ನವ ದೆಹಲಿ: ಉದ್ಯೋಗಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಇದು ಸಿಹಿ ಸುದ್ದಿ. ಹಲವಾರು ವಲಯಗಳಲ್ಲಿ ಈ ವರ್ಷ ವೇತನ ಹೆಚ್ಚಳ ಮತ್ತು ಬಡ್ತಿಯ ಪ್ರಮಾಣ, ಕೋವಿಡ್ ಪೂರ್ವಮಟ್ಟವನ್ನೂ ಮೀರಿದೆ.
ನಾನಾ ಕ್ಷೇತ್ರಗಳಲ್ಲಿ ಉದ್ಯೋಗಿಗಳ ವಲಸೆ ಹೆಚ್ಚುತ್ತಿದ್ದು, ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ವೇತನ ಹೆಚ್ಚಳ, ಬಡ್ತಿಯನ್ನು ಕಂಪನಿಗಳು ನೀಡುತ್ತಿವೆ. ವಹಿವಾಟು ಚೇತರಿಸುತ್ತಿರುವುದರಿಂದ ಹಾಗೂ ಕೋವಿಡ್-೧೯ ಬಗ್ಗೆ ಕಳವಳ ದೂರವಾಗುತ್ತಿರುವುದರಿಂದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೇತನ ಏರಿಕೆ, ಬಡ್ತಿ ನೀಡಲು ಮುಂದಾಗಿವೆ ಎಂದು ಮಾನವ ಸಂಪನ್ಮೂಲ ವಿಭಾಗದ ತಜ್ಞರು ತಿಳಿಸಿದ್ದಾರೆ.
ಮುಖ್ಯವಾಗಿ ಐಟಿ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪನಗಳಲ್ಲಿ ವೇತನ ಹೆಚ್ಚಳದ ಟ್ರೆಂಡ್ ಎದ್ದು ಕಾಣಿಸುತ್ತಿದೆ. ಐಟಿ ಕಂಪನಿಗಳಿಗೆ ಹೊಸ ಆರ್ಡರ್‌ಗಳ ಸಂಖ್ಯೆಯೂ ಏರಿಕೆಯಾಗಿದೆ. ಹೀಗಿದ್ದರೂ, ಮತ್ತೊಂದು ಕಡೆ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ನಷ್ಟವೂ ಕಂಡು ಬಂದಿದೆ.
೧೦-೧೫% ವೇತನ ಹೆಚ್ಚಳ
ಎಚ್‌ಆರ್ ವಲಯದ ಸಂಸ್ಥೆಯಾದ ಸಿಐಇಎಲ್ ಸಂಸ್ಥೆಯ ಸಮೀಕ್ಷೆ ಪ್ರಕಾರ, ಮೂರನೇ ಒಂದರಷ್ಟು ಉದ್ಯೋಗಿಗಳು ಈ ವರ್ಷ 10%ರಿಂದ 15% ತನಕ ವೇತನ ಏರಿಕೆಯನ್ನು ಗಳಿಸಿದ್ದಾರೆ. 15% ಉದ್ಯೋಗಿಗಳು ಕೋವಿಡ್ ಪೂರ್ವ ಮಟ್ಟಕ್ಕಿಂತಲೂ ಹೆಚ್ಚಿನ ವೇತನ ಹೆಚ್ಚಳವನ್ನು ಪಡೆದಿದ್ದಾರೆ. ಸಮೀಕ್ಷೆಯಲ್ಲಿ ಒಟ್ಟು ಸುಮಾರು 22 ಲಕ್ಷ ಮಂದಿ ಉದ್ಯೋಗಿಗಳನ್ನು ಒಳಗೊಂಡಿರುವ 614 ಕಂಪನಿಗಳಿಂದ ಪ್ರತಿಕ್ರಿಯೆಗಳನ್ನು ಪಡೆಯಲಾಗಿತ್ತು. ಐಟಿ, ಹೊರಗುತ್ತಿಗೆ, ಹಣಕಾಸು, ತಂತ್ರಜ್ಞಾನ ವಲಯದ ಕಂಪನಿಗಳನ್ನು ಸಂದರ್ಶಿಸಲಾಗಿತ್ತು.
ವಿಪ್ರೊ, ಟೈಟನ್‌ನಲ್ಲಿ ವೇತನ ಹೆಚ್ಚಳ: ವಿಪ್ರೊದಲ್ಲಿ ಜುಲೈನಿಂದ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ ಮತ್ತು ಬಡ್ತಿ ನೀಡಲಾಗುತ್ತಿದೆ. ಪ್ರತಿಭಾವಂತ ಉದ್ಯೋಗಿಗಳಿಗೆ ಸಂಬಳ ಹೆಚ್ಚಳವಾಗುತ್ತಿದೆ. ಮುಂದಿನ ತಿಂಗಳಿನಿಂದ ಬಡ್ತಿಯೂ ದೊರೆಯುವ ನಿರೀಕ್ಷೆ ಇದೆ. ಟಾಟಾ ಗ್ರೂಪ್‌ನ ಜ್ಯುವೆಲ್ಲರಿ, ವಾಚು ಮಾರಾಟ ವಲಯದ ಟೈಟನ್ ಕಂಪನಿ, ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ. ಪ್ಯಾನಸಾನಿಕ್ ಇಂಡಿಯಾದಲ್ಲೂ ವೇತನ ಪರಿಷ್ಕರಣೆಯಾಗುತ್ತಿದೆ.
ಮೂರು ತಿಂಗಳಿಗೊಮ್ಮೆ ವೇತನ ಏರಿಕೆ ನಿರೀಕ್ಷೆಯಲ್ಲಿ ಟೆಕ್ಕಿಗಳು : ವಿಪ್ರೊ, ಟಿಸಿಎಸ್ ಮತ್ತು ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳ ವಲಸೆ ತಡೆಗೆ ಯತ್ನಿಸಲಾಗುತ್ತಿದೆ. ಈ ಕಂಪನಿಗಳಲ್ಲಿ ೨೮% ತನಕ ಉದ್ಯೋಗಿಗಳ ವಲಸೆ ಇದೆ. ಅಂದರೆ ಪ್ರತಿ ತ್ರೈಮಾಸಿಕದಲ್ಲೂ ಈ ಮೂರು ಕಂಪನಿಗಳಿಂದ ನಾಲ್ಕನೇ ಒಂದರಷ್ಟು ಉದ್ಯೋಗಿಗಳು ಹೊರ ನಡೆಯುತ್ತಾರೆ. ಇದನ್ನು ತಡೆಯಲು ಕಂಪನಿಗಳು ವೇತನ ಏರಿಕೆ, ಬಡ್ತಿ, ಉದ್ಯೋಗಿಗಳ ಷೇರು ಆಯ್ಕೆಯಲ್ಲಿ ಹೆಚ್ಚಳ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತವೆ. ಆಂತರಿಕ ಬಡ್ತಿಯ ಪ್ರಮಾಣ ಈ ಕಂಪನಿಗಳಲ್ಲಿ ನಾಲ್ಕು ಪಟ್ಟು ವೃದ್ಧಿಸಿದೆ. ಮೂರು ತಿಂಗಳಿಗೊಮ್ಮೆ ಉದ್ಯೋಗಿಗಳು ವೇತನ ಏರಿಕೆಯನ್ನು ನಿರೀಕ್ಷಿಸುತ್ತಿದ್ದಾರೆ.
ವೈರುಧ್ಯಗಳ ಸಮಾಗಮ: ಒಂದು ಕಡೆ ಐಟಿ ಕಂಪನಿಗಳಲ್ಲಿ ವೇತನ ಏರಿಕೆ, ಬಡ್ತಿ, ಉದ್ಯೋಗಿಗಳ ವಲಸೆಯ ಟ್ರೆಂಡ್ ಇದ್ದರೆ, ಮತ್ತೊಂದು ಕಡೆ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ಕಡಿತದ ಪ್ರವೃತ್ತಿ ಕಂಡು ಬರುತ್ತಿದೆ. ಈ ವೈರುಧ್ಯ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಈ ವೈರುಧ್ಯವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಐಟಿ ಕಂಪನಿಗಳು ಮತ್ತು ಸ್ಟಾರ್ಟಪ್‌ಗಳು ತಮ್ಮ ಬಿಸಿನೆಸ್ ನೀತಿಯಲ್ಲಿ ಸುಧಾರಣೆ ತರಬೇಕು. ದೀರ್ಘಕಾಲೀನ ಲಾಭ ಬೇಕೇ ಅಥವಾ ಅಲ್ಪಕಾಲೀನ ಲಾಭ ಸಾಕೇ ಎಂದು ಅವುಗಳು ಯೋಚಿಸಬೇಕು ಎನ್ನುತ್ತಾರೆ ತಜ್ಞರು.