ಬೆಂಗಳೂರು: ಬಂಗಾರದ ದರ ಇತ್ತೀಚೆಗೆ ಮತ್ತೆ ದಾಖಲೆಯ ಎತ್ತರಕ್ಕೇರಿದೆ. ಭೌತಿಕವಾಗಿ ಚಿನ್ನವನ್ನು ಖರೀದಿಸುತ್ತಿರುವವರು ಹಿಂದೇಟು ಹಾಕುತ್ತಿದ್ದರೂ, ದರ ಇಳಿಕೆಯಾಗಿಲ್ಲ. (Gold rate) ಪ್ರತಿ 10 ಗ್ರಾಮ್ ಚಿನ್ನದ ದರ 60,000 ರೂ.ಗಳ ಕಡೆಗೆ ದಾಪುಗಾಲಿಡುತ್ತಿದೆ. ಬೆಳ್ಳಿಯ ಕಿಮ್ಮತ್ತು ಕೆಜಿಗೆ 75,000 ರೂ.ಗಳ ಸನಿಹದಲ್ಲಿದೆ. ಹಾಗಾದರೆ ಈ ದರ ಜಿಗಿತಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾರುಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ.
ಏಷ್ಯಾದ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಕಡಿಮೆಯಾಗಿದೆ. ಹೀಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸಿಗೆ 1930 ಡಾಲರ್‌ಗೆ ಏರಿಕೆಯಾಗಿದೆ. ಇದು ಈ ವರ್ಷ 2,000 ಡಾಲರ್‌ಗೆ ಜಿಗಿಯುವ ಸಾಧ್ಯತೆಯೂ ಇದೆ. (1 ಔನ್ಸ್ ಎಂದರೆ 28 ಗ್ರಾಮ್)
ತಜ್ಞರ ಪ್ರಕಾರ ಕಳೆದ ಕೆಲ ವಾರಗಳಿಂದ ಡಾಲರ್ ಮತ್ತು ಅಮೆರಿಕದ ಬಾಂಡ್‌ಗಳಲ್ಲಿ ಹೂಡಿಕೆದಾರರಿಗೆ ಆದಾಯ ಕಡಿಮೆಯಾಗುತ್ತಿದೆ. ಡಾಲರ ಇಂಡೆಕ್ಸ್ ಕಳೆದ 7 ತಿಂಗಳಿನಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಎರಡನೆಯದಾಗಿ ಅಮೆರಿಕದ ಆರ್ಥಿಕ ಪ್ರಗತಿ ಕುರಿತ ಅಂಕಿ ಅಂಶಗಳು ನಿರೀಕ್ಷೆಯಷ್ಟು ಸದೃಢವಾಗಿಲ್ಲ. ಹೀಗಾಗಿ ಬಂಗಾರ ಮತ್ತು ಬೆಳ್ಳಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದುವೇ ದರ ಏರಿಕೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಯಥಾಸ್ಥಿತಿ ಇತ್ತು. 10 ಗ್ರಾಂ ಬಂಗಾರದ ದರ (24 ಕ್ಯಾರಟ್) 57,110 ರೂ.ನಷ್ಟಿತ್ತು. 22 ಕ್ಯಾರಟ್ ಚಿನ್ನದ ದರ 52,300 ರೂ.ನಷ್ಟಿತ್ತು. ಬೆಳ್ಳಿಯ ದರ ಪ್ರತಿ ಕೆಜಿಗೆ 74,300 ರೂ.ನಷ್ಟಿತ್ತು.