Site icon Vistara News

ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

cash

ಮಕ್ಕಳಿಗೆ ಬಾಲ್ಯದಲ್ಲಿಯೇ ಹಣ ಸಂಪಾದನೆ, ಉಳಿತಾಯ ಮತ್ತು ಖರ್ಚು ವೆಚ್ಚಗಳ ಬಗ್ಗೆ ತಿಳಿಸಿಕೊಡಬೇಕು. ಭಾರತದಲ್ಲಿ ಪೋಷಕರು ನಾನಾ ವಿಧಾನಗಳಲ್ಲಿ ಅದನ್ನು ಮಾಡುತ್ತಿದ್ದಾರೆ. ಹಾಸಿಗೆ ಇದ್ದಷ್ಟೇ ಕಾಲು ಚಾಚು, ಕೂತು ಉಂಬವನಿಗೆ ಕುಡಿಕೆ ಹೊನ್ನು ಸಾಲದು ಎಂಬಿತ್ಯಾದಿ ಗದೆ ಮಾತುಗಳೂ ನಮ್ಮಲ್ಲಿ ಇವೆ. ಇವೆಲ್ಲವೂ ಪರ್ಸನಲ್‌ ಫೈನಾನ್ಸ್‌ಗೆ ಸಂಬಂಧಿಸಿದ್ದು. ಹಾಗಾದರೆ ದುಡ್ಡು ಗಳಿಸುವುದರ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುದು? ಎಂಬುದನ್ನು ನೋಡೋಣ.

ಹಣದ ಬಗ್ಗೆ ಮೂರು ಮನಸ್ಥಿತಿಗಳು ಪ್ರಭಾವ ಬೀರುತ್ತದೆ ಎನ್ನುತ್ತಾರೆ ಸೆಂಟರ್‌ ಫಾರ್‌ ಇನ್ವೆಸ್ಟ್‌ಮೆಂಟ್‌ ಎಜುಕೇಶನ್‌ & ಲರ್ನಿಂಗ್‌ನ ಅಧ್ಯಕ್ಷೆ ಉಮಾ ಶಶಿಕಾಂತ್.‌ ಒಂದು ಗಳಿಕೆ ಮಾಡುವುದು. ಎರಡನೆಯದ್ದು ಹೇಗೆ ಖರ್ಚು ಮಾಡಬೇಕು ಎಂಬುದು. ಮೂರನೆಯದ್ದು ಹೇಗೆ ಉಳಿಸುವುದು ಎಂಬುದು. ಹೌದಲ್ವ. ಪ್ರತಿಯೊಬ್ಬ ವ್ಯಕ್ತಿಯೂ ಹೇಗೆ ದುಡ್ಡು ಗಳಿಸಬಹುದು ಎಂಬುದನ್ನು ಆಲೋಚಿಸಿಯೇ ಇರುತ್ತಾರೆ. ಎರಡನೆಯದಾಗಿ ಹೇಗೆ ಖರ್ಚು ಮಾಡಬೇಕು ಎಂಬುದಾಗಿಯೀ ಚಿಂತನ-ಮಂಥನ ನಡೆಯುತ್ತದೆ. ಮೂರನೆಯದಾಗಿ ಹೇಗೆ ಉಳಿಸಬೇಕು ಎಂಬ ಲೆಕ್ಕಾಚಾರವೂ ನಡೆಯುತ್ತದೆ.

ಏನಾದರೂ ಖರ್ಚು ಮಾಡಬೇಕು ಎಂದಿದ್ದರೆ ಜೇಬಿನಲ್ಲಿ ದುಡ್ಡು ಇರಬೇಕು. ಜೇಬಿನಲ್ಲಿ ದುಡ್ಡು ಇದ್ದಾಗ ಅದನ್ನು ಹೇಗೆ ಖರ್ಚು ಮಾಡಬೇಕು ಎಂಬ ಪ್ಲಾನ್‌ ಬರುತ್ತದೆ. ಜತೆಗೆ ಅದರಲ್ಲಿ ಎಷ್ಟು ಉಳಿತಾಯ ಮಾಡಬಹುದು ಎಂಬುದೂ ಮನಸ್ಸಿಗೆ ಬರುತ್ತದೆ. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಸೇವೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವವರು ಡಿಸ್ಕೌಂಟ್‌ ಘೋಷಿಸುತ್ತಾರೆ. ಅದು ಗ್ರಾಹಕರನ್ನು ಆಕರ್ಷಿಸುತ್ತದೆ.

ಯುವ ಪೀಳಿಗೆ ಹೇಗೆ ಚಿಂತಿಸುತ್ತದೆ? ಈಗಿನ ಯುವ ಪೀಳಿಗೆಯು ಧಾರಾಳ ಖರ್ಚು ವೆಚ್ಚ ಮಾಡಲು ಹಿಂದೇಟು ಹಾಕುವುದಿಲ್ಲ. ಭರ್ಜರಿ ಸಂಪಾದಿಸುವ ಆತ್ಮ ವಿಶ್ವಾಸ ಇದಕ್ಕೆ ಕಾರಣ. ಉಳಿತಾಯ ಪ್ರವೃತ್ತಿ ಅವರ ಮನಸ್ಸಿನಲ್ಲಿ ಅಷ್ಟಾಗಿ ಇರುವುದಿಲ್ಲ. ಆದರೆ ಅಗತ್ಯಗಳಿಗೆ ತಕ್ಕಂತೆ ಆದಾಯ ಸಾಲುತ್ತಿಲ್ಲ ಎಂಬುದು ಅರಿವಿಗೆ ಬರುವಾಗ ಸಾಕಷ್ಟು ಕಾಲ ಕಳೆದು ಹೋಗಿರುತ್ತದೆ. ಅಥವಾ ಅವರ ಜಾಬ್‌ ರಿಸ್ಕ್‌ನಲ್ಲಿರುತ್ತದೆ ಎಂದು ಹೇಳುತ್ತಾರೆ ಸೆಂಟರ್‌ ಫಾರ್‌ ಇನ್ವೆಸ್ಟ್‌ಮೆಂಟ್‌ ಎಜುಕೇಶನ್‌ & ಲರ್ನಿಂಗ್‌ನ ಅಧ್ಯಕ್ಷೆ ಉಮಾ ಶಶಿಕಾಂತ್.‌ ಸಂಪತ್ತನ್ನು ಗಳಿಸಲು ಕಷ್ಟಪಟ್ಟು ದುಡಿಯುವ ಜನರೇಶನ್ನು ಸರಳವಾಗಿ ದುಡ್ಡು ಗಳಿಸುವುದನ್ನೂ ಕಾಣಬಹುದು. ಅನೇಕ ಕುಟುಂಬಗಳು ಹಣದ ಕೊರತೆ ಮತ್ತು ಬಡತನದ ದವಡೆಗೆ ಸಿಲುಕಿದ ಬಳಿಕ ಸತತ ಪರಿಶ್ರಮದಿಂದ ಸಂಪತ್ತನ್ನು ಗಳಿಸಿದ ಉದಾಹರಣೆಗಳೂ ಇವೆ. ಭಾರತೀಯರು ಹಿಂದಿನಿಂದಲೂ ಖರ್ಚು ಮಾಡುವಾಗ ಮಿತ ವ್ಯಯಕ್ಕೆ ಆದ್ಯತೆ ನೀಡುತ್ತಿದ್ದರು. ಉಳಿತಾಯಕ್ಕೆ ಎಲ್ಲಿಲ್ಲದ ಮಹತ್ವ ಕೊಡುತ್ತಿದ್ದರು.

ಇದನ್ನೂ ಓದಿ: PAN-Aadhaar linking : 1,000 ರೂ. ಶುಲ್ಕ ಕಟ್ಟಿಯೂ ಆಧಾರ್-ಪ್ಯಾನ್‌ ಲಿಂಕ್‌ ಆಗದಿದ್ದರೆ ಮುಂದೇನು: ಸಿಬಿಡಿಟಿ ಸ್ಪಷ್ಟನೆ

ಈಗಿನ ಯುವ ಪೀಳಿಗೆಯ ಮುಂದೆ ಹಣ ಸಂಪಾದಿಸಲು ಹಲವಾರು ದಾರಿಗಳು ಇವೆ. ಈ ಹಿಂದಿನ ಪೀಳಿಗೆಯ ಜನತೆಗೆ ಇಂಥ ಅವಕಾಶಗಳು ಇದ್ದಿರಲಿಲ್ಲ. ಆದರೆ ಈಗಿನ ಯುವ ಪೀಳಿಗೆಯು ಉಳಿತಾಯಕ್ಕೂ ಆದ್ಯತೆ ನೀಡದಿದ್ದರೆ ಭವಿಷ್ಯದಲ್ಲಿ ಹಣಕಾಸು ಸಮಸ್ಯೆ ತೀವ್ರವಾದೀತು ಎನ್ನುತ್ತಾರೆ ತಜ್ಞರು. ಅನುಭವ ಮತ್ತು ನಿರೀಕ್ಷೆಗಳಿಂದ ಹಣದ ಬಗ್ಗೆ ನಮ್ಮ ಮನಸ್ಥಿತಿ ನಿರ್ಮಾಣವಾಗುತ್ತದೆ. ಹಣ ಸಂಪಾದಿಸುವ ಸಾಮರ್ಥ್ಯ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅದು ಮತ್ತಷ್ಟು ಖರ್ಚು ಮಾಡಲು ಪ್ರೇರೇಪಿಸುತ್ತದೆ. ಆದರೆ ಆಗ ವಿವೇಕಯುತರಾಗಿ ಉಳಿತಾಯಕ್ಕೂ ಮನಸ್ಸು ಮಾಡಬೇಕು. ನೀವು ಪೋಷಕರು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಬಿಸಿನೆಸ್‌ ಅನ್ನು ಮುನ್ನಡೆಸುತ್ತಿದ್ದೀರಿ ಎಂದು ಇಟ್ಟುಕೊಳ್ಳಿ. ಆಗ ಆತ್ಮ ವಿಶ್ವಾಸದಿಂದ ಅದನ್ನು ಮುಂದುವರಿಸುವ ಛಾತಿ ಇರಬೇಕು. ನಕಾರಾತ್ಮಕ ಧೋರಣೆ ಸಲ್ಲದು.

Exit mobile version