ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಹು ನಿರೀಕ್ಷಿತ ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಯೋಜನೆಯ ಮೊದಲ ಹಂತವನ್ನು ಇಂದು ಉದ್ಘಾಟಿಸಲಿದ್ದಾರೆ. ದಿಲ್ಲಿ-ದೌಸಾ-ಲಾಲ್‌ಸೋಟ್ ವಲಯದಲ್ಲಿ ಸಾಗುವ 246 ಕಿ.ಮೀ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಇದು ದಿಲ್ಲಿಯಿಂದ ಜೈಪುರ ನಡುವಣ ಪ್ರಯಾಣವನ್ನು 3.5 ಗಂಟೆಗೆ ಇಳಿಸಲಿದೆ. ಒಟ್ಟು 12,150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.
ದಿಲ್ಲಿ-ಜೈಪುರ ನಡುವಣ ಪ್ರಯಾಣದ ಸಮಯವನ್ನು 5 ಗಂಟೆಯಿಂದ 3.5 ಗಂಟೆಗೆ ತಗ್ಗಿಸಲಿರುವ ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇಯಿಂದ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಗಣನೀಯ ಸಹಕಾರ ದೊರೆಯಲಿದೆ. ಎಕ್ಸ್‌ಪ್ರೆಸ್‌ವೇ ದಿಲ್ಲಿ ಮತ್ತು ಮುಂಬಯಿ ನಡುವಣ ಪ್ರಯಾಣದ ಅವಧಿಯನ್ನು 24 ಗಂಟೆಯಿಂದ 12 ಗಂಟೆಗೆ ತಗ್ಗಿಸಲಿದೆ.
ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತದ 5 ವಿಶೇಷತೆಗಳು
– 246 ಕಿ.ಮೀ ಉದ್ದದ ದಿಲ್ಲಿ-ದೌಸಾ-ಲಾಲ್‌ಸೋಟ್ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವನ್ನು 12,150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇಯ ರಾಜಸ್ಥಾನ ಚರಣವಾಗಿದೆ. 2024ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಗೆ ದೊಡ್ಡ ಮೂಲಸೌಕರ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆಯನ್ನು ತನ್ನದಾಗಿಸಲು ಅವಕಾಶ ಸೃಷ್ಟಿಯಾಗಿದೆ. ಇದು 8 ಲೇನ್‌ಗಳನ್ನು ಒಳಗೊಂಡಿದ್ದು, ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ.
-ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇ ಭಾರತದ ಅತ್ಯಂತ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದ್ದು, ಒಟ್ಟು 1,386 ಕಿ.ಮೀ ಉದ್ದವನ್ನು ಒಳಗೊಂಡಿದೆ. ಇದು ದಿಲ್ಲಿ ಮತ್ತು ಮುಂಬಯಿ ನಡುವಣ ಪ್ರಯಾಣದ ಅವಧಿಯನ್ನು 24 ಗಂಟೆಯಿಂದ 12 ಗಂಟೆಗೆ ಇಳಿಸಲಿದ್ದು, 12% ತಗ್ಗಲಿದೆ.
-ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇ 6 ರಾಜ್ಯಗಳ ನಡುವೆ ಹಾದು ಹೋಗಲಿದೆ. ದಿಲ್ಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಹೆದ್ದಾರಿ ನಿರ್ಮಾಣವಾಗಲಿದೆ. ಪ್ರಮುಖ ನಗರಗಳಾದ ಕೋಟ, ಇಂದೋರ್, ಜೈಪುರ, ಭೋಪಾಲ್, ವಡೋದರಾ, ಸೂರತ್ ನಡುವೆ ಸಂಪರ್ಕ ಕಲ್ಪಿಸಲಿದೆ. ಪಿಎಂ ಗತಿ ಶಕ್ತಿ ಯೋಜನೆಯ ಭಾಗವನ್ನೂ ಇದು ಒಳಗೊಂಡಿದೆ. 13 ಬಂದರು, 8 ಪ್ರಮುಖ ಏರ್‌ಪೋರ್ಟ್, 8 ಮಲ್ಟಿ-ಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು (MMLP) ಸಂಪರ್ಕಿಸಲಿದೆ. ಜೇವಾರ್ ಏರ್‌ಪೋರ್ಟ್, ನವಿ ಮುಂಬಯಿ ಏರ್‌ಪೋರ್ಟ್, ಜೆಎನ್‌ಪಿಟಿ ಬಂದರಿಗೂ ಸಂಪರ್ಕ ಕಲ್ಪಿಸಲಿದೆ.
ದೇಶದ ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಿದೆ. ಎಕ್ಸ್‌ಪ್ರೆಸ್‌ವೇ ಹಾದು ಹೋಗುವ ವಲಯಗಳಲ್ಲಿ ಆರ್ಥಿಕಚಟುವಟಿಕೆಗಳನ್ನು ಹೆಚ್ಚಿಸಲಿದೆ.
-ಭಾರತ ಹಾಗೂ ಏಷ್ಯಾದಲ್ಲಿ ಮೊದಲ ಬಾರಿಗೆ ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇಯಲ್ಲಿ ರಣಥಂಬೋರ್ ವನ್ಯಧಾಮದಲ್ಲಿ ವನ್ಯಜೀವಿಗಳಿಗೆ, ಪ್ರಾಣಿಗಳಿಗೆ ಸಂಚರಿಸಲು 3 ಓವರ್‌ಪಾಸ್ (ಮೇಲ್ಸೇತುವೆ) ಮತ್ತು ಅಂಡರ್‌ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
-ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇಯಲ್ಲಿ 25,000 ಲಕ್ಷ ಟನ್ ಬಿಟುಮೆನ್ ಬಳಕೆಯಾಗಿದೆ. 4,000 ನುರಿತ ಸಿವಿಲ್ ಎಂಜಿನಿಯರ್‌ಗಳು ನಿರ್ಮಾಣ ಹಂತದಲ್ಲಿ ಭಾಗವಹಿಸಿದ್ದಾರೆ. 2.5 ಕಿ.ಮೀ ಉದ್ದದ 4 ಲೇನ್‌ಗಳ ಪಿಕ್ಯೂಸಿ ರಸ್ತೆಯನ್ನು ವಿಶ್ವದಾಖಲೆಯ 24 ಗಂಟೆಗಳಲ್ಲಿ ಪೂರ್ಣಗೊಳಿಸಲಾಗಿದೆ. 50 ಕಿ.ಮೀ ಸಿಂಗಲ್ ಲೇನ್ ಹೆದ್ದಾರಿಯನ್ನು ಅತಿ ಹೆಚ್ಚು ಬಿಟುಮೆನ್ ಬಳಸಿ 100 ಗಂಟೆಗಳಲ್ಲಿ ವಿಶ್ವದಾಖಲೆಯೊಂದಿಗೆ ನಿರ್ಮಿಸಲಾಗಿದೆ.