ್ದಾರೆ. ಇದು ಅಮೆರಿಕದಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟನ್ನು ಹೆಚ್ಚಿಸಿದೆ. ಏಕೆಂದರೆ ಅತಿಯಾದ ಬಡ್ಡಿ ದರದ ಪರಿಣಾಮ ರಿಯಾಲ್ಟಿ ವಹಿವಾಟು ಕುಸಿಯುತ್ತಿದೆ. ಉದ್ಯಮ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಇದು ಮತ್ತೆ ಬ್ಯಾಂಕ್‌ಗಳ ವ್ಯವಹಾರಕ್ಕೆ ಕುತ್ತಾಗಿದೆ. ಅಮೆರಿಕವನ್ನು ರಿಸೆಶನ್‌ ಕಡೆಗೆ ಕೊಂಡೊಯ್ಯುತ್ತಿದೆ. ಸರ್ಕಾರದ ಸಾಲ ಬಲೂನಿನಂತೆ ಉಬ್ಬುತ್ತಿದೆ. ಹೀಗಾಗಿ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ.

ಚಿನ್ನದ ಹೂಡಿಕೆಗೆ ಹಲವು ವಿಧ: ಬಂಗಾರದ ಮೇಲೆ ಹೂಡಿಕೆಗೆ ಹಲವು ವಿಧ. ಜ್ಯುವೆಲ್ಲರಿ ಶಾಪ್‌ಗಳಲ್ಲಿ ಚಿನ್ನಾಭರಣ, ನಾಣ್ಯ, ಗಟ್ಟಿಗಳನ್ನು ಖರೀದಿಸುವುದು ಒಂದು ವಿಧ. ಸಾವರಿನ್‌ ಗೋಲ್ಡ್‌ ಬಾಂಡ್‌ (Sovereign gold bond ), ಇಟಿಎಫ್‌ಗಳಲ್ಲಿ ಹೂಡುವುದು ಮತ್ತೊಂದು ವಿಧ. ಹೂಡಿಕೆ ತಜ್ಞರ ಪ್ರಕಾರ ಒಟ್ಟು ಹೂಡಿಕೆಯಲ್ಲಿ 5-10% ಪಾಲನ್ನು ಬಂಗಾರದಲ್ಲಿ ಹೂಡುವುದು ಸೂಕ್ತ.

ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರ 10 ಗ್ರಾಮ್‌ಗೆ : 60,700

22 ಕ್ಯಾರಟ್‌ ಬಂಗಾರದ ದರ: 55,650 ರೂ.

ಇದನ್ನೂ ಓದಿ: Stock Vs Gold : ಕಳೆದ 20 ವರ್ಷಗಳಲ್ಲಿ ಹೆಚ್ಚು ಲಾಭ ಕೊಟ್ಟಿದ್ದು ಚಿನ್ನವೇ? ಸ್ಟಾಕ್‌ ಮಾರುಕಟ್ಟೆಯೇ? ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

Exit mobile version