Site icon Vistara News

wealth creation : ಬೇಕಾದಷ್ಟು ಸಂಪತ್ತನ್ನು ಸೃಷ್ಟಿಸುವುದು ಹೇಗೆ?

cash

ಜೀವನದಲ್ಲಿ ನೀವು ಎಷ್ಟು ಹಣವನ್ನು ಗಳಿಸುತ್ತೀರಿ ಎಂಬುದು ನೀವು ಕೆಲಸದಲ್ಲಿ ತೊಡಗಿರುವ ಸಮಯ ಎಷ್ಟು ಎಂಬುದನ್ನು ಅವಲಂಬಿಸಿ ಇರುತ್ತದೆ. ಅಂದರೆ ನೀವು ಎಷ್ಟು ವರ್ಷ ಕೆಲಸ ಮಾಡ್ತೀರೊ, ಅಷ್ಟು ಸಂಪಾದನೆ ಮಾಡುತ್ತೀರಿ. ಆದರೆ ಅದು ಸಂಪತ್ತು ಅಥವಾ ವೆಲ್ತ್ ಅಲ್ಲ.‌ ಸಂಪತ್ತು ಎಂದರೆ ( wealth creation) ನೀವು ಯಾವುದೇ ಪ್ರಯತ್ನ ಅಥವಾ ಕೆಲಸ ಮಾಡದೆ ಇದ್ದರೂ, ನಿಮ್ಮ ಲೈಫ್‌ ಸ್ಟೈಲ್‌ ಅನ್ನು ಯಾವುದೇ ತೊಂದರೆ ಇರದಂತೆ ನಡೆಸುವುದು.

ನೀವು ನಿಮ್ಮ ಸಮಯ ಮತ್ತು ಕೆಲಸವನ್ನು ಕೊಟ್ಟು ಹಣವನ್ನು ಗಳಿಸುತ್ತೀರಿ. ಆ ಹಣ ನಿಮಗಾಗಿ ಕೆಲಸ ಮಾಡುವಂತೆ ಮಾಡುವ ಮೂಲಕ ಸಂಪತ್ತನ್ನು ಸೃಷ್ಟಿಸುತ್ತೀರಿ ಎನ್ನುತ್ತಾರೆ ಹಣಕಾಸು ತಜ್ಞರು. ಅಂದರೆ ನೀವು ಮುಂದಿನ 30 ದಿನಗಳ ಕಾಲ ಏನೂ ಕೆಲಸ ಮಾಡದಿದ್ದರೂ, ವಿರಾಮದಲ್ಲಿದ್ದರೂ ಮನೆಯ ಖರ್ಚು ವೆಚ್ಚಗಳು, ಮನೆ ಬಾಡಿಗೆ, ಊಟೋಪಚಾರ, ವಿಹಾರಗಳಿಗೆ ಹಣದ ಕೊರತೆ ಆಗಬಾರದು. ಲೈಫ್‌ ಸ್ಟೈಲ್‌ಗೆ ಧಕ್ಕೆಯಾಗಬಾರದು. ಎಲ್ಲವೂ ತನ್ನಿಂತಾನೆ ನಡೆಯಬೇಕು. ನಿಮ್ಮೆಲ್ಲ ಬಯಕೆಗಳು ಈಡೇರಬೇಕು. ಒಂದು ಪೈಸೆ ದುಡಿಯದಿದ್ದರೂ, ಹಣಕಾಸಿಗೆ ಕೊರತೆ ಇರಬಾರದು. ಹಾಗಿರಬೇಕು. ಅದು ನೀವು ಸೃಷ್ಟಿಸಿದ ಸಂಪತ್ತಿನಿಂದ ಸಾಧ್ಯವಾಗುತ್ತದೆ.

ನೀವು ಹಣ ಸಂಪಾದನೆಯ ಬಗ್ಗೆ ಚಿಂತಿಸದಿದ್ದಾಗ ಕೂಡ ನಿಮ್ಮೆಲ್ಲ ಖರ್ಚು ವೆಚ್ಚಗಳಿಗೆ ಕೊರತೆ ಆಗದಿರುವ ಸ್ಥಿತಿ ಇದೆಯಲ್ಲವೇ ಅದು ಸಂಪತ್ತಿನಿಂದ ಸಾಧ್ಯವಾಗುತ್ತದೆ. ನೀವು ಹಣಕಾಸು ವಿಚಾರದಲ್ಲಿ ಸ್ವಾತಂತ್ರ್ಯ ಗಳಿಸಿರುತ್ತೀರಿ. ನಿಮ್ಮೆಲ್ಲ ಖರ್ಚು ವೆಚ್ಚಗಳಿಗೆ ಮೀರಿದ ಹಣ ನಿಮ್ಮಲ್ಲಿ ಇರುತ್ತದೆ. ಹಾಗಾದರೆ ಅಷ್ಟು ಸಂಪತ್ತನ್ನು ಗಳಿಸುವುದು ಹೇಗೆ?

ಸಂಪತ್ತು ಗಳಿಸಬೇಕಾದರೆ ನೀವು ಕಲಿತುಕೊಂಡದ್ದನ್ನೆಲ್ಲವನ್ನೂ ನೀವು ಒಬ್ಬರೇ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ನಿಮಗಾಗಿ ಸಂಪತ್ತು ಸೃಷ್ಟಿಸಬಲ್ಲ ಇತರರನ್ನು ಹೊಂದಬೇಕಾಗುತ್ತದೆ. ಪ್ರತಿ ದಿನವನ್ನೂ ಹಣ ಮಾಡಲು ನೀವು ತೊಡಗಿಸಿಕೊಳ್ಳಬೇಕಿದ್ದರೆ ಒಂದು ದಿನ ನಿಮ್ಮಿಂದ ಹಣ ಮಾಡಲು ಸಾಧ್ಯವಾಗದೆ ಇರಬಹುದು. ಆಗ ಕಂಗಾಲಾಗುತ್ತೀರಿ. ಆದ್ದರಿಂದ ನೀವು ಪ್ರಯತ್ನಪಡದ ದಿನಗಳಲ್ಲೂ ನಿಮಗೆ ಹಣ ತನ್ನಿಂತಾನೆ ಬರುವಂತಿರಬೇಕು. ಇದಕ್ಕಾಗಿ ಹೂಡಿಕೆ ನಿರ್ಣಾಯಕವಾಗುತ್ತದೆ.

ನಾವೆಲ್ಲರೂ ಸಾಮಾನ್ಯವಾಗಿ 20 ವಯಸ್ಸಿನ ಆರಂಭದಿಂದ ದುಡಿಯಲು ಶುರು ಮಾಡುತ್ತೇವೆ. 60 ವರ್ಷ ವಯಸ್ಸಾಗುವ ತನಕ ಸಂಪೂರ್ಣ ಚೈತನ್ಯದೊಂದಿಗೆ ದುಡಿಯುತ್ತೇವೆ. 60ರ ಬಳಿಕ ಮೊದಲಿನಂತೆ ದುಡಿಯಲು ಆಗುವುದಿಲ್ಲ, ದುಡಿದು ದುಡ್ಡು ಗಳಿಸಲು ಅಷ್ಟಾಗಿ ಸಾಧ್ಯವಾಗುವುದಿಲ್ಲ. ಬಳಿಕ ಎಷ್ಟು ಕಾಲ ಬದುಕಬಹುದು? 90 ವರ್ಷಗಳ ಕಾಲ ಎಂದಿಟ್ಟುಕೊಳ್ಳೋಣ. ಆದ್ದರಿಂದ 20ರಿಂದ 90 ವರ್ಷಗಳ ಬದುಕಿನಲ್ಲಿ 40 ವರ್ಷಗಳ ಕಾಲ ದುಡಿದು ಹಣ ಗಳಿಸುತ್ತೇವೆ. 60 ವರ್ಷದ ಬಳಿಕ ಹಣಕ್ಕಾಗಿ ದುಡಿಯಲು ಕಷ್ಟವಾದೀತು. ಆದರೆ ಅಗತ್ಯಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಆಗ ನಮಗಾಗಿ ಯಾರಾದರೂ ದುಡಿದು ಕೊಡಬೇಕಲ್ಲವೇ? ಭಾರತದಲ್ಲಿ ಸಾಮಾನ್ಯವಾಗಿ ಮಕ್ಕಳು ಪೋಷಕರನ್ನು ನೋಡಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಅಂಥ ಸನ್ನಿವೇಶ ಸಿಗದು. ಹಾಗಿರುವಾಗ ನೀವು ಮೊದಲೇ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ, ಮನೆಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟಿದ್ದರೆ, ನಿಮ್ಮದೇ ಸ್ವಂತ ಕಂಪನಿ ಇದ್ದರೆ, ಹಣ ನಿಮಗಾಗಿ ದುಡಿಯುತ್ತದೆ. ನೀವು ಹಣಕ್ಕಾಗಿ ದುಡಿಯುವ ಅಗತ್ಯ ಇರುವುದಿಲ್ಲ. ಸಂಪತ್ತು ಸೃಷ್ಟಿಸುವುದು ಈ ನಿಟ್ಟಿನಲ್ಲಿ ಮುಖ್ಯವಾಗುತ್ತದೆ.

ಈಗ ಯೋಚಿಸಿ, ನೀವು 40 ವರ್ಷ ದುಡಿದ ಹಣದಲ್ಲಿ 70-90 ವರ್ಷದ ತನಕ ಬದುಕಬೇಕು ಎಂದು ಭಾವಿಸಿ. ಆಗ ನೀವು ಭಿನ್ನವಾಗಿ ಯೋಚಿಸಬೇಕಾಗುತ್ತದೆ. ನಿಮ್ಮ ಜ್ಞಾನ ವೃದ್ಧಿಯ ಜತೆಗೆ ದುಡ್ಡು ಬೆಳೆಯಬೇಕು. ಬಡ್ಡಿ-ಚಕ್ರಬಡ್ಡಿಯ ಬಗ್ಗೆ, (ಕಂಪೌಂಡಿಂಗ್‌ ಇಂಟರೆಸ್ಟ್‌ ) ತಿಳಿದುಕೊಳ್ಳಬೇಕು. ನೀವು ಸಂಪಾದಿಸುವ ಹಣದಲ್ಲಿ 20-30 ಪರ್ಸೆಂಟ್‌ ಹಣವನ್ನು ಹೂಡಿಕೆ ಮಾಡಬೇಕು.

ಹೂಡಿಕೆಯ ಕಲೆ: ನೀವು ಹೂಡಿಕೆ ಮಾಡುವುದಕ್ಕೆ ಮುನ್ನ ಸಾಕಷ್ಟು ಯೋಚಿಸುವುದು ಮುಖ್ಯ. ಜನ ಸಾಮಾನ್ಯವಾಗಿ ತಂತ್ರಜ್ಞಾನಕ್ಕಿಂತ ಮನುಷ್ಯರ ಮೇಲೆ ನಂಬಿಕೆ ಇಡುತ್ತಾರೆ. ಇತರ ಕಂಪನಿಗಳು ತಂತ್ರಜ್ಞಾನದಲ್ಲಿ ಸ್ವಲ್ಪ ಮುಂದಿರಬಹುದು. ಆದರೂ ಟಾಟಾ ಕಂಪನಿಯದ್ದೇ ಪ್ರಾಡಕ್ಟ್ಸ್‌ ಆಗಬೇಕು ಎನ್ನುವವರು ಇದ್ದಾರೆ. ಕಾರಣ ರತನ್‌ ಟಾಟಾ ಅವರ ಮೇಲಿನ ವಿಶ್ವಾಸ. ಉತ್ತಮ ನಾಯಕತ್ವ ಹೊಂದಿರುವವರು ನಡೆಸುವ ಕಂಪನಿಗಳನ್ನು ಜನ ಕೂಡ ನಂಬುತ್ತಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಯಶಸ್ಸಿಗೆ ಕೇವಲ ಮುಕೇಶ್‌ ಅಂಬಾನಿ ಒಬ್ಬರೇ ಕಾರಣರಲ್ಲ. ಅವರ ಜತೆಗಿರುವ ಲಕ್ಷಾಂತರ ಸಿಬ್ಬಂದಿ. ಹೀಗಾಗಿ ಪ್ರಬಲ ಟೀಮ್‌ ಸಹಿತ ಕಾರ್ಯ ನಿರ್ವಹಿಸುವ ಬ್ಲೂಚಿಪ್‌ ಕಂಪನಿಗಳ ಷೇರುಗಳಲ್ಲಿ ತಮ್ಮ ಹಣದ 50% ಕ್ಕೂ ಹೆಚ್ಚು ಹಣ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ. ಆದರೆ ಸುಮಾರು 30% ಹಣವನ್ನು ಸ್ವಲ್ಪ ರಿಸ್ಕ್‌ ಇರುವ ಹಾಗೂ ಹೆಚ್ಚು ಲಾಭ ತರುವ ಕಂಪನಿಗಳ ಷೇರು, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಬೇಕು. ಮತ್ತೆ 10% ಹಣವನ್ನು ಬೇಕಾದರೆ ಕ್ರಿಪ್ಟೊ ಮತ್ತಿತರ ಸಾಧನಗಳಲ್ಲಿ ಹೂಡಿಕೆ ಮಾಡಬಹುದು. ಬಾಕಿ ಉಳಿದ 10% ಹಣವನ್ನು ರಿಯಾಲ್ಟಿ, ವಿಮೆ ಉತ್ಪನ್ನಗಳಲ್ಲಿ ಹೂಡಬಹುದು ಎನ್ನುತ್ತಾರೆ ತಜ್ಞರು.

Exit mobile version