ನವ ದೆಹಲಿ: ಕೇಂದ್ರ ಸರ್ಕಾರ ನೋಟು ಅಮಾನ್ಯತೆಯ ನಿರ್ಧಾರ ಕೈಗೊಂಡಾಗ ಅದು ಶಾಸನಾತ್ಮಕವಾಗಿತ್ತೇ ವಿನಾ ಆರ್‌ಬಿಐ ಕಾಯಿದೆಯ ಸೆಕ್ಷನ್ 26(2) ಭಾಗವಾಗಿರಲಿಲ್ಲ. ಆದ್ದರಿಂದ ಶಾಸನದ ಮೂಲಕ ಜಾರಿಗೊಳಿಸಬೇಕಿತ್ತು. ಗೌಪ್ಯತೆಯ ಅಗತ್ಯ ಇದ್ದರೆ ಸುಗ್ರೀವಾಜ್ಞೆ ಹೊರಡಿಸಬಹುದಿತ್ತು ಎಂದು (Demonetisation verdict) ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ ಹೇಳಿದ್ದಾರೆ.
ನೋಟು ಅಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ 4-1 ಬಹುಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದರು.
ಆರ್‌ಬಿಐ ಕಾಯಿದೆಯ ಸೆಕ್ಷನ್ 26(2) ಪ್ರಕಾರ ನೋಟು ಅಮಾನ್ಯತೆಯ ಪ್ರಸ್ತಾಪವು ಆರ್‌ಬಿಐನ ಕೇಂದ್ರೀಯ ಮಂಡಳಿಯ ಮೂಲಕ ಬರಬೇಕಿತ್ತು. ಎಲ್ಲ ಸೀರೀಸ್‌ಗಳ ನೋಟುಗಳ ಅಮಾನ್ಯತೆಯ ಸಂದರ್ಭ ಗೆಜೆಟ್ ಅಧಿಸೂಚನೆಯ ಬದಲಿಗೆ ಶಾಸನಾತ್ಮಕವಾಗಿ ಕೈಗೊಳ್ಳಬೇಕಾಗಿತ್ತು. ಸಂಸತ್ತು ಎಂದರೆ ರಾಷ್ಟ್ರದ ಪ್ರತಿರೂಪ. ಪ್ರಜಾಪ್ರಭುತ್ವದ ಕೇಂದ್ರ. ಇಂಥ ಮಹತ್ವದ ನಿರ್ಣಯ ಕೈಗೊಳ್ಳುವ ಸಂದರ್ಭ ಸಂಸತ್ತನ್ನು ದೂರವಿಡಬಾರದಿತ್ತು.
ಆರ್‌ಬಿಐ ಸ್ವತಂತ್ರ ನಿರ್ಧಾರ ಕೈಗೊಂಡಿಲ್ಲ
ಆರ್‌ಬಿಐ ಸಲ್ಲಿಸಿರುವ ದಾಖಲೆಗಳಲ್ಲಿ ಒಂದು ಉಲ್ಲೇಖವಿದೆ. as desired by the Central Govt (ಕೇಂದ್ರ ಸರ್ಕಾರದ ಅಪೇಕ್ಷೆಯಂತೆ) ನೋಟು ಅಮಾನ್ಯತೆ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದೆ. ಅಂದರೆ ಆರ್‌ಬಿಐನ ಸ್ವತಂತ್ರ ನಿರ್ಧಾರ ಅಲ್ಲ. ಇಡೀ ಪ್ರಕ್ರಿಯೆಯನ್ನು 24 ಗಂಟೆಯೊಳಗೆ ಕೈಗೊಳ್ಳಲಾಯಿತು. ನೋಟು ಅಮಾನ್ಯತೆಯ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಆರ್‌ಬಿಐನ ಅಭಿಪ್ರಾಯವನ್ನು ಕೇಳಲಾಯಿತು. ಹೀಗಾಗಿ ಆರ್‌ಬಿಐ ಕಾಯಿದೆಯ ಸೆಕ್ಷನ್ 26 (2) ಅಡಿಯಲ್ಲಿನ ಶಿಫಾರಸು ಇದಾಗಿರಲಿಲ್ಲ. ಆರ್‌ಬಿಐ ಕಾಯಿದೆಯ any series (ಯಾವುದೇ ಶ್ರೇಣಿ) ಅಂದರೆ all series ( ಎಲ್ಲ ಶ್ರೇಣಿಗಳೂ) ಆಗುವುದಿಲ್ಲ. ಕೇಂದ್ರ ಸರ್ಕಾರ 2016ರ ನವೆಂಬರ್ 8ರಂದು ಗೆಜೆಟ್ ಅಧಿಸೂಚನೆ ಹೊರಡಿಸಿ ಕೈಗೊಂಡಿದ್ದ ನೋಟು ಅಮಾನ್ಯತೆಯ ಕ್ರಮ ಕಾನೂನು ಬಾಹಿರವಾಗಿದೆ. ಆದರೆ ಈ ಹಂತದಲ್ಲಿ ಯಥಾಸ್ಥಿತಿಯನ್ನು ತರಲು ಸಾಧ್ಯವಿಲ್ಲ. ಯಾವ ಬಗೆಯ ಪರಿಹಾರವನ್ನು ನೀಡಬಹುದು? ಪರಿಹಾರ ನೀಡಬೇಕಾದ ಅಗತ್ಯ ಇದೆ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ಹೇಳಿದ್ದಾರೆ.