ನವದೆಹಲಿ: ವಿಶೇಷ ವಿತ್ತ ವಲಯಗಳಲ್ಲಿ (SEZs) ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ತಮ್ಮ ಒಟ್ಟು ಉದ್ಯೋಗಿಗಳಲ್ಲಿ ೫೦% ಮಂದಿಗೆ ಮನೆಯಿಂದಲೇ ಕೆಲಸ (Work from home-WFH) ಪದ್ಧತಿಯನ್ನು ಗರಿಷ್ಠ ೧ ವರ್ಷದ ಅವಧಿಗೆ ಕಲ್ಪಿಸಬಹುದು ಎಂದು ಕೇಂದ್ರ ವಾಣಿಜ್ಯ ಇಲಾಖೆ ತಿಳಿಸಿದೆ.
ಈ ಸಂಬಂಧ ಹೊಸ ಅಧಿಸೂಚನೆಯನ್ನು ಜುಲೈ ೧೯ರಂದು ಪ್ರಕಟಿಸಲಾಗಿದೆ. ಉದ್ಯಮ ವಲಯದ ಬೇಡಿಕೆಯ ಅನ್ವಯ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ೫೦% ಉದ್ಯೋಗಿಗಳಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿಯೂ ಸೇರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಸಂಬಂಧಿಸಿ ದೇಶಾದ್ಯಂತ ಎಲ್ಲ ವಿಶೇಷ ವಿತ್ತ ವಲಯಗಳಲ್ಲಿ ಏಕರೂಪದ ನೀತಿಯನ್ನು ಜಾರಿಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ವಿತ್ತ ವಲಯಗಳಲ್ಲಿ ಹೊಸ ವರ್ಕ್ ಫ್ರಮ್ ಹೋಮ್ ನಿಯಮಾವಳಿ ಮುಖ್ಯಾಂಶ
- ಐಟಿ/ ಐಟಿ ಸಂಬಂಧಿತ ವಿಶೇಷ ವಿತ್ತ ವಲಯಗಳಲ್ಲಿರುವ ಕಂಪನಿಗಳ ಉದ್ಯೋಗಿಗಳಿಗೆ ಅನ್ವಯ
- ಗುತ್ತಿಗೆ ಆಧಾರಿತ ಸಿಬ್ಬಂದಿಗೂ ಅನ್ವಯ
- ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ೫೦% ಮಂದಿಗೆ ವರ್ಕ್ ಫ್ರಂ ಹೋಮ್ ಕಲ್ಪಿಸಬಹುದು. ಹೀಗಿದ್ದರೂ, ಅನಿವಾರ್ಯ ಕಾರಣಗಳಿದ್ದರೆ ೫೦%ಕ್ಕೂ ಹೆಚ್ಚು ಸಿಬ್ಬಂದಿಗೆ ವಿಸ್ತರಿಸಬಹುದು.
- ಗರಿಷ್ಠ ೧ ವರ್ಷದ ಅವಧಿಗೆ ವಿಸ್ತರಿಸಬಹುದು. ಹೀಗಿದ್ದರೂ, ಮತ್ತೆ ಮನವಿಯ ಮೇರೆಗೆ ವಿಸ್ತರಿಸಬಹುದು.