ನವ ದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಚೀನಾ ಮೂಲದ ವಿವೊ ಸೇರಿದಂತೆ ನಾನಾ ಸ್ಮಾರ್ಟ್ ಫೋನ್ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ( Enforcement Directorate) ಕಳೆದ ವರ್ಷದಿಂದೀಚೆಗೆ ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೇ ವಿವೊ ಕಂಪನಿಗೆ ಸಂಬಂಧಿಸಿದ ಇಬ್ಬರು ಚೀನಿ ನಿರ್ದೇಶಕರು ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಚೀನಾ ಮೂಲದ ಸ್ಮಾರ್ಟ್‌ಫೋನ್ ಉತ್ಪಾದಕ ವಿವೊ ಕಂಪನಿಯ ನಿರ್ದೇಶಕರಾಗಿದ್ದ ಜೆನ್‌ಶೆನ್ ಒಯು ಮತ್ತು ಜೆಂಗ್ ಜಿ ಎಂಬ ಇಬ್ಬರು ನಿರ್ದೇಶಕರು ಕಳೆದ ವರ್ಷವೇ ಭಾರತದಿಂದ ಪರಾರಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಕೇಸ್‌ಗೆ ಸಂಬಂಧಿಸಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿನ ಒಟ್ಟು ೪೦ ಸ್ಥಳಗಳಲ್ಲಿ ವಿವೊ ಹಾಗೂ ಸಂಬಂಧಿತ ಕಂಪನಿಗಳ ಮೇಲೆ ಇ.ಡಿ ದಾಳಿ ಇತ್ತೀಚೆಗೆ ನಡೆದಿದೆ. ಸಿಬಿಐ ಕೂಡ ಈಗಾಗಲೇ ತನಿಖೆ ನಡೆಸುತ್ತಿದೆ.
ಆದಾಯ ತೆರಿಗೆ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಕೂಡ ಚೀನಾ ಮೂಲದ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿವೆ.
ವಿವೊ ವಿರುದ್ಧದ ತನಿಖೆ ಚುರುಕು
ವಿವೊ ವಿರುದ್ಧದ ತನಿಖೆಯನ್ನು ಜಾರಿ ನಿರ್ದೇಶನಾಲಯವು ಚುರುಕುಗೊಳಿಸಿದೆ. ಜಮ್ಮು ಕಾಶ್ಮೀರದಲ್ಲಿ ವಿವೊ ಸ್ಮಾರ್ಟ್ ಫೋನ್‌ಗಳ ವಿತರಕ ಕಂಪನಿ ಆಗಿರುವ ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್‌ನ್ಯಾಶನಲ್ ಕಮ್ಯುನಿಕೇಶನ್‌ನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಕಂಪನಿಯ ಒಬ್ಬರು ಕಾರ್ಯದರ್ಶಿ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ. ನಕಲಿ ದಾಖಲಾತಿಗಳನ್ನು ಬಳಸಿಕೊಂಡು ಈ ಕಂಪನಿ ನೋಂದಣಿಯಾಗಿದೆ ಎಂದು ಆರೋಪಿಸಲಾಗಿದೆ.
ಐಟಿ, ಇ.ಡಿ ತನಿಖೆ ಏಕೆ?
ಆದಾಯ ತೆರಿಗೆ ಇಲಾಖೆ ಹಾಗೂ ಇ.ಡಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳ ವಿರುದ್ಧ ಕಳೆದ ವರ್ಷದಿಂದೀಚೆಗೆ ತನಿಖೆಯನ್ನು ತೀವ್ರಗೊಳಿಸಿವೆ. ಇದಕ್ಕೆ ಕಾರಣಗಳೂ ಇವೆ. ಚೀನಿ ಸ್ಮಾರ್ಟ್ ಫೋನ್ ಕಂಪನಿಗಳು ಮಾರುಕಟ್ಟೆಯಲ್ಲಿ ಲಾಭ ಗಳಿಸಿದರೂ, ತೆರಿಗೆಯನ್ನು ತಪ್ಪಿಸುವ ಸಲುವಾಗಿ ತಮ್ಮ ವಾಸ್ತವ ಆದಾಯದ ಲೆಕ್ಕಗಳನ್ನು ಮರೆ ಮಾಚುತ್ತಿರುವ ಆರೋಪವನ್ನು ಎದುರಿಸುತ್ತಿವೆ. ಈ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಮತ್ತೊಂದು ಕಡೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ತನಿಖೆ ಕೈಗೊಂಡಿದೆ.
” ಭಾರತೀಯ ತನಿಖಾ ಸಂಸ್ಥೆಗಳು ಕಾನೂನುಬದ್ಧ ಹಾಗೂ ನ್ಯಾಯಬದ್ಧವಾಗಿ ತನಿಖೆ ನಡೆಸುವ ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಮೂಲದ ಕಂಪನಿಗಳಿಗೆ ಉದ್ಯಮಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಡುವ ವಿಶ್ವಾಸ ಇದೆʼʼ ಎಂದು ಚೀನಾ ರಾಯಭಾರ ಕಚೇರಿ ವಕ್ತಾರ ವಾಂಗ್ ಶಿಯೊಜಿಯಾನ್ ಟ್ವೀಟ್ ಮಾಡಿದ್ದಾರೆ.