ಮುಂಬಯಿ: ಉದ್ಯಮಿ ಅನಿಲ್ ಅಗ್ರವಾಲ್ ಅವರ ವೇದಾಂತ ಲಿಮಿಟೆಡ್ (Vedanta) ಮತ್ತು ತೈವಾನ್ ಮೂಲದ ಫಾಕ್ಸ್‌ಕಾನ್ ಸಹಭಾಗಿತ್ವದ, 1.54 ಲಕ್ಷ ಕೋಟಿ ರೂ. ಹೂಡಿಕೆಯ ಮೆಗಾ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಘಟಕವು ಕೊನೆ ಘಳಿಗೆಯಲ್ಲಿ ಗುಜರಾತ್ ಪಾಲಾಗಿದ್ದಕ್ಕೆ ಮಹಾರಾಷ್ಟ್ರದಲ್ಲಿ ಕೋಲಾಹಲ ಉಂಟಾಗಿದೆ. ಹಾಗಾದರೆ ಅಲ್ಲಿ ಆಗಿದ್ದೇನು? ಈ ಮೆಗಾ ಯೋಜನೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೈ ತಪ್ಪಿದ್ದೇಕೆ? ಇಲ್ಲಿದೆ ವಿವರ.
ಪ್ರತಿಪಕ್ಷಗಳ ಆರೋಪವೇನು?
ಪ್ರತಿಪಕ್ಷಗಳ ಪ್ರಕಾರ ವೇದಾಂತ-ಫಾಕ್ಸ್‌ಕಾನ್ ಜಂಟಿ ಸಹಯೋಗದ ಮೆಗಾ ಸೆಮಿಕಂಡಕ್ಟರ್ ಚಿಪ್ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸುವ ಬಗ್ಗೆ ಮಾತುಕತೆ ಕೊನೆಯ ಹಂತದ ತನಕ ತಲುಪಿತ್ತು. ಆದರೆ ಇನ್ನೇನು ಮಾತುಕತೆ ಒಪ್ಪಂದವಾಗಬೇಕು ಎನ್ನುವಷ್ಟರಲ್ಲಿ ಕೈ ತಪ್ಪಿದೆ. ಶಿಂಧೆ ಸರ್ಕಾರ ತಾನಾಗಿಯೇ ಈ ಮೆಗಾ ಯೋಜನೆಯನ್ನು ಗುಜರಾತ್‌ಗೆ ಬಿಟ್ಟುಕೊಟ್ಟಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಒಟ್ಟು 1.54 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಮಹಾರಾಷ್ಟ್ರದಿಂದ ಅಕ್ಷರಶಃ ಕಸಿದುಕೊಳ್ಳಲಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಮಹಾ ವಿಕಾಸ ಅಘಾಡಿ ಸರ್ಕಾರವು ಈ ಯೋಜನೆಯನ್ನು ಮಹಾರಾಷ್ಟ್ರದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಕಂಪನಿಗಳ ಜತೆ ನಿಕಟ ಸಂಪರ್ಕದಲ್ಲಿತ್ತು. ಮಾತುಕತೆ ಕೊನೆಯ ಹಂತಕ್ಕೆ ತಲುಪಿತ್ತು. ಆದರೆ ಈಗ ಕೈ ತಪ್ಪಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಉದಾಹರಣೆ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ವೇದಾಂತ ಸ್ಥಾಪಕ ಅನಿಲ್ ಅಗ್ರವಾಲ್ ಹೇಳಿದ್ದೇನು?
” ನಾವು ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯ ಕಾರ್ಖಾನೆಯನ್ನು ಸ್ಥಾಪಿಸಬೇಕು ಎಂದು ಕೆಲ ತಿಂಗಳ ಹಿಂದೆಯೇ ನಿರ್ಧರಿಸಿದ್ದೆವು. ಇದು ವೇದಾಂತ-ಫಾಕ್ಸ್‌ಕಾನ್ ನಡುವಣ 60:40 ಜಂಟಿ ಸಹಭಾಗಿತ್ವದ ಕಂಪನಿಯಾಗಲಿದೆ. ಅವರು ನಮ್ಮ ನಿರೀಕ್ಷೆಯನ್ನು ಮುಟ್ಟಿದ್ದರು. ಆದರೆ ಜುಲೈನಲ್ಲಿ ನಡೆದ ಮಹಾರಾಷ್ಟ್ರ ಸರ್ಕಾರದ ಜತೆಗಿನ ಮಾತುಕತೆ ವೇಳೆಯಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿ ತೀವ್ರ ಸ್ಪರ್ಧಾತ್ಮಕ ದರದಲ್ಲಿ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ ನಾವು ಒಂದು ಸ್ಥಳದಲ್ಲಿ ಆರಂಭಿಸಬೇಕಿತ್ತು. ಹೀಗಾಗಿ ವೃತ್ತಿಪರ ಮತ್ತು ಸ್ವತಂತ್ರ ಸಲಹೆಗಾರರ ಸಲಹೆಯ ಆಧಾರದಲ್ಲಿ ಗುಜರಾತ್ ಅನ್ನು ಆಯ್ಕೆ ಮಾಡಲಾಯಿತುʼʼ ಎಂದು ವೇದಾಂತ ಸಮೂಹದ ಸಂಸ್ಥಾಪಕ ಅನಿಲ್ ಅಗ್ರವಾಲ್ ತಿಳಿಸಿದ್ದಾರೆ.
2022ರ ಜುಲೈನಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಜತೆ ವೇದಾಂತ ಗ್ರೂಪ್‌ನ ಅಧಿಕಾರಿಗಳು ಮಾತುಕತೆ ನಡೆಸಿದ್ದರು. 1,000 ಎಕರೆ ಜಾಗ ಕೊಡುವುದು ಕೂಡ ಅಂತಿಮವಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಒಪ್ಪಂದ ಗುಜರಾತ್ ಪಾಲಾಗಿದೆ.
ಏಕನಾಥ್ ಶಿಂಧೆ ಸರ್ಕಾರ ನೀಡಿದ್ದ ಆಫರ್‌ಗಳೇನು?
- ವೇದಾಂತ ಗ್ರೂಪ್ಗೆ ಸೆಮಿಕಂಡಕ್ಟರ್ ಚಿಪ್ ಘಟಕ ಸ್ಥಾಪನೆಗೆ 30% ಬಂಡವಾಳ ಸಬ್ಸಿಡಿ ನೀಡುವ ಭರವಸೆ ನೀಡಲಾಗಿತ್ತು. ಅಂದರೆ ಘಟಕ ಸ್ಥಾಪನೆಗೆ ತಗಲುವ ಬಂಡವಾಳದ ವೆಚ್ಚಕ್ಕೆ ಸರ್ಕಾರದ ವತಿಯಿಂದ ದೊರೆಯುವ ಸಬ್ಸಿಡಿ.
- ಪ್ರತಿ ಯುನಿಟ್ಗೆ 1 ರೂ. ವಿದ್ಯುತ್ ಸಬ್ಸಿಡಿ, 750 ಮೆಗಾವ್ಯಾಟ್ ಕ್ಯಾಪ್ಟಿವ್ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು ಅನುಮತಿ.
- ಭೂಮಿ, ನೀರು, ವಿದ್ಯುತ್ ಶುಲ್ಕಕ್ಕೆ ಸಬ್ಸಿಡಿ.
- ಮುದ್ರಾಂಕ ಶುಲ್ಕ ಮನ್ನಾ, ವುದ್ಯುತ್ ಸುಂಕದಿಂದ ವಿನಾಯಿತಿ
ಕರ್ನಾಟಕವನ್ನೂ ಸಂಪರ್ಕಿಸಿತ್ತು ಅನಿಲ್ ಅಗ್ರವಾಲ್ ಟೀಮ್
” ನಮ್ಮ ತಂಡ ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿತ್ತು. ತಮಿಳುನಾಡಿನಲ್ಲೂ ಸಾಧ್ಯತೆ ಇತ್ತು. ಕಳೆದ ಎರಡು ವರ್ಷಗಳಿಂದ ಈ ಪ್ರತಿಯೊಂದು ರಾಜ್ಯದ ಜತೆಗೂ ಸಂಪರ್ಕ ಇಟ್ಟುಕೊಂಡಿದ್ದೆವು. ಕೇಂದ್ರ ಸರ್ಕಾರವೂ ನಮಗೆ ಅದ್ಭುತ ಬೆಂಬಲ ನೀಡಿದೆʼʼ ಎಂದು ಅನಿಲ್ ಅಗ್ರವಾಲ್ ವಿವರಿಸಿದ್ದಾರೆ.
ವೇದಾಂತ-ಫಾಕ್ಸ್‌ಕಾನ್ ಲಕ್ಷಾಂತರ ಕೋಟಿ ರೂ. ಹೂಡಿಕೆಗೆ ಮುನ್ನ ವೃತ್ತಿಪರವಾಗಿ ಸ್ಥಳವನ್ನು ಪರಿಶೀಲಿಸಿವೆ. ಇದು ವೈಜ್ಞಾನಿಕ ಮತ್ತು ವೃತ್ತಿಪರ ಪ್ರಕ್ರಿಯೆಯಾಗಿದ್ದು, ಕೆಲವು ವರ್ಷ ತೆಗೆದುಕೊಳ್ಳುತ್ತದೆ. ನಾವು ಎರಡು ವರ್ಷಗಳ ಹಿಂದೆ ಈ ಪ್ರಕ್ರಿಯೆ ಆರಂಭಿಸಿದ್ದೆವು. ಸ್ವತಂತ್ರ ಏಜೆನ್ಸಿಯ ಸಲಹೆಗಳ ಆಧಾರದಲ್ಲಿ ಗುಜರಾತ್ ಅನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಬಳಿಕ ಸೆಮಿಕಂಡಕ್ಟರ್ ಚಿಪ್‌ಗಳಿಗೆ ಜಾಗತಿಕ ಮಟ್ಟದಲ್ಲಿ ತೀವ್ರ ಕೊರತೆ ಉಂಟಾಗಿತ್ತು. ಭಾರತ ಸೇರಿದಂತೆ ನಾನಾ ದೇಶಗಳಲ್ಲಿ ಆಟೊಮೊಬೈಲ್ ಸೇರಿದಂತೆ ಹಲವು ಉದ್ದಿಮೆಗಳಿಗೆ ಭಾರಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಭಾರತದಲ್ಲಿಯೇ ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡಿದೆ. ಈ ಅವಕಾಶವನ್ನು ವೇದಾಂತ ಸಮೂಹ ಬಳಸಿಕೊಂಡಿದೆ.
ಮೈಸೂರಿನಲ್ಲಿ ಬರುತ್ತಿದೆ ಚಿಪ್ ಉತ್ಪಾದನೆ ಘಟಕ
ವಾಸ್ತವವಾಗಿ ಕರ್ನಾಟಕದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ ಈಗಾಗಲೇ ಸಿದ್ಧತೆ ಶುರುವಾಗಿದೆ. ಕರ್ನಾಟಕ ಸರ್ಕಾರ ಕೆಲ ತಿಂಗಳ ಹಿಂದೆಯೇ ಮೈಸೂರಿನಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಯೋಜನೆಗೆ ಸಂಬಂಧಿಸಿ, ಇಸ್ರೇಲ್ ಮೂಲದ ಇಂಟರ್‌ನ್ಯಾಶನಲ್ ಸೆಮಿಕಂಡಕ್ಟರ್ ಕನ್‌ಸೋರ್ಟಿಯಂ ಐಎಸ್‌ಎಂಸಿ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 22,900 ಕೋಟಿ ರೂ.ಗಳ ಯೋಜನೆ ಇದಾಗಿದೆ.
ವೇದಾಂತ ಗ್ರೂಪ್‌ನ ಉದ್ದೇಶಿತ ಸೆಮಿಕಂಡಕ್ಟರ್ ಚಿಪ್ ಘಟಕ ಸ್ಥಾಪನೆ ಯೋಜನೆಯನ್ನು ಪ್ರಧಾನಿಯವರ ಕಚೇರಿ ಸ್ವಾಗತಿಸಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Vedanta | ಗುಜರಾತ್‌ನಲ್ಲಿ ಬರಲಿದೆ ವೇದಾಂತದ ಮೆಗಾ ಸೆಮಿಕಂಡಕ್ಟರ್ ಉತ್ಪಾದನಾ ಘಟಕ